ADVERTISEMENT

ಪದಕೋಶಲಿ 18 ಸಾವಿರ ಪದಗ ಒಳೊ...ನೀವ್‌ಗೆ ಗೊತ್ತುಟಾ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಪ್ರಕಟಿಸಿದ ಪದಕೋಶ

ಹರ್ಷವರ್ಧನ ಪಿ.ಆರ್.
Published 24 ಸೆಪ್ಟೆಂಬರ್ 2022, 19:30 IST
Last Updated 24 ಸೆಪ್ಟೆಂಬರ್ 2022, 19:30 IST
ಅರೆಭಾಷೆ ಪದಕೋಶ
ಅರೆಭಾಷೆ ಪದಕೋಶ   

ಮಂಗಳೂರು: ‘ಕನ್ನಡ ಭಾಷೆಯನ್ನು ಅರೆದು ನಯಗೊಳಿಸಿದ ಭಾಷೆ’ ಎಂದೇ ಬಣ್ಣಿಸಲ್ಪಟ್ಟ, ಆಡುಮಾತು ಹಾಗೂ ಆಚರಣೆಯಲ್ಲಿ ಹಾಸು ಹೊಕ್ಕಿರುವ ‘ಅರೆಭಾಷೆ’ಯ ಪದಕೋಶದಲ್ಲಿ 18 ಸಾವಿರ ಪದಗಳನ್ನು ದಾಖಲಿಸಲಾಗಿದೆ.

ದಕ್ಷಿಣ ಕನ್ನಡ, ಕೊಡಗು ಮತ್ತು ಕಾಸರಗೋಡು ವ್ಯಾಪ್ತಿಯಲ್ಲಿ ಅರೆಭಾಷೆ ಬಳಕೆಯಲ್ಲಿದ್ದು, ದ್ರಾವಿಡ ಭಾಷೆಗಳ ಪರಿವಾರಕ್ಕೆ ಸೇರಿದೆ ಎಂಬುದನ್ನು ಭಾಷಾ ವಿಜ್ಞಾನಿಗಳು ದಾಖಲಿಸಿದ್ದಾರೆ. ಈ ಅರೆಭಾಷಿಕ ಪದಗಳು ಜನರ ಮಾತುಕತೆಗಳು ಅಳಿವಿನಂಚಿನಲ್ಲಿವೆ. ಅಂತಹ ಪದಗಳನ್ನು ಸಂಗ್ರಹಿಸಿ ಅವುಗಳ ಮೂಲ, ಪದನಿಷ್ಪತ್ತಿ, ಸಮಾನಾರ್ಥಗಳು ಮತ್ತು ಜ್ಞಾತಿ ಪದಗಳನ್ನು ನೀಡುವ ಕಾರ್ಯವನ್ನು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಾಡಿದೆ ಎಂದು ಅಧ್ಯಕ್ಷರಾದ ಲಕ್ಷ್ಮೀ ನಾರಾಯಣ ಕಜೆಗದ್ದೆ ಉಲ್ಲೇಖಿಸಿದ್ದಾರೆ.

ತುಳುವಿನಂತೆ ಲೆಕ್ಷಿಕನ್‌ ಮಾದರಿಯಲ್ಲಿ ಅರೆಭಾಷೆ ಪದಕೋಶ(ಅರೆಭಾಷೆ, ಕನ್ನಡ, ಇಂಗ್ಲಿಷ್‌ ಡಿಕ್ಷನರಿ) ತಯಾರಿ ಮಾಡಬೇಕೆಂದು2019 ಅಕ್ಟೋಬರ್‌ನಲ್ಲಿ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ನೇತೃತ್ವದಲ್ಲಿ ಚರ್ಚೆಯಾಯಿತು. ಭಾಷಾ ವಿಜ್ಞಾನಿ ಕೋಡಿ ಕುಶಾಲಪ್ಪ ಗೌಡರ ಸಲಹೆಯಂತೆ ಅರೆಭಾಷೆ ವಿದ್ವಾಂಸರ ಸಭೆ ಮಾಡಿ ಸಂಶೋಧನಾ ಸಹಾಯಕರಿಂದ ಕ್ಷೇತ್ರಕಾರ್ಯ ಮಾಡಿಸಿ ಪದ ಸಂಗ್ರಹ ಮಾಡಲಾಯಿತು.

ADVERTISEMENT

ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಚೆ. ರಾಮಸ್ವಾಮಿ ಮಾರ್ಗದರ್ಶನದಲ್ಲಿ 2020 ನವೆಂಬರ್‌ನಲ್ಲಿ ಅರೆಭಾಷೆ ಪದಕೋಶ ರಚನೆಗೆ ಪೂರ್ವ ತಯಾರಿ ಸಭೆ ಮತ್ತು ಪದಕೋಶ ತಯಾರಿ ಕಮ್ಮಟವನ್ನು ನಡೆಸಲಾಯಿತು. ಈ ಕಮ್ಮಟದಲ್ಲಿ 8 ಮಂದಿ ಸಂಶೋಧನಾ ಸಹಾಯಕರು ಸತತ ನಾಲ್ಕು ವಾರಗಳಲ್ಲಿ 14 ಸಾವಿರ ಪದಗಳನ್ನು ಸಂಗ್ರಹಿಸಿಕೊಟ್ಟರು. ಈಗಾಗಲೇ ಪ್ರಕಟವಾದ ಕೆ.ಆರ್. ಗಂಗಾಧರ ಅವರ ಅರೆಭಾಷೆ, ಕನ್ನಡ, ಇಂಗ್ಲಿಷ್ ಶಬ್ದಕೋಶ, ಹಲವಾರು ಸಂಶೋಧನೆ ಮತ್ತು ಪ್ರಕಟಿತ ಪುಸ್ತಗಳಿಂದ ಪದಗಳನ್ನು ಸಂಪಾದಿಸಿ 18 ಸಾವಿರ ಪದಗಳನ್ನು ಅರೆಭಾಷೆ ಪದಕೋಶದಲ್ಲಿ ಅಧ್ಯಯನಕ್ಕೆ ಒಳಪಡಿಸಲಾಯಿತು.

ಪ್ರಸ್ತುತ ಅರೆಭಾಷೆ ಪದಕೋಶದಲ್ಲಿ 1,500 ಕ್ಕಿಂತ ಹೆಚ್ಚು ಗಾದೆಗಳು, 750ಕ್ಕಿಂತ ಹೆಚ್ಚು ಒಗಟು ನುಡಿಗಟ್ಟುಗಳು ಹಾಗೂ 18 ಸಾವಿರ ಪದಗಳಿಗೂ ಪ್ರಯೋಗ ವಾಕ್ಯಗಳನ್ನು ನೀಡಲಾಗಿದೆ. ಪದಕೋಶದಲ್ಲಿ 900ಕ್ಕಿಂತ ಹೆಚ್ಚು ಮನೆತನ, ಸಾವಿರಕ್ಕಿಂತ ಹೆಚ್ಚು ಸ್ಥಳನಾಮ ಹಾಗೂ 150 ಕ್ಕಿಂತ ಹೆಚ್ಚು ವ್ಯಕ್ತಿನಾಮಗಳು ಇವೆ.

ಈ ಪೈಕಿ 18 ಸಾವಿರದಷ್ಟು ಪದಗಳಿಗೆ ಪದ, ವ್ಯಾಕರಣ ವಿಶೇಷ, ಐಪಿಎ, ರೋಮನ್ ಇಟಾಲಿಕ್, ಸಾಂಸ್ಕೃತಿಕ ಪದ, ಕನ್ನಡ, ಇಂಗ್ಲಿಷ್ ಅರ್ಥ, ಗಾದೆ, ನುಡಿಗಟ್ಟು, ಒಗಟು, ವಾಕ್ಯ ಪ್ರಯೋಗ, ಪದಪ್ರಯೋಗ ಹೀಗೆ ಹಲವು ಭಾಗಗಳಲ್ಲಿ ಸಂಪಾದಿಸಲಾಯಿತು.

ಮುಖ್ಯ ಸಂಪಾದನಾ ಜವಾಬ್ದಾರಿಯನ್ನು ಡಾ. ವಿಶ್ವನಾಥ ಬದಿಕಾನ ವಹಿಸಿಕೊಂಡಿದ್ದರು. ಸಂಪಾದಕರಾಗಿ ಭರತೇಶ ಅಲಸಂಡೆಮಜಲು, ಇಂಗ್ಲಿಷ್‌ ಸಂಪಾದಕರಾಗಿ ಡಾ. ಎನ್. ಗಿರೀಶ್, ಅರೆಭಾಷೆ ಸಂಪಾದಕರಾಗಿ ಕೇಂಜನ ಮಮತಾ ಪ್ರಸಾದ್ ಜೊತೆಗಿದ್ದರು. ಪ್ರತಿ ತಿದ್ದಲು ಅಕಾಡೆಮಿ ಸದಸ್ಯರಾದ ಪುರುಷೋತ್ತಮ ಕಿರ್ಲಾಯ, ಕಿರಣ ಕುಂಬಲ್ಚೇರಿ, ಡಾ. ಪುರುಷೋತ್ತಮ ಕೆ.ವಿ. ಕರಂಗಲ್ಲು, ವಿದ್ವಾಂಸ ಪ್ರೊ. ಚೆ. ರಾಮಸ್ವಾಮಿ, ಭಾಷಾ ಪರಿಣತರಾದ ಬಾರಿಯಂಡ ಜೋಯಪ್ಪ, ಸೀತಾರಾಮ ಕೇವಳ, ಸರೋಜಾ ಎಂ.ಕೆ., ಮನೋಜ್‌ ಕುಡೆಕಲ್ಲು ಸಹಕರಿಸಿದರು.

ಪದ ಸಂಗ್ರಹಕ್ಕೆ ತಂತ್ರಜ್ಞಾನ ಸ್ಪರ್ಶ

ಪದಗಳನ್ನು ಕಾರ್ಡ್‌ನಲ್ಲಿ ಬರೆದು ಅಕಾರಾದಿಯಾಗಿ ಜೋಡಿಸಿ ಪದಕೋಶ ಮಾಡುವ ಕ್ರಮ. ಆದರೆ ಅರೆಭಾಷೆ ತಂಡವು ತಂತ್ರಜ್ಞಾನದ ಸ್ಪರ್ಶ ನೀಡಿತು. ಆನ್‌ಲೈನ್‌ ಮೂಲಕ ಅಪ್‌ಲೋಡ್‌ ಮಾಡಲಾಯಿತು. ಕ್ಷೇತ್ರ ಕಾರ್ಯ ಮಾಡುವವರು ಮೊಬೈಲ್‌ ತಂತ್ರಜ್ಞಾನ ಬಳಸಿ ಆಯಾ ದಿನ ಪದ ಸಂಗ್ರಹಿಸಿ, ಅಪ್‌ಲೋಡ್‌ ಮಾಡಿದರು. ಸಂಶೋಧನಾ ಸಹಾಯಕರು ಗೂಗಲ್‌ ಮೀಟ್‌ ಮೂಲಕ ಚರ್ಚಿಸಿದರು. ಹೀಗಾಗಿ ನಾಲ್ಕು ತಿಂಗಳ ಅವಧಿಯಲ್ಲಿ ಸುಮಾರು 30 ಸಾವಿರ ಪದ ಸಂಗ್ರಹವಾಯಿತು ಎನ್ನುತ್ತಾರೆ ಸಂಪಾದಕರಾದ ಭರತೇಶ್‌ ಅಲಸಂಡೆಮಜಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.