ಮಂಗಳೂರು: ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಮೂಡುಬಿದಿರೆ ಕ್ಷೇತ್ರದಲ್ಲಿ 2018ರ ವರೆಗೆ ಬಿಜೆಪಿ ಖಾತೆ ತೆರೆದಿರಲಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉಮಾನಾಥ ಕೋಟ್ಯಾನ್ ಮೊದಲ ಬಾರಿ ಕಮಲ ಅರಳಿಸಿದ್ದರು. ಈ ಬಾರಿ ಕ್ಷೇತ್ರವನ್ನು ಬಿಜೆಪಿಯ ತೆಕ್ಕೆಯಲ್ಲೇ ಉಳಿಸಿಕೊಳ್ಳುವ ತವಕದಲ್ಲಿರುವ ಅವರಿಗೆ ಕಾಂಗ್ರೆಸ್‌ನ ಯುವ ಅಭ್ಯರ್ಥಿ ಮಿಥುನ್ ರೈ ಪ್ರಬಲ ಸವಾಲೊಡ್ಡಿದ್ದಾರೆ.
ಉಮಾನಾಥ ಕೋಟ್ಯಾನ್ ದಾಖಲೆಯ 29,799 ಮತಗಳ ಅಂತರದಿಂದ ಗೆದ್ದು ಬೀಗಿದ್ದರು. ಹಿಂದುತ್ವ, ಮೋದಿ ಹವಾ, ಆಡಳಿತ ವಿರೋಧಿ ಅಲೆಗಳು ಜತೆಗೆ ವೈಯಕ್ತಿಕ ವರ್ಚಸ್ಸು ಅವರ ಗೆಲುವಿಗೆ ನೆರವಾಗಿತ್ತು. ಸತತ 4 ಬಾರಿ ಗೆದ್ದು ಸಚಿವರಾಗಿದ್ದ ಅಭಯಚಂದ್ರ ಜೈನ್ ಅವರನ್ನು ಮಣಿಸಿದ್ದರು.
ಜೆಡಿಎಸ್‌ನಿಂದ ಮಾಜಿ ಸಚಿವ ಅಮರನಾಥ ಶೆಟ್ಟಿ ಪುತ್ರಿ ಡಾ.ಅಮರಶ್ರೀ, ಆಮ್‌ಆದ್ಮಿ ಪಕ್ಷದಿಂದ ಉದ್ಯಮಿ ವಿಜಯನಾಥ ವಿಠಲ ಶೆಟ್ಟಿ, ಎಸ್‌ಡಿಪಿಐನಿಂದ ಅಲ್ಫೋನ್ಸ್ ಫ್ರಾಂಕೊ, ಕೆಆರ್‌ಎಸ್ ಪಕ್ಷದಿಂದ ದಯಾನಂದ, ಪಕ್ಷೇತರರಾಗಿ ದುರ್ಗಾಪ್ರಸಾದ್ ಮತ್ತು ಈಶ್ವರ ಎಸ್. ಮೂಡುಶೆಡ್ಡೆ ಸ್ಪರ್ಧೆಯಲ್ಲಿದ್ದಾರೆ. ಕ್ಷೇತ್ರದಲ್ಲಿ ಈ ಬಾರಿಯೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದ್ದು, ಉಳಿದವರು ಗಳಿಸುವ ಮತಗಳು ಸೋಲು- ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸುವ ಸಾಧ್ಯತೆ ಇದೆ.
ಐದು ವರ್ಷಗಳಲ್ಲಿ ತಮ್ಮ ಅಧಿಕಾರಯುತ ಆಡಳಿತ ಶೈಲಿ, ಸರ್ಕಾರಿ ಕಚೇರಿಗಳಿಗೆ ಆಗಾಗ ದಿಢೀರ್ ಭೇಟಿ ನೀಡಿ ಅಧಿಕಾರಿಗಳಿಗೆ ಚುರುಕು ಮುಟ್ಟಿಸುವ ಕೆಲಸ, ರಾಜ್ಯದಲ್ಲೇ ಅತ್ಯಂತ ಕಡಿಮೆ ಅವಧಿಯಲ್ಲಿ ಆಡಳಿತ ಸೌಧ ನಿರ್ಮಾಣ, ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ಎಲ್ಲ ಧರ್ಮದವರನ್ನು ಸಮಾನವಾಗಿ ಕಂಡಿರುವುದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳು, ಕ್ಷೇತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ.. ಇವು ಮತ್ತೆ ತನ್ನನ್ನು ಗೆಲುವಿನ ದಡ ಸೇರಿಸಬಹುದು ಎಂಬುದು ಕೋಟ್ಯಾನ್ ಅವರ ಲೆಕ್ಕಾಚಾರ.
ಕ್ಷೇತ್ರದ ಬಿಜೆಪಿ ಟಿಕೆಟ್‌ಗೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ಸುದರ್ಶನ ಮೂಡುಬಿದಿರೆ ಪ್ರಬಲ ಆಕಾಂಕ್ಷಿಯಾಗಿದ್ದರು. ಇಬ್ಬರು ಕೂಡ ಬಿಲ್ಲವ ಸಮುದಾಯದವರು. ಸುದರ್ಶನ ಅವರಿಗೆ ಟಿಕೆಟ್ ತಪ್ಪಿರುವುದರಿಂದ ಪಕ್ಷದೊಳಗಿನ ಒಳ ಏಟು ಸಾಧ್ಯತೆ ತಪ್ಪಿದ್ದಲ್ಲ. ಮತ್ತೊಂದೆಡೆ ಆಡಳಿತ ವಿರೋಧಿ ಅಲೆ, ಭ್ರಷ್ಟಾಚಾರ ಆರೋಪ, ಕೆಂಜಾರಿನ ಗೋಶಾಲೆ ಧ್ವಂಸ, ಬಳ್ಕುಂಜೆಯಲ್ಲಿ ಕೈಗಾರಿಕಾ ಪ್ರದೇಶಕ್ಕೆ ಭೂಸ್ವಾಧೀನ ಪ್ರಸ್ತಾವ, ಬೆಲೆ ಏರಿಕೆ ಮುಂತಾದ ವಿಚಾರಗಳ ಕುರಿತು ಸ್ಥಳೀಯವಾಗಿ ಅಸಮಾಧಾನವಿದೆ.
ಕ್ಷೇತ್ರದಲ್ಲಿ ಯುವಕರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಸ್ಪರ್ಧೆಯಿಂದ ಹಿಂದಕ್ಕೆ ಸರಿಯುವುದಾಗಿ ಹೇಳಿದ್ದ ಕಾಂಗ್ರೆಸ್‌ನ ಅಭಯಚಂದ್ರ ಜೈನ್, ಮಿಥುನ್ ರೈ ಅವರೇ ‘ಅಭ್ಯರ್ಥಿ’ ಎಂದೂ ಘೋಷಿಸಿದ್ದರು. ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಶೇಖರ ಕೋಟ್ಯಾನ್ ಮತ್ತಿತರರು ಕೂಡ ಟಿಕೆಟ್‌ಗೆ ಸ್ಪರ್ಧೆಯಲ್ಲಿದ್ದರೂ ಅಂತಿಮವಾಗಿ ಬಂಟ ಸಮುದಾಯದ ಯುವಕ ಮಿಥುನ್ ರೈಗೆ ‘ಕೈ’ ಟಿಕೆಟ್ ನೀಡಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಪ್ತವಲಯದಲ್ಲಿ ಗುರುತಿಸಿಕೊಂಡ ಮಿಥುನ್ ಈ ಸ್ಪರ್ಧೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ.
ಕಾಂಗ್ರೆಸ್ ಕೊಟ್ಟ ಐದು ಗ್ಯಾರಂಟಿಗಳು, ಬೆಲೆಯೇರಿಕೆ ಬಿಸಿ, ಆಡಳಿತ ವಿರೋಧಿ ಅಲೆಗಳು, ಕ್ಷೇತ್ರದ ಅಭಿವೃದ್ಧಿಯ ದೂರದೃಷ್ಟಿಯ ಯೋಜನೆ, ಕೋಮುಸೌಹಾರ್ದ ವಾತಾವರಣ ನಿರ್ಮಾಣ ಮುಂತಾದ ವಿಚಾರಗಳನ್ನು ಮುಂದಿಟ್ಟುಕೊಂಡು ಮಿಥುನ್ ರೈ ಅವರು ಬಿರುಸಿನ ಮತಯಾಚನೆಯಲ್ಲಿ ತೊಡಗಿದ್ದಾರೆ. ಅವರಿಗೆ ಮಾಜಿ ಸಚಿವ ಅಭಯಚಂದ್ರ ಜೈನ್ ಸಾಥ್ ನೀಡುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಸೋಲಿನ ಅನುಕಂಪವೂ ಈ ಚುನಾವಣೆಯಲ್ಲಿ ಮತವಾಗಿ ಪರಿವರ್ತನೆಯಾಗಬಹುದು ಎಂಬ ನಿರೀಕ್ಷೆ ಮಿಥುನ್ ರೈ ಅವರದು.
ಮಾಜಿ ಸಚಿವ ಅಮರನಾಥ ಶೆಟ್ಟಿ ಅವರ ನಿಧನದ ನಂತರ ನಡೆಯುವ ಮೊದಲ ಚುನಾವಣೆ ಇದಾಗಿದೆ. ಅವರ ಮಗಳು ಡಾ.ಅಮರಶ್ರೀ ಅಮರನಾಥ್ ಶೆಟ್ಟಿ ಇಲ್ಲಿ ಜೆಡಿಎಸ್ ಅಭ್ಯರ್ಥಿ. ಒಂದು ಕಾಲದಲ್ಲಿ ಜೆಡಿಎಸ್‌ಗೆ ಗಟ್ಟಿ ನೆಲೆಯಾಗಿದ್ದ ಈ ಕ್ಷೇತ್ರದಲ್ಲಿ ತಂದೆ ಮಾಡಿರುವ ಅಭಿವೃದ್ಧಿ ಕೆಲಸಗಳು, ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ಮಾಡಿರುವ ಜನಪ್ರಿಯ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಮತಬೇಟೆ ನಡೆಸುತ್ತಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್‌ಗೆ ಸಾಂಪ್ರದಾಯಿಕ ಮತಗಳಿದ್ದು, ಅದನ್ನು ಪಕ್ಷದಲ್ಲೇ ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.
ಮೂಡುಬಿದಿರೆ ಕ್ಷೇತ್ರದಲ್ಲಿ ಒಟ್ಟು 2,03,696 ಮತದಾರರಿದ್ದಾರೆ. ಬಿಲ್ಲವ ಸಮುದಾಯದ ಅತಿ ಹೆಚ್ಚು ಮತದಾರರಿದ್ದು, ನಂತರದಲ್ಲಿ ಮುಸ್ಲಿಂ, ಕ್ರೈಸ್ತ, ಜೈನ್, ಬಂಟ ಸಮುದಾಯದವರು ಮತಗಳಿವೆ. ಕಾಂಗ್ರೆಸ್- ಬಿಜೆಪಿಯಿಂದ ಯಾರು ಚುನಾವಣೆ ಸ್ಪರ್ಧಿಸಿದರೂ ಜಾತಿ ವಿಚಾರ ಮುನ್ನೆಲೆಗೆ ಬರುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.