ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಅವಕಾಶ ಸಿಗದ ಕಾರಣ ಅರುಣ್ ಕುಮಾರ್ ಪುತ್ತಿಲ ಬಂಡಾಯ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಗೆ ಮುನ್ನ ನಗರದಲ್ಲಿ ಮೆರವಣಿಗೆಯಲ್ಲಿ ಸಾಗಿಬರುವ ಮೂಲಕ ಶಕ್ತಿಪ್ರದರ್ಶನ ತೋರಿದರು. ಮೆರವಣಿಗೆಯಲ್ಲಿ ಜಯಘೋಷ ಮೊಳಗಿಸುತ್ತಾ ಹೆಜ್ಜೆ ಹಾಕಿದ ಸಾವಿರಾರು ಅಭಿಮಾನಿಗಳು ಪುತ್ತಿಲ ಅವರಿಗೆ ಬೆಂಬಲ ಘೋಷಿಸಿದರು.
ಇಲ್ಲಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ನಗರದ ಹೊರವಲಯದ ದರ್ಬೆಯಿಂದ ಮೆರವಣಿಗೆ ನಡೆಯಿತು. ಸಂತೋಷ್ ಶೆಟ್ಟಿ ಮತ್ತು ಲಕ್ಷ್ಮೀಶ ತಂತ್ರಿ ಅವರು ಶಂಖನಾದ ಮತ್ತು ಕಹಳೆ ಊದುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಮುಖ್ಯ ರಸ್ತೆಯಾಗಿ ಸಾಗಿದ ಮೆರವಣಿಗೆ ತಾಲ್ಲೂಕು ಆಡಳಿತ ಸೌಧದ ಬಳಿ ಸಮಾರೋಪಗೊಂಡಿತು. ಬಿಜೆಪಿ ಕಾರ್ಯಕರ್ತರು ಹಾಗೂ ಪುತ್ತಿಲ ಅವರ ಅಭಿಮಾನಿಗಳು ಸೇರಿದಂತೆ 5 ಸಾವಿರಕ್ಕೂ ಹೆಚ್ಚು ಮೆರವಣಿಗೆಯಲ್ಲಿ ಪಾಲ್ಗೊಂಡರು. ಪುತ್ತಿಲ ಅಭಿಮಾನಿಗಳು ಕೇಸರಿ ಶಾಲು ಬೀಸುವ ಮೂಲಕ ಪುತ್ತಿಲ ಅವರಿಗೆ ಬೆಂಬಲ ಸೂಚಿಸಿದರು.
ಬಿಜೆಪಿಗೆ ಶಕ್ತಿ ತುಂಬಲು ಸ್ಪರ್ಧೆ: ತಾಲ್ಲೂಕು ಆಡಳಿತ ಸೌಧದ ಎದುರು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಅರುಣ್ ಕುಮಾರ್ ಪುತ್ತಿಲ, ‘ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ್ತು ಬಿಜೆಪಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ತಾನು ಪಕ್ಷೇತರವಾಗಿ ಸ್ಪರ್ಧಿಸುತ್ತಿದ್ದೇನೆ. ಹಿಂದುತ್ವದ ರಕ್ಷಣೆ ಮತ್ತು ಕಾರ್ಯಕರ್ತರಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನನ್ನ ಸ್ಪರ್ಧೆ. ಇದು ನಾಮಪತ್ರ ಸಲ್ಲಿಕೆ ಕಾರ್ಯಕ್ರಮವಲ್ಲ, ಹಿಂದೂ ಸಮಾಜದ ವಿಜಯೋತ್ಸವವಾಗಿದೆ. ಕಟ್ಟ ಕಡೆಯ ವ್ಯಕ್ತಿಯ ಜತೆಗೂ ನಾವಿದ್ದೇವೆ ಎಂಬುದುನ್ನು ತೋರಿಸಿಕೊಡಬೇಕಾಗಿದೆ. ಅತೀ ಶೀಘ್ರವಾಗಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದ್ದೇವೆ’ ಎಂದರು.
‘ಆರ್‌ಎಸ್‌ಎಸ್‌ಗೆ 100 ವರ್ಷವಾಗುತ್ತಿರುವ ಈ ಸಂದರ್ಭದಲ್ಲಿ ಭಗವಾಧ್ವಜದ ಅಡಿಯಲ್ಲಿ ನಾವೆಲ್ಲರೂ ಒಟ್ಟಾಗಿದ್ದೇವೆ. ನಿಮ್ಮ ಮನೆಯ ಮಗನೆಂದು ನೀವು ನನ್ನನ್ನು ಸ್ವೀಕರಿಸಬೇಕು. ಹಿಂದುತ್ವದ ಅಡಿಯಲ್ಲಿ ಈ ಬಾರಿಯ ಚುನಾವಣೆಯಲ್ಲಿ ಗೆದ್ದು ಸಮಾಜಕ್ಕೆ ತೋರಿಸಿಕೊಡೋಣ’ ಎಂದರು
ಚುನಾವಣಾಧಿಕಾರಿ ಕಚೇರಿಗೆ ತೆರಳಿ ಅವರು ನಾಮಪತ್ರ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.