ADVERTISEMENT

ಸ್ವ‍‍ಪಕ್ಷೀಯರಿಂದಲೇ ವಿರೋಧ; ಸಚಿವ ಅಂಗಾರಗೆ ಟಿಕೆಟ್‌ ‘ಗೆಲ್ಲುವ’ ಸವಾಲು!

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2023, 6:27 IST
Last Updated 9 ಏಪ್ರಿಲ್ 2023, 6:27 IST
ಎಸ್‌.ಅಂಗಾರ
ಎಸ್‌.ಅಂಗಾರ   

ಮಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಸತತ ಆರು ಬಾರಿ ಗೆದ್ದಿರುವ ಸುಳ್ಯ ಮೀಸಲು ಕ್ಷೇತ್ರದ ಶಾಸಕ, ಮೀನುಗಾರಿಕಾ ಸಚಿವ ಎಸ್‌.ಅಂಗಾರ ‘ಏಳನೇ ಗೆಲುವಿನ’ ನಿರೀಕ್ಷೆಯಲ್ಲಿದ್ದಾರೆ. ಆದರೆ, ಅವರಿಗೆ ಈ ಬಾರಿ ‘ಟಿಕೆಟ್‌ ಗೆಲ್ಲುವುದೇ’ (ಗಿಟ್ಟಿಸಿಕೊಳ್ಳುವುದು) ಸವಾಲಾಗಿ ಪರಿಣಮಿಸಿದೆ.

ಅಂಗಾರ ಅವರ ವ್ಯಕ್ತಿತ್ವದ ಬಗ್ಗೆ ಕ್ಷೇತ್ರದ ಮತದಾರರಿಗೆ ಅಸಮಾಧಾನ ವೇನಿಲ್ಲ. ಸಚಿವರಾದ ಬಳಿಕವೂ ಅಧಿಕಾರದ ದರ್ಪವನ್ನು ಹತ್ತಿರ ಸುಳಿಯಗೊಡದ ಸಜ್ಜನಿಕೆಯ ವ್ಯಕ್ತಿ ಎಂಬ ಒಳ್ಳೆಯ ಮಾತುಗಳನ್ನೇ ಬಿಜೆಪಿ ಕಾರ್ಯಕರ್ತರೂ ಹೇಳಿಕೊಳ್ಳುತ್ತಾರೆ.

ಆದರೂ ಪಕ್ಷದ ಸ್ಥಳೀಯ ಕೆಲವು ಮುಖಂಡರಿಗೆ ಅಂಗಾರ ಅಪಥ್ಯವಾಗಿ ಬಿಟ್ಟಿದ್ದಾರೆ. ಹಾಗಾಗಿ ಈ ಬಾರಿ ‘ಅಭ್ಯರ್ಥಿಯನ್ನು ಬದಲಾಯಿಸಬೇಕು’ ಎಂದು ಬಿಜೆಪಿ ಸ್ಥಳೀಯ ಮುಖಂಡರ ಒಂದು ಗುಂಪು ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರಲು ಶುರು ಮಾಡಿದೆ. ಈ ಮುನಿಸಿನ ಪರಿಣಾಮವಾಗಿಯೇ ಚುನಾವಣೆಗೆ ಸಾಕಷ್ಟು ಮುನ್ನವೇ ‘ಚುನಾವಣಾ ಬಹಿಷ್ಕಾರ’ದ ಬ್ಯಾನರ್‌ಗಳು ಕ್ಷೇತ್ರದ ಹಲವೆಡೆ ಕಾಣಿಸಿಕೊಂಡಿವೆ.

ADVERTISEMENT

ಅಂಗಾರ ಆರು ಬಾರಿ ಶಾಸಕರಾದರೂ ಸುಳ್ಯ ಕ್ಷೇತ್ರದಲ್ಲಿ ಗಮನ ಸೆಳೆಯುವ ಅಭಿವೃದ್ಧಿ ಕಾರ್ಯ ಮಾಡಿಸಿಲ್ಲ. ಕ್ಷೇತ್ರದ ಹಲವಾರು ಊರುಗಳಿಗೆ ಸುಸಜ್ಜಿತ ರಸ್ತೆಯೂ ಇಲ್ಲ ಎಂದು ಬಿಜೆಪಿಯದ್ದೇ ಒಂದು ಬಣ ದೂರುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಅವರ ವಿರುದ್ಧ ಸಂದೇಶಗಳನ್ನು ಹಂಚಿಕೊಳ್ಳುತ್ತಿದೆ.

‘ಅರ್ಜಿ ಕೊಟ್ಟ ಕೂಡಲೆ ಕೆಲಸ ಆಗುವುದಿಲ್ಲ’ ಎಂದು ತಮ್ಮನ್ನು ಭೇಟಿಯಾದ ಸಾರ್ವಜನಿಕರನ್ನು ಉದ್ದೇಶಿಸಿ ಅಂಗಾರ ಹೇಳಿದ್ದಾರೆ ಎನ್ನಲಾದ ವಿಡಿಯೊ ತುಣುಕನ್ನು ಮುಂದಿಟ್ಟುಕೊಂಡು ಟೀಕೆಯಲ್ಲಿ ತೊಡಗಿದೆ. ಕಾರ್ಯಕ್ರಮದ ಶಂಕು ಸ್ಥಾಪನೆಗೆ ಹೋದಾಗ ಅಂಗಾರ ಅವರಿದ್ದ ಜೀಪು ರಸ್ತೆಯಲ್ಲಿ ಹೂತು ಹೋಗಿ, ಅವರು ಕೆಲ ದೂರ ನಡೆದೇ ಹೋದ ವಿಡಿಯೊ ತುಣುಕೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಆದರೆ, ಈ ಪರ–ವಿರೋಧಗಳ ಲೆಕ್ಕಿಸದೇ ಅಂಗಾರ ಪ್ರಚಾರ ಕಾರ್ಯ ದಲ್ಲಿ ನಿರತರಾಗಿದ್ದಾರೆ. ಅವರು ಮಾತ್ರ ಈ ಸಲವೂ ತಮಗೇ ಟಿಕೆಟ್‌ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ.

‘ಕೆಲವರು ಅಪಪ್ರಚಾರ ನಡೆಸುತ್ತಿದ್ದಾರೆ. ಸಣ್ಣ ಪುಟ್ಟ ವಿಚಾರಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದೇನೆ. ಪಕ್ಷ ಈ ಸಲವೂ ಟಿಕೆಟ್‌ ನೀಡುತ್ತದೆ ಎಂಬ ವಿಶ್ವಾಸ ಇದೆ’ ಎಂದು ಎಸ್‌.ಅಂಗಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘1989ರಲ್ಲಿ ಕಾಂಗ್ರೆಸ್‌ನ ಕೆ.ಕುಶಲ ವಿರುದ್ಧ ಸ್ಪರ್ಧಿಸಿ ಸೋಲು ಕಂಡಿದ್ದ ಅಂಗಾರ, 1994ರಲ್ಲಿ ಮೊದಲ ಸಲ ಗೆಲುವಿನ ನಗೆ ಬೀರಿದ್ದರು. ಆ ಬಳಿಕ ಒಮ್ಮೆಯೂ ಸೋತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.