ಮಂಗಳೂರು: ‘ಅಭಿವೃದ್ಧಿ ಆಗಿದೆ ಎಂದು ಯಾರೋ ಹೇಳಿದರೆ ಒಪ್ಪಿಕೊಳ್ಳಬಹುದೇ? ‘ಅಭಿವೃದ್ಧಿ’ ಎಂಬುದಕ್ಕೆ ಒಂದು ಮಾನದಂಡ ನಿಗದಿ ಮಾಡಿದ್ದರೆ, ಆಗಿದೆಯೋ ಇಲ್ಲವೋ ಎಂದು ಹೇಳಬಹುದು. ಕಾಂಕ್ರೀಟ್ ರಸ್ತೆ– ಚರಂಡಿ, ಉದ್ಯಾನ ನವೀಕರಣ, ದೊಡ್ಡ ದೊಡ್ಡ ಕಟ್ಟಡ ನಿರ್ಮಿಸುವುದನ್ನೇ ಅಭಿವೃದ್ಧಿ ಎನ್ನುವುದಾದರೆ, ಮಂಗಳೂರಿನಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ನಗರವೊಂದಕ್ಕೆ ಇವೆಲ್ಲವೂ ಬೇಕು ಎಂಬುದು ನಿಜವಾದರೂ, ಇವುಗಳೇ ಅಭಿವೃದ್ಧಿಗೆ ಮಾನದಂಡ ಎಂದು ವಾದಿಸಿದರೆ ನಾನು ಒಪ್ಪಲಾರೆ...’ ಎಂದು ರಾಜಕಾರಣಿಗಳ ಬಗ್ಗೆ (ಜೊತೆಗೆ ಮಾಧ್ಯಮಗಳ ಬಗ್ಗೆಯೂ) ಸ್ವಲ್ಪ ಸಿಟ್ಟಿನಿಂದಲೇ ಮಾತಿಗಿಳಿದದ್ದು ಮಂಗಳೂರು ಹೊರವಲಯ ಮರೋಳಿಯ ರವಿನಾರಾಯಣ.
ಕೆಲವು ವರ್ಷಗಳ ಕಾಲ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ದುಡಿದು, ಈಚಿನ ಐದಾರು ವರ್ಷಗಳಿಂದ ಮತ್ತೆ ಮಂಗಳೂರಿಗೆ ಬಂದು ನೆಲೆಸಿರುವ ರವಿನಾರಾಯಣ ಅವರು, ‘ಮಂಗಳೂರನ್ನು ಬೆಂಗಳೂರು ಅಥವಾ ಮುಂಬೈ ಮಾಡಲು ಹೊರಟರೆ ಹೇಗೆ’ ಎಂದು ಪ್ರಶ್ನಿಸುತ್ತಾರೆ.
‘ರಸ್ತೆ ಮಾಡಿದ್ದೇವೆ, ಮೂರ್ತಿ ಸ್ಥಾಪಿಸಿದ್ದೇವೆ, ಉದ್ಯಾನ ಮಾಡಿದ್ದೇವೆ, ನಮ್ಮ ಕಾಲದಲ್ಲಿ ಅದಾಗಿದೆ– ಇದಾಗಿದೆ, ಮಂದಿರ– ಮಸೀದಿಯನ್ನು ಜೋರ್ಣೋದ್ಧಾರ ಮಾಡಿದ್ದೇವೆ ಎಂದು ಎಲ್ಲಾ ಪಕ್ಷಗಳೂ ವಾದಿಸುತ್ತವೆ. ಜನರನ್ನು ಕೇಳಿನೋಡಿ, ಅವರು ಇದನ್ನೆಲ್ಲ ಕೇಳಿದ್ದಾರೆಯೇ? ನೀವು ಅವನ್ನೆಲ್ಲ ಹೇರುತ್ತಿದ್ದೀರಿ. ಕುಡಿಯಲು ಶುದ್ಧ ನೀರು ಕೊಡಿ, ಓಡಾಡಲು ಒಳ್ಳೆಯ ಮತ್ತು ಸುರಕ್ಷಿತ ಸಾರಿಗೆ ವ್ಯವಸ್ಥೆ ಮಾಡಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡುವ ವ್ಯವಸ್ಥೆ ಮಾಡಿಕೊಡಿ, ರೋಗಿಗಳಿಗೆ ಕೈಗೆಟಕುವ ದರದಲ್ಲಿ ಚಿಕಿತ್ಸೆ ಲಭಿಸುವಂತೆ ಮಾಡಿ ಎಂದು ಜನರು ಕೇಳುತ್ತಾರೆ. ಅವೆಲ್ಲವೂ ಆಗಿವೆಯೇ’ ಎಂಬುದು ರವಿ ಅವರ ಪ್ರಶ್ನೆ.
ಈ ಪ್ರಶ್ನೆಯನ್ನು ರವಿನಾರಾಯಣ ಮಾತ್ರವಲ್ಲ ನಗರದ ಅನೇಕರು ಕೇಳಿದ್ದಾರೆ. ‘ಆಡಳಿತ ಪಕ್ಷದ ಬೆಂಬಲಿಗರು’ ಎಂದು ಹೇಳಿಕೊಂಡ ಕೆಲವರಲ್ಲೂ ಈ ಪ್ರಶ್ನೆಗಳಿಗೆ ಉತ್ತರವಿಲ್ಲ. ಬದಲಿಗೆ ‘ಸ್ಮಾರ್ಟ್ ಸಿಟಿ ಯೋಜನೆ ಈಗಷ್ಟೇ ಜಾರಿಯಾಗಿದೆ. ನಮ್ಮ ಪಕ್ಷಕ್ಕೆ ಇನ್ನೊಂದು ಅವಕಾಶ ಕೊಟ್ಟುನೋಡಿ ಎಲ್ಲವನ್ನೂ ಸರಿಮಾಡುತ್ತೇವೆ’ ಎಂದು ಅವರು ವಾದಿಸುತ್ತಾರೆ. ಚುನಾವಣೆಯ ಸಂದರ್ಭವಾಗಿರುವುದರಿಂದಲೋ ಏನೋ ಅವರು ವಾಗ್ವಾದಕ್ಕೆ ಇಳಿಯುವುದಿಲ್ಲ.
‘ಮಂಗಳೂರು ಈಗ ಬೆಂಗಳೂರಿಗಿಂತ ದುಬಾರಿಯಾಗುತ್ತಿದೆ. ಎರಡು ಬೆಡ್‌ರೂಂ ಮನೆಗಳು (ಫ್ಲ್ಯಾಟ್) ₹50 ಲಕ್ಷದಿಂದ ₹75 ಲಕ್ಷಕ್ಕೆ ಮಾರಾಟವಾಗುತ್ತವೆ. ಸರ್ಕಾರದ ಸಂಸ್ಥೆಗಳು ಹಂಚಿಕೆ ಮಾಡುವ ನಿವೇಶನಗಳು ಖಾಸಗಿಯವರು ಅಭಿವೃದ್ಧಿಪಡಿಸುವ ನಿವೇಶನಗಳಿಗಿಂತ ದುಬಾರಿಯಾಗುತ್ತಿವೆ. ಶಿಕ್ಷಣ ಹಾಗೂ ಆರೋಗ್ಯ ಸೇವೆಯ ವಿಚಾರದಲ್ಲಿ ಪರಿಸ್ಥಿತಿ ಪೂರ್ಣ ಹದಗೆಟ್ಟಿಲ್ಲ ಎಂಬುದೊಂದೇ ಸಮಾಧಾನ. ಹೀಗಿರುವಾಗ ಅಭಿವೃದ್ಧಿ ಆಗಿದೆ ಎಂದು ಒಪ್ಪುವುದು ಹೇಗೆ? ಸರ್ಕಾರ ಯಾವ ಪಕ್ಷದ್ದೇ ಆಗಿರಲಿ, ಇಂಥ ಯೋಜನೆ, ಕಾಮಗಾರಿಗಳನ್ನೇ ಇಟ್ಟುಕೊಂಡು ‘ಅಭಿವೃದ್ಧಿ ಮಾಡಿದ್ದೇವೆ’ ಎಂದು ವಾದಿಸುತ್ತವೆ. ಇದನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ರವಿನಾರಾಯಣ ಮಾತಿಗೆ ವಿರಾಮ ಹಾಕಿದರು.
ಸಾಧಿಸಿದ್ದೇನು?
‘ಸ್ಮಾರ್ಟ್ ಸಿಟಿ ಯೋಜನೆ ಜಾರಿಯಾದ ಮೇಲೆ ನಗರದಲ್ಲಿ ಅನೇಕ ರಸ್ತೆಗಳಾಗಿವೆ, ವೃತ್ತಗಳು ಅಭಿವೃದ್ಧಿ ಕಾಣುತ್ತಿವೆ. ಅಲ್ಲಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ಮುಂದುವರಿದಿದೆ. ಮಂಗಳೂರಷ್ಟೇ ಅಲ್ಲ ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲಿ ಎಷ್ಟು ಮಳೆಯಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ. ಹಾಗಿದ್ದರೂ ಪ್ರತಿ ಮಳೆಗಾಲದಲ್ಲಿ ಕೆಲವು ಪ್ರದೇಶಗಳು ಜಲಾವೃತವಾಗುತ್ತವೆ. ರಾಜಕಾಲುವೆಯ ನೀರು ಉಕ್ಕಿ ರಸ್ತೆ ಮೆಲೆ ಹರಿಯುತ್ತದೆ, ಮನೆಗಳಿಗೆ ನೀರು ನುಗ್ಗುತ್ತದೆ. ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆಯನ್ನೂ ಮಾಡಿಲ್ಲ ಎಂದಾದರೆ ‘ಸ್ಮಾರ್ಟ್ ಸಿಟಿ’ ಹೆಸರಿನಲ್ಲಿ ನಾವು ಮಾಡಿದ್ದೇನು’ ಎಂದು ಪ್ರಶ್ನಿಸುತ್ತಾರೆ ನಿವೃತ್ತ ಉಪನ್ಯಾಸಕ, ಆರ್ಥಿಕ ತಜ್ಞ ಡಾ.ಜಿ.ವಿ. ಜೋಶಿ.
ನಗರದಲ್ಲಿ ಒಳ್ಳೆಯ ಶಿಕ್ಷಣ ಸಂಸ್ಥೆಗಳಿವೆ. ಜಪ್ರತಿನಿಧಿಗಳನ್ನು ಪ್ರಶ್ನಿಸುವ ಮತ್ತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಶಿಕ್ಷಣ ಸಂಸ್ಥೆಗಳು ಎನ್‌ಎಸ್‌ಎಸ್ ನಂಥ ಯೋಜನೆಯ ಮೂಲಕ ಮಾಡಬಹುದು. ಪರಿಸರವಾದ ಅಥವಾ ಇನ್ಯಾವುದೋ ವಿಚಾರ ಮುನ್ನೆಲೆಗೆ ತಂದು ಯೋಜನೆಗಳಿಗೆ ಅಡ್ಡಿಪಡಿಸುವುದಲ್ಲ, ಸಮಸ್ಯೆಯನ್ನು ನಿವಾರಿಸುವುದು ಹೇಗೆ ಎಂಬ ಬಗ್ಗೆಯೂ ಚಿಂತನೆಗಳಾಗಬೇಕು ಎನ್ನುತಾರೆ ಜೋಶಿ.
ಅಭಿವೃದ್ಧಿ ಗೋಚರಿಸುತ್ತದೆ...
ಕಳೆದ ಕೆಲವು ವರ್ಷಗಳಲ್ಲಿ ನಗರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ದೊಡ್ಡ ಪಟ್ಟಿಯನ್ನೇ ಕೊಡಬಹುದು. ಬರಿಗಣ್ಣಿಗೆ ಕಾಣಿಸುವಷ್ಟು ಕಾಮಗಾರಿಗಳು ಆಗಿವೆ. ಅನೇಕ ಜನಸ್ನೇಹಿ ಯೋಜನೆಗಳು ಜಾರಿಯಾಗಿವೆ ಎಂಬುದನ್ನು ನಿರಾಕರಿಸುವಂತಿಲ್ಲ. ಆದರೆ ಇವುಗಳ ಜೊತೆಗೆ ಅಥವಾ ಇವೆಲ್ಲವುಗಳಿಗಿಂತ ಮೊದಲು ಜಾರಿಯಾಗಬೇಕಾದ ಕೆಲವು ಯೋಜನೆಗಳಿವೆ ಎನ್ನುತ್ತಾರೆ ನಗರವಾಸಿಗಳು.
ಜಿಲ್ಲೆಯಲ್ಲಿ ಯಾವುದಾದರೊಂದು ವರ್ಷ ವಾಡಿಕೆಗಿಂತ ಸ್ವಲ್ಪ ಕಡಿಮೆ ಮಳೆಯಾದರೆ ಕೆಲವು ಭಾಗಗಳಲ್ಲಿ ಕುಡಿಯುವ ನೀರಿಗೆ ಕೊರತೆಯಾಗುತ್ತದೆ. ನೀರು ಸರಬರಾಜಿಗೆ ಪೈಪ್‌ಲೈನ್ ಅಳವಡಿಸಲು ಸಾವಿರಾರು ಕೋಟಿ ರೂಪಾಯಿಯ ಯೋಜನೆ ಜಾರಿಯಾಗುತ್ತಿದೆ, ಆದರೆ ನೀರು ತರುವುದು ಎಲ್ಲಿಂದ?
ರಾಜ್ಯದ ಪ್ರಮುಖ ಧಾರ್ಮಿಕ ಪ್ರವಾಸೋದ್ಯಮ ಕೇಂದ್ರಗಳಲ್ಲಿ ಮಂಗಳೂರು (ಒಟ್ಟಾರೆ ದಕ್ಷಿಣ ಕನ್ನಡ ಜಿಲ್ಲೆ)ಸಹ ಒಂದು. ಆದರೆ ಬೇರೆ ನಗರಗಳಿಂದ ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳಿಗೆ ಹೋಗಲು ಅಥವಾ ಕಡಲ ಕಿನಾರೆಗೆ ಭೇಟಿನೀಡಲು ಬರುವ ಪ್ರವಾಸಿಗರು ಇಲ್ಲಿ ಓಡಾಡಬೇಕಾದರೆ ಸ್ಥಳೀಯರ ಅಥವಾ ಗೂಗಲ್ ಮ್ಯಾಪ್ ನೆರವು ಪಡೆಯಬೇಕಾಗುತ್ತದೆ. ನಗರದೊಳಗೆ ಎಲ್ಲೂ ದೊಡ್ಡ ಗಾತ್ರದ ಮಾರ್ಗಸೂಚಿ ಫಲಕಗಳಿಲ್ಲ.
ನಗರದಲ್ಲಿ ಸಕಲ ಸೌಲಭ್ಯಗಳನ್ನು ಹೊಂದಿರುವ, ಜಿಲ್ಲಾಧಿಕಾರಿ ಕಚೇರಿ ನಿರ್ಮಿಸಲಾಗುತ್ತಿದೆ ಎಂದು ಹಲವು ವರ್ಷಗಳಿಂದ ಹೇಳಲಾಗುತ್ತಿದೆ. ಕಟ್ಟಡ ಬಹುತೇಕ ಪೂರ್ಣಗೊಂಡಿದೆ ಎಂದೂ ಹೇಳುತ್ತಾರೆ, ಆದರೆ ಕಾಮಗಾರಿ ಪೂರ್ಣಗೊಂಡು ಕಚೇರಿ ಸ್ಥಳಾಂತರವಾಗುವುದು ಯಾವಾಗ ಎಂಬ ಪ್ರಶ್ನೆಗೆ ಉತ್ತರ ಯಾರು ಕೊಡಬೇಕು?
ಮೀನುಗಾರಿಕೆಯು ಈ ಜಿಲ್ಲೆಯ ಪ್ರಮುಖ ಉದ್ಯಮ. ಇಲ್ಲಿನ ಬಂದರು ಅಭಿವೃದ್ಧಿಪಡಿಸಬೇಕು ಎಂಬುದು ಸಾವಿರಾರು ಸಂಖ್ಯೆಯ ಮೀನುಗಾರರ ಹಲವು ವರ್ಷಗಳ ಬೇಡಿಕೆ. ಬಂದರು ಅಭಿವೃದ್ಧಿಗೆ ಯೋಜನೆ ರೂಪುಗೊಂಡಿದ್ದರೂ ಅದರು ಕಾರ್ಯರೂಪಕ್ಕೆ ಬರುತ್ತಿಲ್ಲ.
ನಗರದ ಪಂಪ್‌ವೆಲ್ ಬಳಿ ಹೊಸ ಬಸ್ ನಿಲ್ದಾಣ ನಿರ್ಮಿಸುವ ಯೋಜನೆ ರೂಪುಗೊಂಡು ವರ್ಷಗಳೇ ಕಳೆದಿವೆ. ಅದಕ್ಕೆ ಭೂಮಿಯನ್ನೂ ಕಾಯ್ದಿರಿಸಲಾಗಿದೆ. ಆದರೆ ಆ ಯೋಜನೆಯೂ ಜಾರಿಯಾಗುತ್ತಿಲ್ಲ.
ನಂತೂರು ವೃತ್ತದಲ್ಲಿ ಮೆಲ್ಸೇತುವೆ ನಿರ್ಮಿಸಬೇಕು ಎಂಬುದು ನಗರದ ಜನರ ಬಹು ವರ್ಷಗಳ ಬೇಡಿಕೆ. ಯೋಜನೆ ಸಿದ್ಧವಾಗಿದೆ ಎಂದು ಅಧಿಕಾರಿಗಳು ಜನಪ್ರತಿನಿಧಿಗಳು ಹೇಳುತ್ತಾರೆ. ಆದರೆ ಕಾಮಗಾರಿ ಆರಂಭದ ಲಕ್ಷಣ ಕಾಣಿಸುತ್ತಿಲ್ಲ.
ಇವೆಲ್ಲವೂ ಅಗತ್ಯವಾಗಿ ಆಗಬೇಕಿರುವ ಕೆಲಸಗಳು. ಅಷ್ಟೇ ಅಲ್ಲ ಇವು ಅಭಿವೃದ್ಧಿಯ ಮಾನದಂಡಗಳೂ ಆಗಿವೆ ಎನ್ನುತ್ತಾರೆ ನಗರವಾಸಿಗಳು.
***
ನಗರ ಸಾರಿಗೆ ಬೇಕು
‘ಮಂಗಳೂರಿನಲ್ಲಿ ರಸ್ತೆ ಅಪಘಾತದಲ್ಲಿ ಪ್ರತಿ ವರ್ಷ ಅದೆಷ್ಟು ಮಂದಿ ಸಾಯುತ್ತಾರೆ ಎಂಬುದನ್ನು ಗಮನಿಸಿದ್ದೀರಾ? ಶಾಲಾ ಕಾಲೇಜಿಗೆ ಹೋಗುವ ಮಕ್ಕಳು ಸತ್ತಾಗಲೂ ನಮ್ಮ ಕಣ್ಣಾಲಿಗಳು ಒದ್ದೆಯಾಗದಿದ್ದರೆ ಹೇಗೆ’ ಎಂದು ಪ್ರಶ್ನಿಸುತ್ತಾರೆ ನಗರದ ನಿವಾಸಿ, ಸಾಮಾಜಿಕ ಕಾರ್ಯಕರ್ತೆ ಪದ್ಮಾವತಿ ಶೆಟ್ಟಿ.
ಖಾಸಗಿ ಬಸ್ ಚಾಲಕರ ಕಾರ್ಯವೈಖರಿ ಬಗ್ಗೆ ಅವರಿಗೆ ವಿಪರೀತ ಬೇಸರವಿದೆ. ‘ಜನನಿಬಿಡ ರಸ್ತೆಗಳಲ್ಲೂ ವಿಪರೀತ ವೇಗದಲ್ಲಿ ಬರುತ್ತಾರೆ, ಹಾರನ್ ಎಂಬುದು ಮಕ್ಕಳ ಕೈಗೆ ಕೊಟ್ಟ ಆಟಿಕೆಯಂತಾಗಿದೆ. ಜನರು ಬಸ್ ಹತ್ತುವಾಗ ಅಥವಾ ಇಳಿಯುತ್ತಿರುವಾಗಲೇ ಮುಂದೆ ಸಾಗುತ್ತಾರೆ. ಆಯ ತಪ್ಪಿದರೆ ಪ್ರಯಾಣಿಕರು ಬಸ್ ಅಡಿ ಬೀಳಬೇಕಾಗುತ್ತದೆ. ಜಗಳ ಎಂಬುದು ದಿನನಿತ್ಯ ಎಂಬಂತಾಗಿದೆ. ನಾನೂ ಅನೇಕ ಬಾರಿ ಅವರ ಜತೆ ವಾಗ್ವಾದ ನಡೆಸಿದ್ದೇನೆ’ ಎಂದು ಅವರು ಬೇಸರಿಸುತ್ತಾರೆ.
ಬೇರೆ ನಗರಗಳಲ್ಲಿ ಇರುವಂತೆ ಕೆಎಸ್‌ಆರ್‌ಟಿಸಿಯವರೇ ನಗರ ಸಾರಿಗೆಯನ್ನು ಏಕೆ ಆರಂಭಿಸಬಾರದು. ಬೇರೆ ನಗರಗಳಲ್ಲಿ ಜೆನರ್ಮ್ ಯೋಜನೆಯಡಿ ಬಸ್‌ಗಳನ್ನು ಖರೀದಿಸಿದ್ದಾರೆ. ಮಂಗಳೂರಿನಲ್ಲಿ ಯಾಕೆ ಅದು ಸಾಧ್ಯವಾಗುತ್ತಿಲ್ಲ ಎಂದು ನಗರದ ಜನರು ಪ್ರಶ್ನಿಸುತ್ತಾರೆ.
***
ದುಬಾರಿ ಬೆಲೆ ತೆತ್ತಿದ್ದೇವೆ
ಅಭಿವೃದ್ಧಿ ಆಗಿದೆ ಎಂದು ಒಪ್ಪಿಕೊಳ್ಳೋಣ, ಆದರೆ ಅದಕ್ಕೆ ನಾವು ತೆತ್ತ ಬೆಲೆ ಎಷ್ಟು ಎಂಬುದನ್ನು ಲೆಕ್ಕ ಹಾಕಿದ್ದೇವೆಯೇ ಎಂದು ಸ್ವತಃ ಉದ್ಯಮಿಯಾಗಿರುವ ಹಿರಿಯರೊಬ್ಬರು ಪ್ರಶ್ನಿಸುತ್ತಾರೆ.
ಹೆಸರು ಬಹಿರಂಗಪಡಿಸಬಾರದೆಂಬ ಷರತ್ತಿನೊಂದಿಗೆ ‘ಪ್ರಜಾವಾಣಿ’ ಜೊತೆ ಮಾತಿಗಿಳಿದ ಅವರು, ‘ನಗರದ ಬಗಲಲ್ಲೇ ಹರಿಯುತ್ತಿರುವ ಫಲ್ಗುಣಿ ನದಿಯ ನೀರು ಜಲಚರಗಳಿಗೂ ಯೋಗ್ಯವಲ್ಲದಷ್ಟು ಮಲಿನಗೊಂಡಿರುವುದು, ಏಪ್ರಿಲ್ ಸಮೀಪಿಸುತ್ತಿದ್ದಂತೆ ನೇತ್ರಾವತಿ ನದಿ ಬತ್ತುವುದು, ಪಚ್ಚನಾಡಿಯಲ್ಲಿ ಕಸದ ರಾಶಿ ಹಲವು ಕುಟುಂಬಗಳ ಬದುಕನ್ನು ಕಸಿದುಕೊಂಡಿರುವುದು, ವರ್ಷದಿಂದ ವರ್ಷಕ್ಕೆ ನಗರದ ತಾಪಮಾನದಲ್ಲಿ ಏರಿಕೆಯಾಗುತ್ತಿರುವುದು, ಮೀನುಗಳ ಸಂತತಿ ಇಳಿಕೆಯಾಗಿರುವುದು... ಇವೆಲ್ಲವೂ ನಾವು ಅಭಿವೃದ್ಧಿಗೆ ತೆತ್ತ ಬೆಲೆಯಲ್ಲವೇ’ ಎಂದು ಪ್ರಶ್ನಿಸಿದರು.
ನಮ್ಮ ಪರಿಸರಕ್ಕೆ ಹೊಂದಿಕೆಯಾಗದಂಥ ಉದ್ಯಮಗಳನ್ನು ತಂದು ನಗರದ ಮೇಲೆ ಹೇರಿದ್ದೇವೆ. ಇನ್ನಷ್ಟು ಉದ್ದಿಮೆಗಳನ್ನು ತರುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ನಮ್ಮ ಜಿಲ್ಲೆಯ ನಿಜವಾದ ಶಕ್ತಿಯನ್ನು ಅರಿಯುವ ಪ್ರಯತ್ನ ಆಗಿಲ್ಲ. ಆದ್ದರಿಂದ ಇಲ್ಲಿಯ ಯುವಕರು ಮುಂಬೈ ಬೆಂಗಳೂರಿಗೆ ಹೋಗಬೇಕಾಗಿ ಬಂದರೆ, ಯುಪಿ, ಬಿಹಾರದ ಜನರು ಬಂದು ಇಲ್ಲಿ ಕೆಲಸ ಮಾಡುವಂತಾಗಿದೆ. ನಮ್ಮ ಶಕ್ತಿಯನ್ನು ಅರ್ಥ ಮಾಡಿಕೊಂಡು, ಪರಿಸರಕ್ಕೆ ಹೊಂದುವಂಥ ಉದ್ಯಮಗಳು ಸ್ಥಾಪನೆಯಾದರೆ ಅಭಿವೃದ್ಧಿಯನ್ನು ‘ಸುಸ್ಥಿರ’ ಎನ್ನಬಹುದೇ ವಿನಾ ಈಗ ನಡೆಯುತ್ತಿರುವುದು ಅಲ್ಲ ಎಂಬುದು ಅವರ ನಿಲುವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.