ADVERTISEMENT

ಉದ್ಯಮಶೀಲತೆಯಲ್ಲಿ ರಾಜ್ಯಕ್ಕೆ ದೇಶದಲ್ಲಿ ಮೊದಲ ಸ್ಥಾನ: ಸಂಸದ ನಳಿನ್‌ಕುಮಾರ್ ಕಟೀಲ್

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2021, 8:23 IST
Last Updated 21 ಮಾರ್ಚ್ 2021, 8:23 IST
ಕರ್ನಾಟಕ ಕೋಸ್ಟ್‌ಲೈನ್ ಬ್ಯುಸಿನೆಸ್ ಕಾನ್‌ಕ್ಲೇವ್‌
ಕರ್ನಾಟಕ ಕೋಸ್ಟ್‌ಲೈನ್ ಬ್ಯುಸಿನೆಸ್ ಕಾನ್‌ಕ್ಲೇವ್‌   

ಮಂಗಳೂರು: ಉದ್ಯಮಶೀಲತೆ ಪ್ರಗತಿಯಲ್ಲಿ ಕರ್ನಾಟಕವು ದೇಶದಲ್ಲಿ ಪ್ರಥಮ ಸ್ಥಾನ‌ ಪಡೆದಿದೆ. ಉದ್ಯಮಶೀಲತೆಯಲ್ಲಿ ಬೆಂಗಳೂರು ಅಷ್ಟೇ ಅಲ್ಲ ಮಂಗಳೂರು ಕೂಡ ರಾಜಧಾನಿ ಮಟ್ಟದಲ್ಲಿ ಬೆಳವಣಿಗೆ ಸಾಧಿಸಬೇಕಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಬ್ಯಾಂಕಿಂಗ್, ವೈದ್ಯಕೀಯ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ತೋರಿಸಿದೆ. ಅಲ್ಲದೆ, ಹೊಸ‌ ಮಾನವ ಸಂಪನ್ಮೂಲ ಹೆಚ್ಚಿದೆ. ಉದ್ಯಮ ಸ್ಥಾಪನೆಗೆ ಮಂಗಳೂರಲ್ಲಿ ವಿಪುಲ ಅವಕಾಶಗಳಿವೆ. ನಿತಿನ್ ಗಡ್ಕರಿ ಸಹಕಾರದಲ್ಲಿ ಮಂಗಳೂರು-ಬೆಂಗಳೂರು ಚತುಷ್ಪಥ ಟೆಂಡರ್ ಆಗಿದ್ದು, ಎರಡು ವರ್ಷದಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಕಟೀಲ್ ತಿಳಿಸಿದ್ದಾರೆ.

ನಗರದ ಟಿಎಂಎ ಪೈ ಕನ್ವೆನ್ಶನ್ ಸಭಾಂಗಣದಲ್ಲಿ ಫಿಕ್ಕಿಯಿಂದ ಆಯೋಜಿಸಲಾದ 'ಕರ್ನಾಟಕ ಕೋಸ್ಟ್‌ಲೈನ್ ಬ್ಯುಸಿನೆಸ್ ಕಾನ್‌ಕ್ಲೇವ್‌ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉದ್ಯಮಕ್ಕೆ ಲ್ಯಾಂಡ್ ಬ್ಯಾಂಕ್ ಅಗತ್ಯವಿದೆ. ಜಿಲ್ಲಾಧಿಕಾರಿ ಸಹಕಾರದಲ್ಲಿ 2000 ಎಕರೆ ಭೂಮಿ ಗುರುತಿಸುವ ಕಾರ್ಯ ನಡೆಯುತ್ತಿದೆ ಎಂದಿದ್ದಾರೆ.

ADVERTISEMENT

ಮಂಗಳೂರಿನಲ್ಲಿ ಧಾರ್ಮಿಕ ಪ್ರವಾಸೋದ್ಯಮ, ಸುಂದರ ದೇವಸ್ಥಾನಗಳಿವೆ. ಸಮುದ್ರದ ತಡಗಳಿದ್ದು, ಹೊಟೆಲ್ ರೆಸಾರ್ಟ್ ಉದ್ಯಮ, ವೈದ್ಯಕೀಯ ಪ್ರವಾಸೋದ್ಯಮ ಬೆಳೆಸಲು ಹಲವು ವಿಪುಲ ಅವಕಾಶಗಳಿವೆ. ಆಟೊಮೊಬೈಲ್, ಫುಡ್, ಪೆಟ್ರೋಲಿಯಂ ಯೋಜನೆಗಳನ್ನು ಕೈಗಾರಿಕೆ ಸಚಿವರು ಕೊಟ್ಟಲ್ಲಿ ದ.ಕ. ಸಮರ್ಥವಾಗಿ ನಿರ್ವಹಿಸಲಿದೆ ಎಂದರು.

ಫಿಕ್ಕಿ ಕರ್ನಾಟಕ ಅಧ್ಯಕ್ಷ ಉಲ್ಲಾಸ ಕಾಮತ್ ಮಾತನಾಡಿ, ದೇಶದ ಆರ್ಥಿಕತೆಯಲ್ಲಿ ರಾಜ್ಯದ ಕೊಡುಗೆ ಅಧಿಕ. ದೇಶದಲ್ಲಿ ಜಿಎಸ್‌ಟಿ ಸಂಗ್ರಹಿಸುವಲ್ಲಿ ರಾಜ್ಯ ಎರಡನೇ ಸ್ಥಾನ ಪಡೆದಿದೆ. ಇದರಲ್ಲಿ ಕರಾವಳಿ ಕರ್ನಾಟಕದ ಕೊಡುಗೆಯೂ ಅಧಿಕವಿದೆ‌ ಎಂದರು.

ಹುಬ್ಬಳ್ಳಿ-ಧಾರವಾಡ ಮತ್ತು ಮಂಗಳೂರು ಭಾಗದಲ್ಲೂ ಬೃಹತ್ ವಾಣಿಜ್ಯ ವಲಯ ನಿರ್ಮಾಣ ಮಾಡುವ ಅಗತ್ಯವಿದೆ. ಮುಂದಿನ ಪೀಳಿಗೆಗೆ ಉದ್ಯೋಗ‌ ನೀಡಬೇಕಿದೆ. ಮಿಲಿಯನ್‌ಗಟ್ಟಲೇ ಉದ್ಯೋಗ ಸೃಷ್ಟಿಯಾಗುವ ಅನಿವಾರ್ಯತೆ ಇದೆ. ಮುಂದಿನ ಹತ್ತು ವರ್ಷಗಳಲ್ಲಿ‌ ಇನ್ನು ಹೆಚ್ಚಿನ ಸಾಧನೆ ಬೇಕು. ಯುವ ಜನರಿಗೆ ಉದ್ಯೋಗ ನೀಡಿದಲ್ಲಿ ಅಭಿವೃದ್ಧಿ ವೇಗ ಪಡೆಯಲಿದೆ ಎಂದು ತಿಳಿಸಿದರು.

ಎನ್‌ಎಂಪಿಟಿ ಅಧ್ಯಕ್ಷ ವೆಂಕಟರಮಣ ಮಾತನಾಡಿ, ಕೈಗಾರಿಕಾ ಮೂಲಸೌಕರ್ಯವು ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕವಾಗಿರುತ್ತದೆ. ಕರ್ನಾಟಕ ಕೈಗಾರಿಕಾ ವಲಯವು ದೇಶದಲ್ಲೇ ತನ್ನದೇ ಆದ ಪ್ರಾಮುಖ್ಯತೆ ಹೊಂದಿದೆ. ಪ್ರತಿವರ್ಷವೂ ರಾಜ್ಯದ ಆರ್ಥಿಕತೆ ಪ್ರಗತಿಯಲ್ಲಿದ್ದು, ರಾಷ್ಟ್ರ ಮಟ್ಟದಲ್ಲಿ ಮುಂಚೂಣಿಯಲ್ಲಿದೆ ಎಂದರು.

ಎಂಆರ್‌ಪಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ.ವೆಂಕಟೇಶ, ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ್ ಮತ್ತು ಕೆಸಿಸಿಐ ಅಧ್ಯಕ್ಷ ಐಸಾಕ್ ವಾಸ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.