ADVERTISEMENT

ಹರಿಪ್ರಸಾದ್‌ಗೆ ಕೇಸರಿ-ಕಾವಿ ಬಗ್ಗೆ ಗೌರವವಿಲ್ಲ; DNA ಪರೀಕ್ಷೆ ಮಾಡಿಸಬೇಕು: ಪೂಂಜ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 13:18 IST
Last Updated 28 ಅಕ್ಟೋಬರ್ 2024, 13:18 IST
<div class="paragraphs"><p>ಹರೀಶ್ ಪೂಂಜ</p></div>

ಹರೀಶ್ ಪೂಂಜ

   

ಮಂಗಳೂರು: ‘ಬಿ.ಕೆ.ಹರಿಪ್ರಸಾದ್ ಅವರದು ಹಿಂದೂ ಡಿಎನ್‌ಎಯೇ ಆಗಿದ್ದರೆ ಸ್ವಾಮೀಜಿ ಬಗ್ಗೆ ಈ ರೀತಿ ಹೇಳಿಕೆ ನೀಡುತ್ತಿರಲಿಲ್ಲ. ಅವರ ಡಿಎನ್‌ಎ ಪರೀಕ್ಷೆ ಮಾಡಿಸಬೇಕು. ಅವರು ಏಕೆ ಹೀಗೆ ಮಾತನಾಡುತ್ತಿದ್ದಾರೆ ಎಂದು ಆಗ ಗೊತ್ತಾಗುತ್ತದೆ’ ಎಂದು ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ ಹೇಳಿದರು.

‘ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯನ್ನು ಕಾಂಗ್ರೆಸ್‌ ಮುಖಂಡ ಬಿ.ಕೆ.ಹರಿಪ್ರಸಾದ್ ‘ಪುಡಿ ರಾಜಕಾರಣಿ’ಗಳಿಗೆ ಹೋಲಿಸಿರುವುದನ್ನು ಪೂಂಜ ಇಲ್ಲಿ ಖಂಡಿಸಿದರು. ಈ ಕುರಿತು ಸುದ್ದಿಗಾರರಿಗೆ ಸೋಮವಾರ ಪ್ರತಿಕ್ರಿಯೆ ನೀಡಿದ ಅವರು, ‘ಕೇಸರಿ ಹಾಗೂ ಕಾವಿ ಬಗ್ಗೆ ಹರಿಪ್ರಸಾದ್ ಅವರಿಗೆ ಗೌರವವಿಲ್ಲ. ಅವರ ಡಿಎನ್‌ಎ ಪರೀಕ್ಷೆ ಮಾಡಿಸಿದರೆ ಅದರಲ್ಲಿ ಕೇಸರಿ ಇದೆಯೇ, ಹಸಿರು ಇದೆಯೇ ಬಿಳಿ ಇದೆಯೇ ಎಂದು ತಿಳಿಯುತ್ತದೆ’ ಎಂದರು.

ADVERTISEMENT

‘ಹಿಂದೂ ಮತ್ತು ಮುಸಲ್ಮಾನರ ಡಿಎನ್‌ಎ ಒಂದೇ ಎಂದು ಬಿ.ಕೆ.ಹರಿಪ್ರಸಾದ್ ಹಿಂದೊಮ್ಮೆ ಹೇಳಿಕೆ ನೀಡಿದ್ದರು. ಅವರ ಹೇಳಿಕೆಗೆ ನಾವು ಬದ್ಧರಾಗಿಲ್ಲ. ಹಿಂದೂಗಳದು ಶ್ರೀರಾಮನ, ಶ್ರೀ ಕೃಷ್ಣನ ಡಿಎನ್‌ಎ’ ಎಂದರು.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ವ್ಯಕ್ತಿಗಳು ಹಾಗೂ ಪಕ್ಷ‌ಗಳು ಗುರುಗಳ ಬಗ್ಗೆ ನಂಬಿಕೆ ಮತ್ತು ಶ್ರದ್ಧೆ ಇಟ್ಟುಕೊಂಡಿವೆ. ಆ ನಂಬಿಕೆಗೆ ಹರಿಪ್ರಸಾದ್‌ ಘಾಸಿಯನ್ನುಂಟು ಮಾಡಿದ್ದಾರೆ. ಮುಸಲ್ಮಾನ ಧರ್ಮಗುರು ಅಥವಾ ಕ್ರೈಸ್ತರ ಪಾದ್ರಿ ಬಗ್ಗೆ ಈ ರೀತಿ ಹೇಳಿಕೆ ನೀಡಲು ಅವರಿಗೆ ತಾಕತ್ತು ಇದೆಯೇ. ಸ್ವಾಮೀಜಿ ಬಗ್ಗೆ ಈ ರೀತಿ ಮಾತನಾಡಿದ್ದಕ್ಕೆ ಹಿಂದೂ ಸಮಾಜ ಅವರಿಗೆ ತಕ್ಕ ಉತ್ತರ ನೀಡಲಿದೆ’ ಎಂದರು.

‘ಪುಡಿ ರಾಜಕಾರಣಿ ಯಾರೆಂಬುದು ಮಲ್ಲೇಶ್ವರದ ಗಲ್ಲಿ ಗಲ್ಲಿಗೆ ಗೊತ್ತಿದೆ. ಚುನಾವಣೆ ಗೆಲ್ಲಲು ಯೋಗ್ಯತೆ ಇಲ್ಲದ ಪುಡಿ ರಾಜಕಾರಣಿ ಅವರೇ. ಗಾಂಧಿ ಕುಟುಂಬದ ಜೊತೆಗಿನ ಆತ್ಮೀಯತೆಯನ್ನೇ ಬಂಡವಾಳವನ್ನಾಗಿ ಬಳಸಿ ರಾಜಕಾರಣ ಮಾಡಿರುವ ಅವರಿಗೆ ಜನಾಭಿಪ್ರಾಯದ ಮೂಲಕ ಗೆಲ್ಲುವ ಅರ್ಹತೆ ಇಲ್ಲ’ ಎಂದರು.

‘ನಮ್ಮದು ಜಾತ್ಯತೀತ ರಾಷ್ಟ್ರ ಅಲ್ಲ. ಸನಾತನ ಹಿಂದೂ ಸಂಸ್ಕೃತಿಯನ್ನೂ ಒಳಗೊಂಡು ಎಲ್ಲವನ್ನೂ ಸ್ವೀಕಾರ ಮಾಡಿ ರಾಷ್ಟ್ರೀಯತೆಯನ್ನು ತೋರಿಸುವ ದೇಶ‘ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.