ಕಾಸರಗೋಡು: ವೃತ್ತಿಜೀವನದುದ್ದಕ್ಕೂ ಸೈಕಲ್‌ನಲ್ಲೇ ಓಡಾಡಿ ಸಂದೇಶ ರವಾನೆ ಮಾಡಿದ ಅಂಚೆ ಇಲಾಖೆ ನೌಕರ, ಸೈಕಲ್ ಸತೀಶ್ ಎಂದೇ ಹೆಸರು ಗಳಿಸಿರುವ ಬಿ.ಸತೀಶ್ ಇದೇ 31ರಂದು ನಿವೃತ್ತರಾಗಲಿದ್ದು ಅವರ ವಿದಾಯ ಕೂಟವನ್ನು ಸ್ಮರಣೀಯವಾಗಿಸಲು ಸಹೋದ್ಯೋಗಿಗಳು ಸಜ್ಜಾಗಿದ್ದಾರೆ.
ಕಾಸರಗೋಡಿನ ಕೂಡ್ಲು ನಿವಾಸಿಯಾಗಿರುವ ಸತೀಶ್ ಗಡಿನಾಡಿನ ಅಂಚೆ ಇಲಾಖೆಯಲ್ಲಿ ಕನ್ನಡಿಗರ ಪ್ರತಿನಿಧಿಯೂ ಆಗಿದ್ದಾರೆ. 42 ವರ್ಷಗಳ ಸುದೀರ್ಘ ಸೇವಾ ಅವಧಿಯಲ್ಲಿ ಸೈಕಲ್ ಬಿಟ್ಟರೆ ಬೇರೆ ಯಾವುದೇ ವಾಹನ ಬಳಸದೇ ಇರುವುದು ಇವರ ವೈಶಿಷ್ಟ್ಯ. 30 ವರ್ಷ ಕೂಡ್ಲು ಅಂಚೆ ಕಚೇರಿಯಲ್ಲಿ ಇಡಿಎಂಸಿಯಾಗಿದ್ದ ಅವರು ಬಡ್ತಿಯಾಗಿ ಕಾಸರಗೋಡು ಪ್ರಧಾನ ಅಂಚೆ ಕಚೇರಿಯಲ್ಲಿ ಎಂಟಿಎಸ್ ಆಗಿ 12 ವರ್ಷ ಸೇವೆಯಲ್ಲಿದ್ದರು. ಕನ್ನಡಿಗರು ಅಂಚೆ ಕಚೇರಿಗೆ ಬಂದರೆ ಅವರಿಗೆ ಬೇಕಾದ ಸೇವೆ ನೀಡುತ್ತಿರುವ ಅವರು ಜನಾನುರಾಗಿಯಾಗಿದ್ದಾರೆ. ಕೋವಿಡ್ ಸಂದರ್ಭದಲ್ಲೂ ರಜೆ ಇಲ್ಲದೆ ಕರ್ತವ್ಯ ನಿರ್ವಹಿಸಿ ಗಮನ ಸೆಳೆದಿದ್ದಾರೆ. ಅಂಚೆ ಮೂಲಕ ಔಷಧಿ ಸಮಯಕ್ಕೆ ಸರಿಯಾಗಿ ತಲುಪುವಂತೆ ನೋಡಿಕೊಳ್ಳುತ್ತಿದ್ದಾರೆ. ಕನ್ನಡಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಭಾಷೆಯ ಮೇಲಿನ ಕಾಳಜಿ ಮೆರೆಯುತ್ತಿದ್ದಾರೆ.
ಸತೀಶ್ ಅವರು ಕೆಳದಿ ರಾಜವಂಶಸ್ಥರು. ಅವರ ಮನೆಯಲ್ಲಿ ‘ಅಶ್ವಾರೂಢ ಪಾರ್ವತಿ ದೇವಿ’ಯ ಆರಾಧನೆ ತಲತಲಾಂತರದಿಂದ ನಡೆಯುತ್ತಿದೆ. ‘ಕೆಳದಿ ರಾಜವಂಶಸ್ಥ ದೇವರಮನೆ’ ಎಂದು ಹೆಸರು ಗಳಿಸಿದೆ. ‘ಕೆಳದಿ ರಾಜ ಕುಟುಂಬಸ್ಥರ ಚರಿತ್ರೆ’ ಎಂಬ ಕೃತಿಯನ್ನೂ ಸತೀಶ್ ರಚಿಸಿದ್ದಾರೆ. ಶೃಂಗೇರಿ ಜಗದ್ಗುರು ಪೀಠದ ಕೋಟೆಕ್ಕಾರು ಉಪಶಾಖೆ, ಶ್ರೀ ಕ್ಷೇತ್ರ ಧರ್ಮಸ್ಥಳ, ಉಡುಪಿ ಶ್ರೀಕೃಷ್ಣ ಮಠ, ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ, ಎಡಪದವು ಶ್ರೀ ಹೋಪಾಲಕೃಷ್ಣ ದೇವಾಲಯ, ಕೆಳದಿ ಕವಳೆದುರ್ಗ ಮಠ, ಹೊಸನಗರ ಮಠ, ಗುರುಪುರ ಜಂಗಮ ಮಠ, ಬೆಂಗಳೂರು ಬಸವ ಸಮಿತಿ, ಕೈಗಾ ಅಣುಸ್ಥಾವರ, ಭದ್ರಾವತಿ ಯುವಕ ತಂಡಗಳು ಅವರನ್ನು ಗೌರವಿಸಿವೆ.
ಪುರುಷೋತ್ತಮ-ವಸಂತಿ ದಂಪತಿಪುತ್ರನಾಗಿ 1963ರ ಮಾರ್ಚ್ 23ರಂದು ಮಂಗಳೂರಿನ ಅತ್ತಾವರದಲ್ಲಿರುವ ಅಜ್ಜಿಮನೆಯಲ್ಲಿ ಜನಿಸಿದ ಅವರು ಅತ್ತಾವರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಗಳಿಸಿ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪದವಿ, ಕೇರಳ ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.