ಮೂಲ್ಕಿ: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಿಂದ ನಡೆಯುವ ಆರೂ ಮೇಳಗಳ ಯಕ್ಷಗಾನ ಪ್ರದರ್ಶನವನ್ನು ಮುಂದಿನ ತಿರುಗಾಟದಿಂದ ಕಾಲಮಿತಿಗೆ ಬದಲಾಯಿಸಿ, ಆಡಳಿತ ಮಂಡಳಿ ನಿರ್ಣಯ ತೆಗೆದುಕೊಂಡಿದೆ.
ಮಂಗಳವಾರ ದೇವಳದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದು, ರಾತ್ರಿ ಗಂಟೆ 10.30ರಿಂದ 50 ಡೆಸಿಬಲ್‌ಗಿಂತ ಹೆಚ್ಚಿಗೆ ಧ್ವನಿವರ್ಧಕವನ್ನು ಬಳಸಬಾರದು ಎಂದು ಸರ್ಕಾರದಿಂದ ಈಗಾಗಲೇ ದೇವಸ್ಥಾನಗಳಿಗೆ ಸೂಚನೆ ಬಂದಿದೆ. ಈ ಹಿನ್ನೆಲೆಯಲ್ಲಿ ಯಕ್ಷಗಾನ ಪ್ರದರ್ಶನದ ಸಮಯವನ್ನು ಬದಲಾಯಿಸುವುದು ಅನಿವಾರ್ಯವಾಗಿತ್ತು. ದೇವರ ಎದುರು ಕಾಲಮಿತಿ ಯಕ್ಷಗಾನ ಬಗ್ಗೆ ಹೂಪ್ರಶ್ನೆ ಇಟ್ಟಾಗ ದೇವರ ಒಪ್ಪಿಗೆ ಬಂದಿದೆ. ಹಾಗಾಗಿ, ಕಾಲಮಿತಿ ಯಕ್ಷಗಾನ ಮಾಡುವ ಬಗ್ಗೆ ಡಳಿತ ಮಂಡಳಿ ನಿರ್ಧಾರ ಮಾಡಿದೆ ಎಂದು ಕಟೀಲು ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಕೊಡೆತ್ತೂರುಗುತ್ತು ಸನತ್ ಕುಮಾರ ಶೆಟ್ಟಿ ಹಾಗೂ ಆನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಸಂಜೆ 5 ಗಂಟೆಯಿಂದ ರಾತ್ರಿ 10.30ರತನಕ ಯಕ್ಷಗಾನ ನಡೆಸುವ ಬಗ್ಗೆ ನಿರ್ಣಯಿಸಲಾಗಿದೆ. ಯಕ್ಷಗಾನ ಪ್ರದರ್ಶನದ ಸ್ವರೂಪ ಚಿಂತನೆಗಳ ಸ್ಪಷ್ಟ ರೂಪ ಮುಂದಿನ ದಿನಗಳಲ್ಲಿ ನಡೆಯುವ ಸಭೆಗಳಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.