ADVERTISEMENT

ಶಿರಾಡಿಘಾಟ್‌ ದುರಸ್ತಿ ಮಾಡಿ:‌ ಪ್ರಧಾನಿ, ನಿತಿನ್‌ ಗಡ್ಕರಿಗೆ ಕೆಸಿಸಿಐ ಪತ್ರ

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 16:25 IST
Last Updated 23 ಜುಲೈ 2021, 16:25 IST
ಐಸಾಕ್‌ ವಾಸ್‌
ಐಸಾಕ್‌ ವಾಸ್‌   

ಮಂಗಳೂರು: ರಾಷ್ಟ್ರೀಯ ಹೆದ್ದಾರಿ–75ರ ಶಿರಾಡಿಘಾಟ್‌ ರಸ್ತೆ ದೋಣಿಗಲ್‌ ಸಮೀಪ ತೀವ್ರ ಹಾನಿಗೊಂಡಿದ್ದು, ಕ್ಷಿಪ್ರ ದುರಸ್ತಿ ಹಾಗೂ ಶಾಶ್ವತ ಯೋಜನೆಗೆ ಕ್ರಮ ಕೈಗೊಳ್ಳಬೇಕು ಎಂದು ಕೆನರಾ ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಐಸಾಕ್‌ ವಾಸ್‌ ಅವರು ಕೇಂದ್ರ ಭೂ ಸಾರಿಗೆ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಹಾಗೂ ಪ್ರಧಾನಿ ಕಾರ್ಯಾಲಯಕ್ಕೆ ಶುಕ್ರವಾರ ಪತ್ರ ಬರೆದು ಒತ್ತಾಯಿಸಿದ್ದಾರೆ.

ಭಾರಿ ಮಳೆಯಿಂದಾಗಿ ಹೆದ್ದಾರಿಯು ಹಾನಿಗೊಂಡಿದ್ದು, ಕರಾವಳಿ ಜಿಲ್ಲೆಗಳು, ವಾಣಿಜ್ಯ ನಗರಿ ಮಂಗಳೂರಿನ ವ್ಯವಹಾರ ಕೂಂಠಿತವಾಗಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳು, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳನ್ನು ವಾಣಿಜ್ಯ ಉದ್ದೇಶಗಳಿಗೆ ಪ್ರಮುಖವಾಗಿ ಸಂಪರ್ಕಿಸುವ ಈ ಹೆದ್ದಾರಿಯಲ್ಲಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಮಂಗಳೂರಿನ ಪ್ರಮುಖ ವಾಣಿಜ್ಯ ಬಂದರು, ಎಂಆರ್‌ಪಿಲ್‌, ಐಎಸ್‌ಪಿಆರ್‌ಎಲ್‌, ಇತರ ಬೃಹತ್‌ ಉದ್ದಿಮೆಗಳು, ಅಡುಗೆ ಅನಿಲ ಸಾಗಣೆ, ರೈತರ ಬೆಳೆ ಉತ್ಪನ್ನಗಳ ಸಾಗಣೆ ಮುಂತಾದವುಗಳಿಗೆ ಶಿರಾಡಿ ಘಾಟ್‌ರಸ್ತೆ ಬಳಕೆಯಾಗುತ್ತಿದೆ. ದೋಣಿಗಲ್‌ ಸಮೀಪ ಆಗಿರುವ ಸಮಸ್ಯೆಯನ್ನು ಶೀಘ್ರ ಪರಿಹರಿಸಿ ಸರಕು ಸಂಚಾರ ಸಮಸ್ಯೆ ಬಗೆಹರಿಸಬೇಕು ಎಂದು ಐಸಾಕ್‌ ವಾಸ್‌ ಪತ್ರದಲ್ಲಿ ಮನವಿ ಮಾಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.