ಮೂಲ್ಕಿ: ಕೊರೊನಾ ವೈರಸ್ ಭೀತಿಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಅಧಿದೇವತೆ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೋತ್ಸವ ಅರ್ಧಕ್ಕೆ ಮೊಟಕುಗೊಂಡಿದೆ. ಸೋಮವಾರ ರಾತ್ರಿ ರಥೋತ್ಸವ ನಡೆದಿದ್ದು, ಈ ವೇಳೆ ಸಹಸ್ರಾರು ಮಂದಿ ಸೇರಿದ್ದರು. ದೇವಸ್ಥಾನದ ಆಡಳಿತ ಮಂಡಳಿಯ ವಿನಂತಿಯ ಬಳಿಕವೂ ದುರ್ಗಾ ಪರಮೇಶ್ವರಿಯ ಭಕ್ತರು ದೇವಸ್ಥಾನದ ರಥೋತ್ಸವದ ಸಂದರ್ಭದಲ್ಲಿ ಹಾಜರಿದ್ದರು.
ದಕ್ಷಿಣ ಕನ್ನಡ ಜಿಲ್ಲಾಡಳಿತದ ಅಧಿಕಾರಿಗಳು, ತಹಶೀಲ್ದಾರ ಸೇರಿದಂತೆ ಅಧಿಕಾರಿಗಳು ದೇವಸ್ಥಾನದ ಆಡಳಿತ ಮಂಡಳಿಗೆ ಮತ್ತೆ ಸೂಚನೆ ನೀಡಿದ್ದು, ಜಾತ್ರೋತ್ಸವ ಅರ್ಧಕ್ಕೆ ಮೊಟಕುಗೊಂಡಿದೆ.
ಏಪ್ರಿಲ್ 13 ರಿಂದ 20 ರವರೆಗೆ ಕಟೀಲು ಜಾತ್ರೋತ್ಸವ ನಡೆಯಬೇಕಾಗಿದ್ದು, ಇದೀಗ ಅರ್ಧಕ್ಕೆ ಮೊಟಕುಗೊಂಡಿದೆ. ಇಂದು ದೇವಸ್ಥಾನದಲ್ಲಿ ಶಯನ, ಕವಾಟೋಧ್ಛಾಟನೆ, ರಾತ್ರಿ ರಥೋತ್ಸವ, ಅವಭೃತೋತ್ಸವ ನಡೆಯಬೇಕಿತ್ತು. ಆದರೆ ಜಿಲ್ಲಾಡಳಿತದ ಆದೇಶದಂತೆ ಕಟೀಲು ಜಾತ್ರೋತ್ಸವ ರದ್ದುಗೊಂಡಿದೆ.
ಅದೇ ರೀತಿ ಕಟೀಲು ಶ್ರೀದುರ್ಗಾಪರಮೇಶ್ವರಿಯ ಎಕ್ಕಾರು ಕೊಡಮಾಣಿತ್ತಾಯ ಭೇಟಿ ಮತ್ತು ಶಿಬರೂರು ಕೊಡಮಣಿತ್ತಾಯ ಭೇಟಿಯೂ ರದ್ದಾಗಿದೆ. ಕಟೀಲು ದುರ್ಗಾಪರಮೇಶ್ವರಿ ಜಾತ್ರೆಯ ಪ್ರಮುಖ ಆಕರ್ಷಣೆ ತೂಟೆದಾರ ಉತ್ಸವವೂ ರದ್ದಾಗಿದೆ. ತೂಟೆದಾರ ಉತ್ಸವದ ಬಳಿಕ ದೇವಿಯು ವಿಶ್ರಾಂತಿಗೆ ತೆರಳುವ ನಂಬಿಕೆಯಿದ್ದು, ಈ ದಿನ ಕಟೀಲು ಆರು ಮೇಳದ ಯಕ್ಷಗಾನ ಪ್ರದರ್ಶನವೂ ನಡೆಯುವುದಿಲ್ಲ ಎಂದು ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.