ADVERTISEMENT

ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವ ಸಿದ್ದರಾಮಯ್ಯ: ಭಗವಂತ್‌ ಖೂಬಾ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2024, 3:01 IST
Last Updated 1 ಅಕ್ಟೋಬರ್ 2024, 3:01 IST
<div class="paragraphs"><p>ಭಗವಂತ್‌ ಖೂಬಾ</p></div>

ಭಗವಂತ್‌ ಖೂಬಾ

   

ಮಂಗಳೂರು: 'ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಹೇಳಿಕೆ  ನೀಡುತ್ತಿದ್ದಾರೆ' ಎಂದು ಬಿಜೆಪಿ ಮುಖಂಡ ಭಗವಂತ ಖೂಬಾ ಅಭಿಪ್ರಾಯಪಟ್ಟರು.

ಇಲ್ಲಿ ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ಮುಡಾ ಹಗರಣದ ತನಿಖೆಗೆ ಹೈಕೋರ್ಟ್‌ ಆದೇಶ ಮಾಡಿದ ಬಳಿಕ ಕಾಂಗ್ರೆಸ್ ಪಟಾಲಂ ಸ್ಥಿಮಿತ ಕಳೆದುಕೊಂಡಿದೆ’ ಎಂದರು.

ADVERTISEMENT

‘2012-13ರಲ್ಲಿ ಬಳ್ಳಾರಿಗೆ ಪಾದಯಾತ್ರೆ ನಡೆಸಿದಾಗ ಸಿದ್ದರಾಮಯ್ಯ ಆಗಿನ ಮುಖ್ಯಮಂತ್ರಿಯ ರಾಜೀನಾಮೆಗೆ ಒತ್ತಾಯಿಸಿದ್ದರು. ಅವರ ಸಮಾಜವಾದ ಈಗ ಎಲ್ಲಿದೆ. ಬಂಡತನ ತೋರದೆ, ರಾಜೀನಾಮೆ ನೀಡಿ ನಿಷ್ಪಕ್ಷಪಾತ ತನಿಖೆಗೆ ಅವರು ಸಹಕರಿಸಬೇಕು’ ಎಂದು ಒತ್ತಾಯಿಸಿದರು.

ಬಿಜೆಪಿ ಬಣ ರಾಜಕೀಯದ ಕುರಿತು ಪ್ರತಿಕ್ರಿಯಿಸಿದ ಅವರು, ‘ಇದು ಮಾಧ್ಯಮದ ಸೃಷ್ಟಿ. ಕುಟುಂಬದಲ್ಲಿ ಭಿನ್ನಾಭಿಪ್ರಾಯ ಸಹಜ. ಕೆಲವು ನಾಯಕರು ತಮ್ಮ ವೈಯುಕ್ತಿಕ ಅಭಿಪ್ರಾಯ ಹೇಳುತ್ತಾರೆ. ಅವರು ಯಾರೂ ಬಿಜೆಪಿ ಬಿಟ್ಟು ಹೊರ ಹೋಗುತ್ತಿಲ್ಲ. ಹೊಸ ರಾಜಕೀಯ ಪಕ್ಷವನ್ನು ಹುಟ್ಟು ಹಾಕುತ್ತಿಲ್ಲ. ನಾವೆಲ್ಲಾ ಒಗ್ಗಟ್ಟಾಗಿದ್ದೇವೆ’ ಎಂದರು.

ಚುನಾವಣಾ ಬಾಂಡ್ ಪಡೆದಿದ್ದನ್ನು ಮುಂದಿಟ್ಟು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿ ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಿದ ಕುರಿತು ಪ್ರತಿಕ್ರಿಯಿಸಿದ ಅವರು, ‘ರಾಜಕೀಯ ಪಕ್ಷಕ್ಕೆ ಜನರಿಂದ ದೇಣಿಗೆ ಪಡೆಯುವ ಹಕ್ಕಿದೆ. ಎರಡು ಪ್ರಕರಣಗಳನ್ನು ಹೋಲಿಸುವುದು ಕತ್ತೆ ಮತ್ತು ಕುದುರೆಯನ್ನು ಹೋಲಿಸಿದಂತೆ. ಚುನಾವಣಾ ಬಾಂಡ್‌ನಲ್ಲಿ ಹಣ ಪಡೆದ ರಾಜಕೀಯ ಪಕ್ಷದವರೆಲ್ಲರೂ ರಾಜೀನಾಮೆ ನೀಡುತ್ತಾರೆಯೇ’ ಎಂದು ಪ್ರಶ್ನಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.