ADVERTISEMENT

ಲಂಚ: ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ, ಕಿರಿಯ ಎಂಜಿನಿಯರ್‌ ಬಂಧನ

ಕಾಮಗಾರಿ ಹಣ ಬಿಡುಗಡೆಗೆ ಲಂಚ ಪಡೆದ ಆರೋಪ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2024, 9:11 IST
Last Updated 20 ಸೆಪ್ಟೆಂಬರ್ 2024, 9:11 IST
ಎಂ.ಆರ್‌.ಸ್ವಾಮಿ
ಎಂ.ಆರ್‌.ಸ್ವಾಮಿ   

ಮಂಗಳೂರು: ಕಿನ್ನಿಗೋಳಿ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಎಂ.ಆರ್‌.ಸ್ವಾಮಿ ಹಾಗೂ ಕಿರಿಯ ಎಂಜಿನಿಯರ್ ನಾಗರಾಜು ಗುತ್ತಿಗೆದಾರರಿಂದ ಲಂಚದ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

‘ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎಸ್.ಕೋಡಿ ಸರ್ಕಾರಿ ಕೆರೆ ಅಭಿವೃದ್ಧಿಗೆ 2022-23ನೇ ಸಾಲಿನ 5ನೇ ಹಣಕಾಸು ಯೋಜನೆಯಡಿ ಅನುದಾನ ಮಂಜೂರಾಗಿತ್ತು. ಈ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯ ಕ್ಲಾಸ್ –1 ಗುತ್ತಿಗೆದಾರರೊಬ್ಬರು ನಿರ್ವಹಿಸಿದ್ದರು. ಈ ಕಾಮಗಾರಿಯ  ₹ 9,77,154  ಬಿಲ್‌ನ ಹಣವನ್ನು ಬಿಡುಗಡೆ ಮಾಡುವಂತೆ ಕಿರಿಯ ಎಂಜಿನಿಯರ್ ನಾಗರಾಜು ಅವರನ್ನು ಗುತ್ತಿಗೆದಾರರು ಕೋರಿದ್ದರು. ಬಿಲ್ ಮಂಜೂರು ಮಾಡಲು ತನಗೆ ₹ 37 ಸಾವಿರ ಹಾಗೂ ಮುಖ್ಯಾಧಿಕಾರಿಗೆ ₹ 15 ಸಾವಿರ ಲಂಚ ನೀಡಬೇಕು ಎಂದು ನಾಗರಾಜು ಕೇಳಿದ್ದರು. ಈ ಬಗ್ಗೆ ಗುತ್ತಿಗೆದಾರರು ನಮಗೆ ದೂರು ನೀಡಿದ್ದರು’ ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದ್ದಾರೆ.

‘ನಾಗರಾಜು ಅವರು ಗುತ್ತಿಗೆದಾರರಿಂದ ಗೂಗಲ್‌ ಪೇ ಮೂಲಕ ₹7 ಸಾವಿರವನ್ನು ಈ ಹಿಂದೆಯೇ ತಮ್ಮ ಖಾತೆಗೆ ಹಾಕಿಸಿಕೊಂಡಿದ್ದರು. ನಾಗರಾಜು ಅವರು ₹ 30 ಸಾವಿರ ಹಾಗೂ ಎಂ.ಆರ್‌.ಸ್ವಾಮಿ ₹ 15 ಸಾವಿರ ಪಡೆಯುತ್ತಿದ್ದಾಗ ಅವರನ್ನು ಗುರುವಾರ ಬಂಧಿಸಲಾಗಿದೆ’ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ. 

ADVERTISEMENT

‘ದಕ್ಷಿಣ ಕನ್ನಡ ಜಿಲ್ಲಾ ಲೋಕಾಯುಕ್ತ ಪೊಲೀಸ್‌ ವರಿಷ್ಠಾಧಿಕಾರಿ ಎಂ.ಎ.ನಟರಾಜ ಅವರ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಪೊಲೀಸ್ ಠಾಣೆಯ ಡಿವೈಎಸ್‌ಪಿ  ಗಾನ ಪಿ. ಕುಮಾರ್,  ಇನ್‌ಸ್ಪೆಕ್ಟರ್‌ಗಳಾದ ಅಮಾನುಲ್ಲಾ.ಎ, ಸುರೇಶ್ ಕುಮಾರ್ ಪಿ., ಚಂದ್ರಶೇಖರ್ ಕೆ.ಎನ್., ಚಂದ್ರಶೇಖರ್ ಸಿ.ಎಲ್ ಅವರು ಸಿಬ್ಬಂದಿ ಜೊತೆ ಸೇರಿ ಆರೋಪಿಗಳ ಬಂಧನಕ್ಕೆ ಕ್ರಮವಹಿಸಿದ್ದರು’ ಎಂದು ಲೋಕಾಯುಕ್ತ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.