ಮಂಗಳೂರು: ಹಡಗಿನಲ್ಲಿ ಹೃದಯಾಘಾತಕ್ಕೆ ಒಳಗಾದ ವಿಯೆಟ್ನಾಂನ ಬಾಣಸಿಗನಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಿದ ನಗರದ ಅಂಬೇಡ್ಕರ್ ವೃತ್ತದ ಕೆಎಂಸಿ ಆಸ್ಪತ್ರೆ ಆ ವ್ಯಕ್ತಿಯ ಪ್ರಾಣ ಉಳಿಸಿದೆ.
19 ಸದಸ್ಯರನ್ನು ಒಳಗೊಂಡ ಹಡಗು ಮಂಗಳೂರು ಬಂದರ್‌ನಲ್ಲಿ ಲಂಗರು ಹಾಕುತ್ತಿದ್ದಂತೆ ಅದರ ಸಿಬ್ಬಂದಿ 39 ವರ್ಷದ ವಿಯೆಟ್ನಾಂ ನಿವಾಸಿಗೆ ಹೃದಯಾಘಾತವಾಗಿದೆ. ಸ್ಥಳೀಯವಾಗಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಅವರನ್ನು ಕೆಎಂಸಿಗೆ ದಾಖಲಿಸಲಾಗಿತ್ತು. ರೋಗಿಗೆ ರಕ್ತದ ಹರಿವಿನ ಸಮಸ್ಯೆ (ರಿ-ಇನ್‌ಫ್ರಾಕ್ಷನ್) ಇದ್ದುದರಿಂದ ತುರ್ತು ರಕ್ಷಣಾ ಆ್ಯಂಜಿಯೊಪ್ಲಾಸ್ಟಿ ಮಾಡಬೇಕಾದ ಅಗತ್ಯವಿತ್ತು. ಅನುಭವಿ ಇಂಟರ್‌ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ.ಪದ್ಮನಾಭ ಕಾಮತ್ ನೇತೃತ್ವದಲ್ಲಿ ಡಾ.ಐಶ್ವರ್ಯಾ ಮತ್ತು ಡಾ.ಲಾವಣ್ಯ ಅವರ ತಂಡ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿರ್ವಹಿಸಿದರು.
‘ಅತ್ಯಂತ ಸಂಕೀರ್ಣ ಪರಿಸ್ಥಿತಿಯಲ್ಲಿ ತಂಡ ಸೂಕ್ತ ನಿರ್ಧಾರ ಕೈಗೊಂಡು ಕಾರ್ಯಪ್ರವೃತ್ತವಾಗಿತ್ತು. ಆಸ್ಪತ್ರೆಯ ಸುಧಾರಿತ ಸೌಲಭ್ಯಗಳ ನೆರವಿನಿಂದ ರೋಗಿಯನ್ನು ಮೊದಲು ಸ್ಥಿರತೆಗೆ ತಂದು ಆ್ಯಂಜಿಯೊಪ್ಲಾಸ್ಟಿ ನಡೆಸಲಾಯಿತು. ಇಟಿಎ ಲಾಜಿಸ್ಟಿಕ್ಸ್ ಮತ್ತು ಶಿಪ್ಪಿಂಗ್ ಪಾಲುದಾರ ಸಾಯಿ ಶರಣ್ ಕೊಟ್ಟಾರಿ, ನವಮಂಗಳೂರು ಬಂದರು ನಿಗಮದ ಅಧಿಕಾರಿಗಳಾದ ಪುತ್ರನ್ ಮತ್ತು ಆಶಿತ್ ಡಿ ಶೆಟ್ಟಿಯನ್ ಅವರ ಬೆಂಬಲ ಶ್ಲಾಘನೀಯ’ ಎಂದು ಡಾ.ಪದ್ಮನಾಭ ಕಾಮತ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.