ಮಂಗಳೂರು: ವಕ್ರ ಬೆನ್ನುಮೂಳೆ ಸಮಸ್ಯೆ (ಸ್ಕೋಲಿಯಾಸಿಸ್) ಕುರಿತು ಜಾಗೃತಿ ಮೂಡಿಸಲು ಹಾಗೂ ಈ ಸಮಸ್ಯೆ ಹೊಂದಿರುವ ಮಕ್ಕಳನ್ನು ಗುರುತಿಸಲು ನಗರದ ಕೆಎಂಸಿ ಆಸ್ಪತ್ರೆ ವಿಶೇಷ ಅಭಿಯಾನವನ್ನು ಹಮ್ಮಿಕೊಂಡಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಆಸ್ಪತ್ರೆಯ ವೈದ್ಯಕೀಯ ಸೇವೆಗಳ ಪ್ರಾದೇಶಿಕ ಮುಖ್ಯಸ್ಥ ಡಾ.ಆನಂದ್ ವೇಣುಗೋಪಾಲ್, ‘ಆರಂಭಿಕ ಹಂತದಲ್ಲೇ ಈ ಕಾಯಿಲೆಯನ್ನು ಪತ್ತೆ ಹಚ್ಚಿದರೆ, ಚಿಕಿತ್ಸೆ ಮೂಲಕ ಗುಣಪಡಿಸಬಹುದು. ಆ ಕಾರಣಕ್ಕಾಗಿ ಅಭಿಯಾನ ಹಮ್ಮಿಕೊಂಡಿದ್ದೇವೆ. ಆಸ್ಪತ್ರೆ ವತಿಯಿಂದ 100 ಶಾಲೆಗಳ ವಿದ್ಯಾರ್ಥಿಗಳನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಿದ್ದೇವೆ’ ಎಂದರು.
ಆಸ್ಪತ್ರೆಯ ಬೆನ್ನುಮೂಳೆ ಶಸ್ತ್ರಚಿಕಿತ್ಸೆಯ ಸಲಹಾತಜ್ಞರಾದ ಡಾ.ಈಶ್ವರ ಕೀರ್ತಿ, ‘ಬೆನ್ನುಮೂಳೆಯು ಸಹಜ ಸ್ಥಾನಕ್ಕಿಂತ ಪಕ್ಕಕ್ಕೆ ಬಾಗುವ ತೊಂದರೆಯನ್ನು ಸ್ಕೋಲಿಯಾಸಿಸ್ ಎನ್ನುತ್ತಾರೆ. ಶೇ.2ರಷ್ಟು ಮಕ್ಕಳು ಈ ಸಮಸ್ಯೆ ಹೊಂದಿರುತ್ತಾರೆ. ಬಹುತೇಕ ಮಕ್ಕಳಲ್ಲಿ ಈ ಸ್ಥಿತಿಯು ತಾನೇತಾನಾಗಿ ಸರಿಯಾಗುತ್ತದೆ. ಸ್ಕೋಲಿಯಾಸಿಸ್ ದೃಢಪಟ್ಟ ಪ್ರತಿ ಆರು ಮಕ್ಕಳಲ್ಲಿ ಒಬ್ಬರಿಗೆ ಕವಚ ಅಳವಡಿಕೆ (ಬ್ರೇಸಿಂಗ್) ಅಥವಾ ಶಸ್ತ್ರಚಿಕಿತ್ಸೆಯ ಅಗತ್ಯ ಬೀಳುತ್ತದೆ’ ಎಂದರು.
‘ಸ್ಕೋಲಿಯಾಸಿಸ್ ಶಸ್ತ್ರಚಿಕಿತ್ಸೆಯು ಆರೋಗ್ಯ ವಿಮೆ ಅಥವಾ ಸರ್ಕಾರದ ವೈದ್ಯಕೀಯ ನೆರವು ಯೋಜನೆಗಳ ವ್ಯಾಪ್ತಿಯಲ್ಲಿ ಬರುತ್ತಿಲ್ಲ. ಈ ಶಸ್ತ್ರಚಿಕಿತ್ಸೆಗೂ ಆರ್ತಿಕ ನೆರವು ಸಿಗುವಂತೆ ಮಾಡಲು ವೈದ್ಯರ ಸಂಘಟನೆಗಳು ಸರ್ಕಾರದ ಮೇಲೆ ಒತ್ತಡ ಹೇರಬೇಕು’ ಎಂದು ಡಾ.ಆನಂದ್ ವೇಣುಗೋಪಾಲ್ ಒತ್ತಾಯಿಸಿದರು.
ಶಸ್ತ್ರಚಿಕಿತ್ಸೆ ಬಳಿಕ ಬೆನ್ನುಮೂಳೆ ವಕ್ರತೆ ಸಮಸ್ಯೆ ನಿವಾರಣೆಯಾದ ಕುರಿತು ಬಾಲಕಿಯೊಬ್ಬರು ಅನುಭವ ಹಂಚಿಕೊಂಡರು.
ಆಸ್ಪತ್ರೆಯ ಪ್ರಾದೇಶಿಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಗೀರ್ ಸಿದ್ಧಿಕಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.