ADVERTISEMENT

ಮಂಗಳೂರು | ಕೊಂಕಣ ರೈಲು: ಜೋಡಿ ಹಳಿ ನಿರ್ಮಿಸಲು ಮನವಿ

ರೈಲ್ವೆ ರಾಜ್ಯ ಸಚಿವ ಸೋಮಣ್ಣರಿಗೆ ಮಹಾರಾಷ್ಟ್ರ ಕನ್ನಡಿಗರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ಜುಲೈ 2024, 4:49 IST
Last Updated 16 ಜುಲೈ 2024, 4:49 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮಂಗಳೂರು: ಕೊಂಕಣ ರೈಲ್ವೆ ವ್ಯಾಪ್ತಿಯ ರೈಲು ಮಾರ್ಗದಲ್ಲಿ ತೋಕೂರಿಂದ ರೋಹವರೆಗಿನ 760 ಕಿ.ಮೀ ಉದ್ದದ ಮಾರ್ಗದಲ್ಲಿ ಜೋಡಿ ಹಳಿ ನಿರ್ಮಿಸಬೇಕು ಎಂದು ಮುಂಬೈನಿಂದ ಮಹಾರಾಷ್ಟ್ರ ಕನ್ನಡಿಗರ ನಿಯೋಗವು ಒತ್ತಾಯಿಸಿದೆ.

ಪಶ್ಚಿಮ ಕರಾವಳಿಯ ರೈಲು ಮೂಲಸೌಕರ್ಯ ಅಭಿವೃದ್ಧಿ ಬಗ್ಗೆ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಇದೇ 17ರಂದು ನಗರದಲ್ಲಿ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಭಾಗವಹಿಸಲು ಮುಂಬೈನಿಂದ ಮಹಾರಾಷ್ಟ್ರ ಕನ್ನಡಿಗರ ನಿಯೋಗವೂ ನಗರಕ್ಕೆ ಬಂದಿದೆ. ಸಂಸದರಾದ ಕ್ಯಾ.ಬ್ರಿಜೇಶ್ ಚೌಟ ಹಾಗೂ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಭೇಟಿ ಮಾಡಿ ಕರಾವಳಿಯ ರೈಲು ಮೂಲಸೌಕರ್ಯಗಳ ಅಭಿವೃದ್ಧಿ ಕುರಿತ ತಮ್ಮ ಬೇಡಿಕೆಗಳನ್ನು ಸಲ್ಲಿಸಿದೆ.

ADVERTISEMENT

‘ತೋಕೂರು–ರೋಹ ನಡುವೆ ಹಳಿಗಳ ಗರಿಷ್ಠ ಸಾಮರ್ಥಕ್ಕಿಂತ ಶೇ 40ರಷ್ಟು ಹೆಚ್ಚು ರೈಲುಗಳು ಸಂಚರಿಸುತ್ತಿವೆ. ಮುಂಬೈ–ಮಂಗಳೂರು ಮಾರ್ಗದಲ್ಲಿ ಸದಾ ಕನಿಷ್ಠ 26 ರೈಲುಗಳು ಸಂಚರಿಸುತ್ತಿರುವುದನ್ನು ಕೊಂಕಣ ರೈಲ್ವೆಯ ನಕ್ಷೆಯಲ್ಲಿ ( ಸ್ಟೇಟಸ್‌ ) ಕಾಣಬಹುದು. ಇಷ್ಟೊಂದು ದಟ್ಟಣೆ ಅಪಘಾತಕ್ಕೆ ಕಾರಣವಾಗಬಹುದು’ ಎಂದು ನಿಯೋಗವು ಕಳವಳ ವ್ಯಕ್ತಪಡಿಸಿದೆ. 

‘ಕೊಂಕಣ ರೈಲ್ವೆಯ ಹಳಿಗಳನ್ನು ನಿರ್ಮಿಸುವಾಗಲೇ ಸೇತುವೆಗಳಲ್ಲಿ ಜೋಡಿ ಹಳಿ ನಿರ್ಮಾಣಕ್ಕೆ ಅಗತ್ಯವಿರುವಷ್ಟು ಜಾಗವನ್ನು ಕಾಯ್ದಿರಿಸಲಾಗಿದೆ. ಹಳಿಯ ಉದ್ದಕ್ಕೂ ಜೋಡಿ ಹಳಿ ನಿರ್ಮಾಣಕ್ಕೆ ಅಗತ್ಯವಿರುವಷ್ಟು ಜಾಗವು ಲಭ್ಯ ಇದೆ. ಹಾಗಾಗಿ ಈ ಯೋಜನೆ ಅನುಷ್ಠಾನ ಕಷ್ಟಸಾಧ್ಯವಲ್ಲ. ಕೊಂಕಣ ರೈಲ್ವೆಯ ರೋಹ–ವೀರ್‌ ನಡುವೆ ಜೋಡಿಗಳ ನಿರ್ಮಾಣ ಪೂರ್ಣಗೊಂಡಿದೆ.  ಇನ್ನೂ ಐದು ಕಡೆ ಜೋಡಿ ಹಳಿ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡು 2024 ಡಿಸೆಂಬರ್ ಒಳಗೆ ಪೂರ್ಣಗೊಳಿಸುವ ಗುರಿ ನಿಗದಿಪಡಿಸಬೇಕು’ ಎಂದು ನಿಯೋಗವು ತಿಳಿಸಿದೆ.

ಭಾರತೀಯ ರೈಲ್ವೆಯಲ್ಲಿ ವಿಲೀನ: ‘ಕೊಂಕಣ ರೈಲ್ವೆ ನಿಗಮವು ಸುಮಾರು ₹ 5ಸಾವಿರ ಕೋಟಿ ನಷ್ಟದಲ್ಲಿದೆ. ಜೋಡಿ ಹಳಿ ನಿರ್ಮಾನಕ್ಕೆ  ಮಾಡಲು ನಿಗಮದ ಬಳಿ ಹಣವಿಲ್ಲ. ಕೊಂಕಣ ರೈಲ್ವೆಯನ್ನು  ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಿದರೆ ಜೋಡಿ ಹಳಿ ನಿರ್ಮಾಣ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಬಹುದು. ಹೆಚ್ಚುವರಿ ಬೋಗಿಗಳ ಹಾಗೂ ಹೊಸ ಜರ್ಮನ್ ತಂತ್ರಜ್ಞಾನದ ಎಲ್.ಎಚ್.ಬಿ ರೈಲು ಬೋಗಿಗಳ ಖರೀದಿಗೂ ನಿಗಮದ ಬಳಿ ಹಣವಿಲ್ಲ’ ಎಂದು ನಿಯೋಗವು ಪ್ರಕಟಣೆಯಲ್ಲಿ ತಿಳಿಸಿದೆ.

ಮಂಗಳೂರು ಸೆಂಟ್ರಲ್– ಭಾವನಗರ ಸಾಪ್ತಾಹಿಕ ರೈಲು ಸಂಚಾರ ಆರಂಭಿಸಲು ಕೊಂಕಣ ರೈಲ್ವೆ, ದಕ್ಷಿಣ ರೈಲ್ವೆ, ಮಧ್ಯ ರೈಲ್ವೆ ಹಾಗೂ ಪಶ್ಚಿಮ ರೈಲ್ವೆಗಳು 2022ರ ಜೂನ್‌ 9ರ ಸಭೆಯಲ್ಲಿ ಒಪ್ಪಿಗೆ ಸೂಚಿಸಿವೆ. ಅದರೆ ಇದಿನ್ನೂಆರಂಭವಾಗಿಲ್ಲ. ಇದನ್ನು ಕೂಡಲೇ ಆರಂಭಿಸಲು ಕ್ರಮವಹಿಸುವಂತೆ ನಿಯೋಗವು ಒತ್ತಾಯಿಸಿದೆ.

ಕೊಂಕಣ ರೈಲ್ವೆ ವ್ಯಾಪ್ತಿಯಲ್ಲಿ ರೈಲು ಟಿಕೆಟ್ ದರ ಉಳಿದ ಕಡೆಗಳಿಗಿಂತ ಶೇ 140ರಷ್ಟು ಜಾಸ್ತಿ ಇದೆ. ಈ ಹಗಲು ದರೋಡೆಯನ್ನು ನಿಲ್ಲಿಸಬೇಕು ಎಂದು ಕೋರಿದೆ.

ಹೊನ್ನಾವರದಿಂದ ತಾಳಗುಪ್ಪದವರೆಗೆ ಹೊಸ ರೈಲು ಹಳಿ ಅಳವಡಿಸಿದರೆ ಮಂಗಳೂರಿನಿಂದ ಶಿವಮೊಗ್ಗಕ್ಕೆ ನೇರ ರೈಲು ಸಂಪರ್ಕ ಸಾಧ್ಯ.  ಆ ಭಾಗದ ಜನರು  ಮಂಗಳೂರಿಗೆ ಬರಲು  ಅನುಕೂಲವಾಗಲಿದೆ ಎಂದು ನಿಯೋಗದ ಸದಸ್ಯರಾಗಿರುವ  ಮುಂಬೈ ರೈಲು ಯಾತ್ರಿ ಸಂಘದ ಕಾರ್ಯಕಾರಿ ಕಾರ್ಯದರ್ಶಿ ಒಲಿವರ್ ಡಿಸೋಜ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.