ಮಂಗಳೂರು: ‘ದೇಶದ ಹಲವು ರಾಜ್ಯಗಳಲ್ಲಿ ಬಳಕೆಯಲ್ಲಿರುವ ಕೊಂಕಣಿ ಸಾಹಿತ್ಯವು ಅನ್ಯ ಭಾಷೆಗಳ ಸಾಹಿತ್ಯಕ್ಕಿಂತ ಬಹಳಷ್ಟು ಭಿನ್ನ. ಈ ಭಾಷೆಯನ್ನು ಒಂದೊಂದು ರಾಜ್ಯದಲ್ಲಿ ಒಂದೊಂದು ಶೈಲಿಯಲ್ಲಿ ಮಾತನಾಡುತ್ತಾರೆ. ಹಾಗಾಗಿ ಈ ಸಾಹಿತ್ಯವೂ ವೈವಿಧ್ಯದಿಂದ ಕೂಡಿದೆ’ ಎಂದು ಲೇಖಕಿ ಮಮತಾ ಜಿ. ಸಾಗರ್ ಹೇಳಿದರು.
ಅಖಿಲ ಭಾರತೀಯ ಕೊಂಕಣಿ ಪರಿಷತ್ತು ಇಲ್ಲಿನ ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ಏರ್ಪಡಿಸಿದ್ದ 25ನೇ ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಅವರು ‘ಸಾಹಿತ್ಯ ಮತ್ತು ಸಾಮಾಜಿಕ ಜವಾಬ್ದಾರಿ’ ಕುರಿತು ಭಾನುವಾರ ಮಾತನಾಡಿದರು.
‘ಗೋವಾ, ಕರ್ನಾಟಕ, ಕೇರಳದಲ್ಲಿ ಕೊಂಕಣಿ ಭಾಷಿಕರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಇಲ್ಲಿನ ಕೊಂಕಣಿ ಸಾಹಿತ್ಯದ ಮೇಲೆ ಇತರ ಸ್ಥಳೀಯ ಭಾಷೆಗಳ ಪ್ರಭಾವವೂ ಇರುವುದನ್ನು ನೋಡಬಹುದು. ಗೋವಾದ ಕೊಂಕಣಿಯಲ್ಲಿ ಅಲ್ಲಿನ ಸಂಸ್ಕೃತಿ, ಪೋರ್ಚುಗೀಸ್ ಆಳ್ವಿಕೆಯ ಇತಿಹಾಸದ ನೆರಳನ್ನು ಕಾಣಬಹುದು. ಪ್ರವಾಸೋದ್ಯಮವೂ ಅಲ್ಲಿನ ಕೊಂಕಣಿ ಸಾಹಿತ್ಯದ ಮೇಲೆ ಪ್ರಭಾವ ಬೀರಿದೆ. ಕೇರಳದಲ್ಲಿ ಎಡಪಂಥೀಯ ಸಿದ್ಧಾಂತ ಹಾಗೂ ಅಲ್ಲಿನ ರಾಜಕೀಯ ಆಗುಹೋಗುಗಳು ಕೊಂಕಣಿಯ ಸಾಹಿತ್ಯದ ಮೇಲೆ ಪ್ರಭಾವ ಬೀರಿವೆ. ಅಂತೆಯೇ ಕರ್ನಾಟಕದಲ್ಲಿ ಕೊಂಕಣಿ ಸಾಹಿತ್ಯ ಬೇರೆಯೇ ರೀತಿಯ ಸ್ಥಳೀಯ ಪ್ರಭಾವಕ್ಕೆ ಒಳಗಾಗಿದೆ’ ಎಂದರು.
‘ಭಾರತೀಯ ಭಾಷೆಗಳಲ್ಲಿ ವೈವಿಧ್ಯ ಇರುವುದೂ ಕೂಡಾ ಭಾಷಾ ಏಕತೆಗೆ ಕಾರಣವಾಗಿದೆ. ಇಂತಹ ವೈವಿಧ್ಯ ಇಲ್ಲದೇ ಹೋಗಿದ್ದರೆ ಏಕತೆ ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ. ಏಕತೆಯನ್ನು ರೂಪಿಸುವ ಇಂತಹ ವೈವಿಧ್ಯದ ಬಗ್ಗೆ ಸಂಭ್ರಮ ಪಡಬೇಕು. ಭಾಷೆ ಕೂಡ ಸಂಸ್ಕೃತಿ, ಪರಂಪರೆಯ ಭಾಗ. ರಾಜ್ಯದಲ್ಲೂ ಕನ್ನಡದ ಜೊತೆ ಕೊಂಕಣಿ ಭಾಷೆಯನ್ನೂ ಬೆಳೆಸಲು ನಾವು ಕಟಿಬದ್ಧರಾಗಬೇಕು’ ಎಂದರು.
ಸಮ್ಮೇಳನದ ಅಧ್ಯಕ್ಷರಾದ ಹೇಮಾ ನಾಯ್ಕ್ ಮಾತನಾಡಿ,‘ಕೊಂಕಣಿ ಭಾಷೆ ಮತ್ತು ಸಾಹಿತ್ಯವನ್ನು ಪ್ರೋತ್ಸಾಹಿಸುವುದು ಎಲ್ಲರ ಕರ್ತವ್ಯ’ ಎಂದರು.
‘ಎರಡು ದಿನಗಳಲ್ಲಿ ಈ ಕೊಂಕಣಿ ಸಾಹಿತ್ಯ ಹಬ್ಬದಲ್ಲಿ ಯುವಜನರೂ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಇದನ್ನು ನೋಡಿ, ಕೊಂಕಣಿ ಸಾಹಿತ್ಯ ಮತ್ತಷ್ಟು ಸಮೃದ್ಧವಾಗಿ ಬೆಳೆಯುತ್ತದೆ ಎನ್ನುವ ಭರವಸೆ ಮೂಡಿದೆ’ ಎಂದರು.
ಕೊಂಕಣಿ ಸಾಹಿತಿ ರೋನ್ ರೋಚ್ ಕಾಸಿಯಾ, ಕೊಂಕಣಿ ಶಿಕ್ಷಣಕ್ಕೆ ದುಡಿದ ಕಸ್ತೂರಿ ಮೋಹನ್ ಪೈ ಹಾಗೂ ಕೊಂಕಣಿ ಚಳವಳಿಯಲ್ಲಿ ತೊಡಗಿಸಿಕೊಂಡ ಕುಮಟಾದ ಶಿವರಾಮ ಕಾಮತ್ ಅವರನ್ನು ಸನ್ಮಾನಿಸಲಾಯಿತು.
ಸಮ್ಮೇಳನದ ಉಪಾಧ್ಯಕ್ಷ ಗೋಕುಲದಾಸ್ ಪ್ರಭು, ಅಖಿಲ ಭಾರತ ಕೊಂಕಣಿ ಪರಿಷತ್‍ನ ಕಾರ್ಯಾಧ್ಯಕ್ಷ ಚೇತನ್ ಆಚಾರ್ಯ, ಖಜಾಂಚಿ ಶಿರೀಸ್ ಪೈ, ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಮೈಕಲ್ ಡಿಸೋಜ ಇದ್ದರು. ಮನೋಜ್ ಫರ್ನಾಂಡಿಸ್ ನಿರೂಪಿಸಿದರು. ಸ್ವಾಗತ ಸಮಿತಿ ಕಾರ್ಯದರ್ಶಿ ಟೈಟಸ್ ನೊರೊನ್ಹಾ ವಂದಿಸಿದರು.
ಭಾಷೆ ಒಂದೇ– ಲಿಪಿ ಸೊಗಡು ಬೇರೆ ಬೇರೆ..
ವೇದಿಕೆಯಲ್ಲಿ ವಿದ್ವಾಂಸರು ಸಾಹಿತಿಗಳು ವಿಚಾರ ಮಂಡಿಸುತ್ತಿದ್ದರೆ ಸಭಿಕರ ಸಾಲಿನಲ್ಲಿ ಕುಳಿತ ಕೇರಳದ ಸಾಹಿತ್ಯಾಸಕ್ತರು ಮಲಯಾಳದಲ್ಲಿ ಕರ್ನಾಟಕದವರು ಕನ್ನಡ ಲಿಪಿಯಲ್ಲಿ ಗೋವಾ ಹಾಗೂ ಮಹಾರಾಷ್ಟ್ರದಿಂದ ಬಂದವರು ದೇವನಾಗರಿ ಲಿಪಿಯಲ್ಲಿ ಟಿಪ್ಪಣಿ ಮಾಡಿಕೊಳ್ಳುತ್ತಿದ್ದರು. ಕೊಂಕಣಿ ಭಾಷೆಯ ಮೂಲಕ ಮಂಡನೆಯಾದ ಒಂದೇ ವಿಚಾರ ಬೇರೆ ಬೇರೆ ಲಿಪಿಗಳ ಮೂಲಕ ಬೇರೆ ಬೇರೆ ರಾಜ್ಯಗಳ ಸಾಹಿತ್ಯಾಸಕ್ತರನ್ನು ತಲುಪುತ್ತಿತ್ತು. ‘ಮಂಗಳೂರಿನಲ್ಲೇ ಕಥೋಲಿಕರ ಕೊಂಕಣಿಗೂ ಗೌಡ ಸಾರಸ್ವತರು ಬಳಸುವ ಕೊಂಕಣಿಗೂ ಸಾಕಷ್ಟು ವ್ಯತ್ಯಾಸ ಇದೆ. ಇಲ್ಲಿನ ಕಥೋಲಿಕರು ಹಾಗೂ ಗೋವಾದ ಕಥೋಲಿಕರರು ಬಳಸುವ ಪದಗಳೂ ಬೇರೆ ಇರುತ್ತವೆ. ಈ ಭಾಷೆಯಲ್ಲಿ 42 ಆಡುಭಾಷೆಗಳಿವೆ. ಗೋವಾ ಕರ್ನಾಟಕ ಕೇರಳ ಹಾಗೂ ಮಹಾರಾಷ್ಟ್ರಗಳ ನಾಲ್ಕು ರಾಜ್ಯಗಳ ಸೊಗಡು ಅಡಗಿದೆ. ಇದೇ ಕೊಂಕಣಿ ಸಾಹಿತ್ಯದ ವಿಶೇಷ’ ಎನ್ನುತ್ತಾರೆ ಕೊಂಕಣಿ ಸಾಹಿತಿ ರೇಮಂಡ್ ತಾಕೊಡೆ. ಸಾಹಿತ್ಯ ಹಬ್ಬದ ವಿಚಾರಗೋಷ್ಠಿಗಳನ್ನು ಗಹನವಾಗಿ ಆಲಿಸುವುದರಲ್ಲಿ ಕೆಲವರು ತೊಡಗಿದ್ದರೆ ಪುಸ್ತಕ ಮಳಿಗೆಗಳ ಬಳಿಯೂ ಜನಸಂದಣಿ ಕಂಡು ಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.