ADVERTISEMENT

ಮಂಗಳೂರು ದಸರಾ: ಬೆಳ್ಳಿಪೀಠ, ವೀಣೆ ಸಮರ್ಪಣೆ

ಗೋಕರ್ಣನಾಥ ಸೇವಾ ಸಮಿತಿಯಿಂದ ಹೆಚ್ಚುವರಿ ಸೇವೆ; ವೀಣೆ ಕಾಣಿಕೆಯಾಗಿ ನೀಡಲಿರುವ ಭಕ್ತ ಕುಟುಂಬ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2022, 4:54 IST
Last Updated 19 ಸೆಪ್ಟೆಂಬರ್ 2022, 4:54 IST
ಬಿರುವೆರ್ ಕುಡ್ಲದ ಹುಲಿವೇಷಕ್ಕೆ ಸಂಬಂಧಿಸಿದ ಆಹ್ವಾನ ಪತ್ರವನ್ನು ಜನಾರ್ದನ ಪೂಜಾರಿ ಬಿಡುಗಡೆ ಮಾಡಿದರು. ಪದ್ಮರಾಜ್ ಆರ್ ಇದ್ದಾರೆ
ಬಿರುವೆರ್ ಕುಡ್ಲದ ಹುಲಿವೇಷಕ್ಕೆ ಸಂಬಂಧಿಸಿದ ಆಹ್ವಾನ ಪತ್ರವನ್ನು ಜನಾರ್ದನ ಪೂಜಾರಿ ಬಿಡುಗಡೆ ಮಾಡಿದರು. ಪದ್ಮರಾಜ್ ಆರ್ ಇದ್ದಾರೆ   

ಮಂಗಳೂರು: ನಗರದ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯಲಿರುವ ಮಂಗಳೂರು ದಸರಾದ ಸಂದರ್ಭದಲ್ಲಿ ಈ ಬಾರಿ ಗೋಕರ್ಣನಾಥ ಸೇವಾ ಸಮಿತಿ ಸದಸ್ಯರು ಶ್ರೀ ಶಾರದೆಗೆ ಬೆಳ್ಳಿ ಪೀಠ ಸಮರ್ಪಿಸುವರು. ಭಕ್ತರ ಕುಟುಂಬವೊಂದು ಬೆಳ್ಳಿಯ ವೀಣೆಯನ್ನು ಹರಕೆಯ ರೂಪದಲ್ಲಿ ಸಲ್ಲಿಸಲು ಮುಂದಾಗಿದೆ.

ದಸರಾ ಆಚರಣೆಗೆ ಸಂಬಂಧಿಸಿ ಗೋಕರ್ಣನಾಥ ಕ್ಷೇತ್ರದ ನವೀಕರಣದ ರೂವಾರಿ ಜನಾರ್ದನ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಗೋಕರ್ಣನಾಥ ಕ್ಷೇತ್ರದಲ್ಲಿ ಭಾನುವಾರ ಸಂಜೆ ಸುದೀರ್ಘ ಕಾಲ ನಡೆದ ಸಭೆಯ ನಂತರ ಕ್ಷೇತ್ರಾಡಳಿತ ಮಂಡಳಿ ಖಜಾಂಚಿ ಪದ್ಮರಾಜ್ ಆರ್‌ ಈ ವಿಷಯ ತಿಳಿಸಿದರು.

‘ಸೇವಾ ಸಮಿತಿಯವರು ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ಸ್ವರ್ಣ ಸೇವೆ ಮಾಡುತ್ತಾರೆ. ಈ ಬಾರಿ ಇದರೊಂದಿಗೆ ಬೆಳ್ಳಿ ಪೀಠ ನೀಡಲು ನಿರ್ಧರಿಸಿದ್ದಾರೆ. 12 ಕೆಜಿ ತೂಕದ ಪೀಠದ ಒಟ್ಟು ವೆಚ್ಚ ₹ 12 ಲಕ್ಷ ಆಗಿರುತ್ತದೆ. ಪುತ್ತೂರಿನಲ್ಲಿ ಕೆತ್ತನೆ ಕೆಲಸ ನಡೆಯುತ್ತಿದೆ. ಭಕ್ತರ ಕುಟುಂಬವೊಂದು ಹರಕೆ ಸೇವೆಯಾಗಿ ಬೆಳ್ಳಿಯ ವೀಣೆ ನೀಡಲಿದೆ’ ಎಂದು ಅವರು ತಿಳಿಸಿದರು.

ADVERTISEMENT

‘ಅನ್ನಸಂತರ್ಪಣೆ ಇರುತ್ತದೆ. ಮೆರವಣಿಗೆಯಲ್ಲಿ ಈ ಬಾರಿ ಯಾವ ವ್ಯತ್ಯಾಸವೂ ಇರುವುದಿಲ್ಲ. ಚಂಡಿಕಾ ಯಾಗ ಅಕ್ಟೋಬರ್ 3ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ. ಕೊರೊನಾದಿಂದಾಗಿ ಹಿಂದಿನ ಎರಡು ವರ್ಷ ಭಕ್ತರಿಗೆ ಬರಲು ಸಾಧ್ಯವಾಗಲಿಲ್ಲ. ಆದ್ದರಿಂದ ಈ ವರ್ಷ ಗರಿಷ್ಠ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆ ಇದೆ. ಜನರ ದಸರಾ ಎಂದೇ ಹೆಸರಾಗಿರುವ ಮಂಗಳೂರು ದಸರಾ ಯಶಸ್ವಿಗೊಳಿಸಲು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದಿದೆ’ ಎಂದು ಅವರು ವಿವರಿಸಿದರು.

ಮುಖ್ಯಮಂತ್ರಿಗೆ ಆಹ್ವಾನ: ಪೂಜಾರಿ

ಮಂಗಳೂರು ದಸರಾದಲ್ಲಿ ಪಾಲ್ಗೊಳ್ಳುವಂತೆ ರಾಜ್ಯದ ಮುಖ್ಯಮಂತ್ರಿಗೆ ಆಹ್ವಾನ ನೀಡಲಾಗುವುದು. ವೈಯಕ್ತಿಕವಾಗಿ ನಾನು ಕರೆ ಮಾಡಿ ಕರೆಯುವೆ. ಅವರು ಬಂದರೆ ನಮಗೆಲ್ಲ ಅತ್ಯಂತ ಖುಷಿಯಾಗಲಿದೆ ಎಂದು ಜನಾರ್ದನ ಪೂಜಾರಿ ಹೇಳಿದರು.

ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ವಿಜೃಂಭಣೆಯಿಂದ ದಸರಾ ಆಚರಿಸಲು ನಿರ್ಧರಿಸಲಾಗಿದೆ. ಮುಖ್ಯಮಂತ್ರಿ ಬರುವ ವಿಶ್ವಾಸ ಇದೆ. ಒತ್ತಾಯ ಮಾಡುವುದಿಲ್ಲ ಎಂದು ಹೇಳಿದರು.

ಕ್ಷೇತ್ರಾಡಳಿ ಮಂಡಳಿ ಅಧ್ಯಕ್ಷ ಎಚ್‌.ಎಸ್.ಸಾಯಿರಾಜ್‌, ಕಾರ್ಯದರ್ಶಿ ಬಿ.ಮಾಧವ ಸುವರ್ಣ, ಉಪಾಧ್ಯಕ್ಷೆ ಊರ್ಮಿಳಾ ರಮೇಶ್‌, ಮುಖಂಡರಾದ ರವಿಶಂಕರ್ ಮಿಜಾರ್‌, ಕೆ.ಮಹೇಶ್ಚಂದ್ರ, ಎಂ.ಶೇಖರ್ ಪೂಜಾರಿ, ಹರಿಕೃಷ್ಣ ಬಂಟ್ವಾಳ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.