ಮಂಗಳೂರು: ಕುಡುಬಿ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸುವ ಮೂಲಕ ಸಂವಿಧಾನದ ಅನುಚ್ಛೇದ 341 (1) ರಂತೆ ಇದ್ದ ಸಾಂವಿಧಾನಿಕ ಹಕ್ಕನ್ನು ಮರಳಿ ನೀಡಬೇಕು ಎಂದು ಒತ್ತಾಯಿಸಿ ಕುಡುಬಿ ಸಮುದಾಯದವರು ಹಕ್ಕೊತ್ತಾಯ ಜಾಥಾ ನಡೆಸಿದರು.
ನಗರದ ಡಾ.ಬಿ. ಆರ್. ಅಂಬೇಡ್ಕರ್ ವೃತ್ತದಿಂದ ಮಿನಿ ವಿಧಾನ ಸೌಧದ ವರೆಗೆ ಪಾದಯಾತ್ರೆ ನಡೆಸಿದ ಅವರು, ತಮಗೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಆಗ್ರಹಿಸಿದರು.
1936ರ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಕುಡುಬಿ ಸಮುದಾಯದ ಹೆಸರು ಒಳಗೊಂಡಿತ್ತು. 1950ರಲ್ಲಿ ಕುಡುಬಿ ಜಾತಿಯನ್ನು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿಸಿ ಸಾಂವಿಧಾನಿಕ ರಕ್ಷಣೆ ನೀಡಲಾಗಿತ್ತು. ಆದರೆ, 1956ರ ಮಾರ್ಪಾಡು ಆದೇಶದಲ್ಲಿ ಕುಡುಬಿ ಜಾತಿಯ ಹೆಸರನ್ನು ಕುಡುಂಬನ್ ಎಂದು ತಪ್ಪಾಗಿ ಮುದ್ರಿಸಿ ನಮ್ಮ ಸಮುದಾಯವನ್ನು ಹಕ್ಕಿನಿಂದ ವಂಚಿತರನ್ನಾಗಿ ಮಾಡಲಾಗಿದೆ. ನಮಗೆ ಆಗಿರುವ ಅನ್ಯಾಯ ಸರಿಪಡಿಸಬೇಕು. ಕೇಂದ್ರ ಸರ್ಕಾರವು ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಕುಡುಬಿ ಸಮಾಜ ಸೇವಾ ಸಂಘದ ಅಧ್ಯಕ್ಷ ಕೃಷ್ಣ ಕೊಂಪದವು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.