ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ದೇವಳದ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯ ಗರ್ಭಗುಡಿಯಿಂದ ಮೂಲ ಮೃತ್ತಿಕೆ ಪ್ರಸಾದವನ್ನು ತೆಗೆದು ಭಕ್ತರಿಗೆ ವಿತರಿಸಿದರು.
ಅಪಾರ ಸಂಖ್ಯೆಯಲ್ಲಿ ಭಕ್ತರು ಬೆಳಗ್ಗೆ 10 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತು, ಮೃತ್ತಿಕಾ ಪ್ರಸಾದ ಪಡೆದುಕೊಂಡರು. ಮಧ್ಯಾಹ್ನ 2 ಗಂಟೆಯ ನಂತರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಯಿತು. ಏಕಾದಶಿ ದಿನವಾದ್ದರಿಂದ ದೇವರ ದರ್ಶನದ ಬಳಿಕ ಆಯ್ದ ಸೇವೆಗಳನ್ನು ಭಕ್ತರು ನೆರವೇರಿಸಿದರು.
ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕಳ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬ್ಲಡ್ಕ, ಕಡಬ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಮಾಸ್ಟರ್‌ಪ್ಲಾನ್ ಸಮಿತಿ ಸದಸ್ಯರಾದ ಸತೀಶ್ ಕೂಜುಗೋಡು, ಲೋಲಾಕ್ಷ ಕೈಕಂಬ, ಪವನ್ ಎಂ.ಡಿ, ಅಚ್ಚುತ ಆಲ್ಕಬೆ, ದೇವಸ್ಥಾನದ ಸಿಬ್ಬಂದಿ, ಭಕ್ತರು ಇದ್ದರು.
ಅಖಂಡ ಭಜನೋತ್ಸವ
ಕೊಪ್ಪರಿಗೆ ಏರುವುದರ ಮೂಲಕ ಕುಕ್ಕೆ ಕ್ಷೇತ್ರದಲ್ಲಿ ಬುಧವಾರದಿಂದ ಜಾತ್ರೋತ್ಸವ ಆರಂಭವಾಗಲಿದೆ. ಡಿ.7ರಂದು ಕಾರ್ತಿಕ ಬಹುಳ ಶುದ್ಧಷಷ್ಠಿಯಂದು ಬೆಳಿಗ್ಗೆ ಚಂಪಾಷಷ್ಠಿ ಮಹಾರಥೋತ್ಸವ ನಡೆಯಲಿದೆ. ಎಲ್ಲ ದೇವಾಲಯಗಳಲ್ಲಿ ಕೊಡಿ ಏರಿ ಜಾತ್ರೆ ಆರಂಭವಾದರೆ ಕುಕ್ಕೆ ಕ್ಷೇತ್ರದಲ್ಲಿ ಕೊಪ್ಪರಿಗೆ ಏರುವುದರ ಮೂಲಕ ಜಾತ್ರೆ ಆರಂಭವಾಗುತ್ತದೆ. ರಾಮ-ಲಕ್ಷ್ಮಣ ಎಂಬ ಎರಡು ಕೊಪ್ಪರಿಗೆಗಳನ್ನು ಏರಿಸುವುದರ ಮೂಲಕ ಜಾತ್ರೆಗೆ ಚಾಲನೆ ನೀಡಲಾಗುತ್ತದೆ. ಜಾತ್ರೋತ್ಸವ ಆರಂಭದ ದಿನವಾದ ಬುಧವಾರ ದೇವಳದಲ್ಲಿ ಅಖಂಡ ಭಜನೋತ್ಸವ ನಡೆಯಲಿದೆ. ಬುಧವಾರ ಬೆಳಗ್ಗೆ 6 ಗಂಟೆಯಿಂದ ಗುರುವಾರ ಬೆಳಿಗ್ಗೆ 6 ಗಂಟೆಯ ತನಕ 24 ಗಂಟೆ ದೇವಳದ ಧರ್ಮಸಮ್ಮೇಳನ ಮಂಟಪದಲ್ಲಿ ಭಜನೋತ್ಸವ ನಡೆಯಲಿದೆ. ನ.27ರಂದು ಕೊಪ್ಪರಿಗೆ ಏರಿ ಡಿ.12ರಂದು ಕೊಪ್ಪರಿಗೆ ಇಳಿಯುವವರೆಗೆ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಸೇವೆ ಜರುಗುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.