ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮುಜಾರಾಯಿ ಮಾಜಿ ಸಚಿವ ಕೃಷ್ಣಯ್ಯ ಸೆಟ್ಟಿ ಅವರ ದೇಣಿಗೆಯಲ್ಲಿ ನಿರ್ಮಾಣವಾಗಲಿರುವ ಆಶ್ಲೇಷ ಬಲಿ ನೆರವೇರಿಸುವ ಕಟ್ಟಡ ಹಾಗೂ ಮಾಜಿ ಸಚಿವ ಆನಂದ ಸಿಂಗ್ ಸಪ್ತಧೇನು ಗೋಧಾಮ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ಶನಿವಾರ ನಡೆಯಿತು.
ಕೃಷ್ಣ ಶೆಟ್ಟಿ ಗುದ್ದಲಿ ಪೂಜೆ ನೆರವೇರಿಸಿದರು. ಮಾಜಿ ಸಚಿವ ಆನಂದ ಸಿಂಗ್ ದೇಣಿಗೆಯಲ್ಲಿ ಅಂದಾಜು ₹ 25 ಲಕ್ಷ ವೆಚ್ಚದಲ್ಲಿ, ಆದಿಸುಬ್ರಹ್ಮಣ್ಯ ಸಂಪರ್ಕಿಸುವ ರಸ್ತೆಯ ಬಳಿ ಸಪ್ತಧೇನು ಗೋಧಾಮ ನಿರ್ಮಾಣವಾಗಲಿದೆ. ದೇವಳದ ಅನ್ನಛತ್ರದ ಬಳಿ ಆಶ್ಲೇಷ ಬಲಿ ನೆರವೇರಿಸುವ ಕಟ್ಟಡ ನಿರ್ಮಾಣವಾಗಲಿದೆ. ಮಂಡ್ಯದ ಮದ್ದೂರಿನ ಜಗದೀಶ, ಸುಧಾ, ಪುಣ್ಯ, ದಕ್ಷಶ್ರೀ ಅವರು ದೇವಳಕ್ಕೆ ಗೋದಾನದ ಕಾಣಿಕೆಯಾಗಿ ₹ 1ಲಕ್ಷ ನೀಡಿದ್ದಾರೆ.
ಕ್ಷೇತ್ರದ ಅರ್ಚಕರಾದ ಮಧುಸೂದನ್ ಕಲ್ಲುರಾಯ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಮೋಹನ್‌ರಾಂ ಸುಳ್ಳಿ, ಸದಸ್ಯರಾದ ಶ್ರೀವತ್ಸಾ ಬೆಂಗಳೂರು, ಶೋಭಾ ಗಿರಿಧರ್, ಮನೋಹರ ರೈ, ವನಜಾ ವಿ.ಭಟ್, ದೇವಳದ ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತ ಕಲ್ಲಾಜೆ, ಪ್ರಮುಖರಾದ ಕೃಷ್ಣಮೂರ್ತಿ ಭಟ್, ವಿಮಲ ರಂಗಯ್ಯ, ಹರೀಶ್ ಇಂಜಾಡಿ, ಲೋಲಾಕ್ಷ, ಪವನ್, ಅಚ್ಯುತ ಗೌಡ ಬಳ್ಪ, ಶಿವರಾಮ ರೈ, ದೇವಳದ ಪದ್ಮನಾಭ ಶೆಟ್ಟಿಗಾರ್, ಎಂಜಿನಿಯರ್ ಉದಯಕುಮಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.