ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವರ ಲಕ್ಷದೀಪೋತ್ಸವವು ಭಕ್ತಿ-ಸಡಗರದಿಂದ ಬುಧವಾರ ರಾತ್ರಿ ನೆರವೇರಿತು. ಪಂಚ ಶಿಖರಗಳನ್ನೊಳಗೊಂಡ ಚಂದ್ರಮಂಡಲ ರಥದಲ್ಲಿ ಸುಬ್ರಹ್ಮಣ್ಯ ದೇವರ ಉತ್ಸವ ಮೆರವಣಿಗೆ ನಡೆಯಿತು.
ರಥಬೀದಿಯಿಂದ ಕಾಶಿಕಟ್ಟೆ ತನಕ ಲಕ್ಷ ಹಣತೆಗಳು ಬೆಳಗುತ್ತಿದ್ದಂತೆಯೇ ಇಲ್ಲಿ ಬೆಳಕಿನ ಲೋಕವೇ ಧರೆಗವತರಿಸಿದಂತೆ ಭಾಸವಾಯಿತು. ಲಕ್ಷದೀಪೋತ್ಸವದ ರಥೋತ್ಸವದೊಂದಿಗೆ ಶ್ರೀದೇವರ ರಥಬೀದಿ ಉತ್ಸವ ಆರಂಭವಾಯಿತು.
ಶ್ರೀ ದೇವಳದ ಗೋಪುರದಿಂದ ಕಾಶಿಕಟ್ಟೆ ತನಕ, ಹನುಮಂತಗುಡಿ, ಸವಾರಿ ಮಂಟಪ, ಆದಿಸುಬ್ರಹ್ಮಣ್ಯ, ಬೈಪಾಸ್, ಕುಮಾರಧಾರ ಸೇರಿದಂತೆ ಕ್ಷೇತ್ರದ ವಿವಿಧೆಡೆ ಹಣತೆಗಳು ಬೆಳಗಿದವು.
ಅಂಕುರಾರ್ಪಣೆ:
ಸಂಜೆ ಆದಿ ಸುಬ್ರಹ್ಮಣ್ಯದಲ್ಲಿ ದೀಪಾಂಕೃತ ರಂಗಪೂಜೆ, ಬಳಿಕ ಪ್ರಧಾನ ದೇವಾಲಯದಲ್ಲಿ 16 ಮಡಿಕೆಗಳಲ್ಲಿ ಮಣ್ಣು ಮತ್ತು ಮರಳನ್ನು ಮಿಶ್ರಮಾಡಿ ನವಧಾನ್ಯಗಳನ್ನು ಬಿತ್ತುವ ಅಂಕುರಾರ್ಪಣೆ ವಿಧಿಗಳು ನೆರವೇರಿದವು. ಮಹಾಪೂಜೆ ಬಳಿಕ ನಡೆದ ಹೊರಾಂಗಣ ಉತ್ಸವದಲ್ಲಿ ಕಾಚುಕುಜುಂಬ ದೈವವು ಶ್ರೀದೇವರನ್ನು ಭೇಟಿಯಾಗಿ ನುಡಿಗಟ್ಟು ನಡೆಯಿತು. ಬಳಿಕ ಶ್ರೀ ದೇವರ ಶೇಷವಾಹನಯುಕ್ತ ಬಂಡಿ ಉತ್ಸವ ಮತ್ತು ಪಾಲಕಿ ಉತ್ಸವ ನೆರವೇರಿತು.
ರಥಬೀದಿಯಲ್ಲಿ ಪಂಚ ಶಿಖರಗಳನ್ನಳಗೊಂಡ ಚಂದ್ರಮಂಡಲ ರಥದಲ್ಲಿ ಆರೂಢರಾದಶ್ರೀ ದೇವರರಿಗೆ ಪೂಜೆ ಸಲ್ಲಿಸಲಾಯಿತು. ನಂತರ ಕಾಶಿಕಟ್ಟೆ ತನಕ ಉತ್ಸವ ನೆರವೇರಿತು. ಶ್ರೀದೇವರು ಚಂದ್ರಮಂಡಲ ರಥದಲ್ಲಿ ಆಗಮಿಸುವುದು ಲಕ್ಷ ದೀಪೋತ್ಸವದ ದಿನ ಮಾತ್ರ. ಆನೆ ಯಶಸ್ವಿ, ಬಿರುದಾವಳಿಗಳು, ಬ್ಯಾಂಡ್, ನಾದಸ್ವರ, ತವಿಲ್‌ಗಳು ಉತ್ಸವಕ್ಕೆ ವಿಶೇಷ ಮೆರುಗು ನೀಡಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.