ADVERTISEMENT

ಅಕ್ಟೋಬರ್‌ 7ರಿಂದ ಕುಮಾರಪರ್ವತ ಚಾರಣಕ್ಕೆ ಅವಕಾಶ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2023, 14:38 IST
Last Updated 6 ಅಕ್ಟೋಬರ್ 2023, 14:38 IST
ಕುಮಾರಪರ್ವತದ ವಿಹಂಗಮ ನೋಟ
ಕುಮಾರಪರ್ವತದ ವಿಹಂಗಮ ನೋಟ   

ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ಮಹತೋಭಾರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹಿಂಭಾಗದಲ್ಲಿರುವ ಕುಮಾರಪರ್ವತ ಚಾರಣಕ್ಕೆ ವಿಧಿಸಿದ್ದ ನಿರ್ಬಂಧವನ್ನು ತೆರವು ಮಾಡಲಾಗಿದ್ದು, ಶನಿವಾರದಿಂದ (ಅ.7) ಅವಕಾಶ ಕಲ್ಪಿಸಲಾಗಿದೆ.

ಬಿರು ಬೇಸಿಗೆ ಮತ್ತು ಭಾರಿ ಮಳೆಯ ಕಾರಣಕ್ಕೆ ಮೇ ತಿಂಗಳಿನಿಂದ ಸೆ.29ರವರೆಗೆ ಅರಣ್ಯ ಇಲಾಖೆ ಚಾರಣಿಗರಿಗೆ ನಿರ್ಬಂಧ ವಿಧಿಸಿತ್ತು. ಸೆ.30ರಿಂದ ಚಾರಣ ಆರಂಭಗೊಂಡಿತ್ತು. ಈ ಮಧ್ಯೆ ಭಾರಿ ಮಳೆಯಿಂದ ಅ.3ರಿಂದ ಮತ್ತೆ ನಿರ್ಬಂಧ ವಿಧಿಸಲಾಗಿತ್ತು.

ಚಾರಣ ಆರಂಭಗೊಂಡಿರುವುದರಿಂದ ಪರ್ವತದ ದಾರಿಯಲ್ಲಿ ಮತ್ತು ಪರ್ವತದಲ್ಲಿ ಸ್ವಚ್ಛತೆ ಕಾಪಾಡಲು ಅರಣ್ಯ ಇಲಾಖೆ ವ್ಯವಸ್ಥೆ ಮಾಡಿದೆ. ಕುಮಾರಪರ್ವತ, ಗಿರಿಗದ್ದೆ, ಕಲ್ಲಚಪ್ಪರ ಸೇರಿದಂತೆ ವಿವಿಧೆಡೆ ಸೂಚನಾ ಫಲಕ ಅಳವಡಿಸಿ ಜಾಗೃತಿ ಮೂಡಿಸಲಾಗುತ್ತಿದೆ. ಪ್ಲಾಸ್ಟಿಕ್ ಬಾಟಲಿ, ಪ್ಲಾಸ್ಟಿಕ್ ಕವರ್, ಪ್ಲಾಸ್ಟಿಕ್ ವಸ್ತುಗಳನ್ನು ಕೊಂಡೊಯ್ಯದಂತೆ ನಿರ್ಬಂಧ ವಿಧಿಸಲಾಗಿದೆ.

ADVERTISEMENT

ಸುಬ್ರಹ್ಮಣ್ಯದಿಂದ ಸುಮಾರು 13 ಕಿ.ಮೀ. ಕಾಡು, ಬೆಟ್ಟಗಳಲ್ಲಿ ಚಾರಣ ನಡೆಸಿ ಕುಮಾರಪರ್ವತದ ತುದಿ ಏರಬಹುದು. ಸುಮಾರು 5 ಕಿ.ಮೀ. ಕ್ರಮಿಸಿದಾಗ ಗಿರಿಗದ್ದೆ ಎಂಬಲ್ಲಿ ಜೋಯಿಸರ ಮನೆ ಇದ್ದು, ಚಾರಣಿಗರಿಗೆ ಊಟ, ಉಪಾಹಾರ, ನೀರು ಲಭ್ಯ. ಕುಮಾರಪರ್ವತವನ್ನು ಸುಬ್ರಹ್ಮಣ್ಯದಿಂದ ಏರಲು ಹೊರಟರೆ ಲೆಂಕಿರಿಗುಡ್ಡ, ಗಿರಿಗದ್ದೆ, ಅರಣ್ಯ ಇಲಾಖೆ ಚೆಕ್‌ಪೋಸ್ಟ್‌, ಕಲ್ಲುಚಪ್ಪರ, ಶೇಷಪರ್ವತ, ಭತ್ತದ ರಾಶಿ, ಸಿದ್ಧ ಪರ್ವತ ದಾಟಿ ಹೋಗಬೇಕು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.