ಮಂಗಳೂರು: ಕರ್ನಾಟಕ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ ಆಡಳಿತ ಮಂಡಳಿ (ಕುಪ್ಮಾ) ಆಶ್ರಯದಲ್ಲಿ ರಾಜ್ಯ ಮಟ್ಟದ ಪದವಿ ಪೂರ್ವ ಶಿಕ್ಷಣ, ಮುಕ್ತ ಸಮಾವೇಶವು ಜ.5 ಮತ್ತು 6ರಂದು ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ನಡೆಯಲಿದೆ.
ಜ.5ರಂದು ಬೆಳಿಗ್ಗೆ 11.30ರಿಂದ 12.30ರವರೆಗೆ ನೋಂದಣಿ, ಮಧ್ಯಾಹ್ನ 2ರಿಂದ 4ರವರೆಗೆ ಉದ್ಘಾಟನಾ ಅಧಿವೇಶನ, ಸಂಜೆ 4ಕ್ಕೆ ಕುಪ್ಮಾದ ಗುರಿ ಮತ್ತು ಉದ್ದೇಶಗಳ ಕುರಿತು ಗುಂಪು ಚರ್ಚೆ, 5.30ಕ್ಕೆ ಎರಡನೇ ಅಧಿವೇಶನದಲ್ಲಿ ‘ನಿಮ್ಮ ಜಿಲ್ಲೆಯಲ್ಲಿ ಕುಪ್ಮಾದ ಬಲವಾದ ಸಂಘವನ್ನು ನಿರ್ಮಿಸುವುದು’ ಕುರಿತು ಚರ್ಚೆ, 7.30ರಿಂದ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ
ನಡೆಯಲಿದೆ.
ಜ.6ರಂದು ಬೆಳಿಗ್ಗೆ 9ರಿಂದ ‘ಖಾಸಗಿ ಪದವಿ ಪೂರ್ವ ಕಾಲೇಜುಗಳ ನಿರ್ವಹಣೆಯ ಸವಾಲುಗಳು’ ಕುರಿತು ಗುಂಪು ಚರ್ಚೆ, 11ರಿಂದ ನಡೆಯುವ ಎರಡನೇ ಗೋಷ್ಠಿಯಲ್ಲಿ ‘ರಾಷ್ಟ್ರ ನಿರ್ಮಾಣದಲ್ಲಿ ಖಾಸಗಿ ಪದವಿ ಪೂರ್ವ ಕಾಲೇಜುಗಳ ಪಾತ್ರ’ ಕುರಿತು ಚರ್ಚೆ ನಡೆಯಲಿದೆ. ಸಂಪನ್ಮೂಲ ವ್ಯಕ್ತಿಗಳು ವಿಷಯ ಮಂಡನೆ ಮಾಡಲಿದ್ದಾರೆ. ನಂತರ 12.30ರಿಂದ ಸಮಾರೋಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕುಪ್ಮಾದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ತಿಳಿಸಿದ್ದಾರೆ.
ಎರಡು ದಿನಗಳ ಸಮಾವೇಶವನ್ನು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಉದ್ಘಾಟಿಸುವರು. ಅತಿಥಿಗಳಾಗಿ ಶಾಸಕ ಉಮಾನಾಥ್ ಕೋಟ್ಯಾನ್, ಬೆಂಗಳೂರಿನ ಪರಿಶ್ರಮ ನೀಟ್ ಅಕಾಡೆಮಿಯ ಸಂಸ್ಥಾಪಕ, ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್, ಎಂಎಲ್‍ಸಿ ಭೋಜೇಗೌಡ, ಮಾಜಿ ಸಚಿವ ಅಭಯಚಂದ್ರ ಜೈನ್, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ, ಮಂಗಳೂರು ಕಥೋಲಿಕ್ ಬೋರ್ಡ್ ಆಫ್ ಎಜುಕೇಷನ್ ಕಾರ್ಯದರ್ಶಿ ಫಾದರ್ ಲಿಯೋ ಲಾಸ್ರಾಡೊ, ಕುಪ್ಮಾದ ಗೌರವ ಅಧ್ಯಕ್ಷರಾದ
ಕೆ.ಸಿ.ನಾಯಕ್, ಎಂ.ಬಿ ಪುರಾಣಿಕ್ ಭಾಗವಹಿಸುವರು. ರಾಜ್ಯದ ಅನುದಾನರಹಿತ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಗಳ ಅಧ್ಯಕ್ಷರು, ಸಂಚಾಲಕರು, ಕಾರ್ಯದರ್ಶಿಗಳು, ಸದಸ್ಯರು ಸಮಾವೇಶದಲ್ಲಿ ಭಾಗವಹಿಸಬೇಕು ಎಂದು ಕುಪ್ಮಾದ ಕಾರ್ಯದರ್ಶಿ ಪ್ರೊ. ನರೇಂದ್ರ ಎಲ್.ನಾಯಕ್ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.