ADVERTISEMENT

ಗೇರು ಸಂಸ್ಕರಣೆಯಲ್ಲಿ ರೈತ ದಂಪತಿಯ ‘ಮಾದರಿ’

ಗಣೇಶ ಚಂದನಶಿವ
Published 25 ನವೆಂಬರ್ 2024, 7:31 IST
Last Updated 25 ನವೆಂಬರ್ 2024, 7:31 IST
<div class="paragraphs"><p>ಗೇರು ಸಂಸ್ಕರಣಾ ಘಟಕದಲ್ಲಿ ವಿಶ್ವಕೇಶವ ಕೆ. ಮತ್ತು ನವ್ಯಶ್ರೀ ದಂಪತಿ : ಪ್ರಜಾವಾಣಿ ಚಿತ್ರ</p></div>

ಗೇರು ಸಂಸ್ಕರಣಾ ಘಟಕದಲ್ಲಿ ವಿಶ್ವಕೇಶವ ಕೆ. ಮತ್ತು ನವ್ಯಶ್ರೀ ದಂಪತಿ : ಪ್ರಜಾವಾಣಿ ಚಿತ್ರ

   

ಮಂಗಳೂರು: ಕಾಸರಗೋಡು ಜಿಲ್ಲೆ ಪೈವಳಿಕೆ ಧರ್ಮತಡ್ಕದ ಕುರುವೇರಿ ಫಾರ್ಮ್‌ನ ವಿಶ್ವ ಕೇಶವ ಕೆ. ಮತ್ತು ನವ್ಯಶ್ರೀ ರೈತ ದಂಪತಿ ತಮ್ಮ ತೋಟದಲ್ಲಿ ಬೆಳೆಯುವ ಕಚ್ಚಾ ಗೇರು ಬೀಜವನ್ನು ತಾವೇ ಸಂಸ್ಕರಿಸಿ, ಮಾರಾಟ ಮಾಡುತ್ತಿದ್ದಾರೆ.

ಕಚ್ಚಾ ಗೇರು ಬೀಜಕ್ಕೆ ಅಷ್ಟಾಗಿ ದರ ಬಾರದ ಕಾರಣ ಲಾಭದಾಯಕವಾಗಿ ಮಾಡಿಕೊಂಡು ಗಮನ ಸೆಳೆಯುತ್ತಿದ್ದಾರೆ. ಇವರು ಉತ್ಪಾದಿಸುವ ‘ಕುರುವೇರಿ ಕ್ಯಾಶ್ಯು’  ಬೇಡಿಕೆ ಪಡೆದುಕೊಳ್ಳುತ್ತಿದೆ. ಅಷ್ಟೇ ಅಲ್ಲ, ಅವರ ಈ ಗುಡಿ ಕೈಗಾರಿಕೆ ಈಗ ರೈತರ ಅಧ್ಯಯನ ಕೇಂದ್ರವಾಗಿಯೂ ಮಾರ್ಪಡುತ್ತಿದೆ. ಬಹುಪಾಲು ರೈತರು ಗೇರು ಕೃಷಿಯಿಂದ ವಿಮುಖರಾಗಿ ಆ ಜಾಗದಲ್ಲಿ ರಬ್ಬರ್‌ ಬೆಳೆಸುತ್ತಿದ್ದಾರೆ. ಇನ್ನೂ ಕೆಲವರು ಬೋರ್‌ವೆಲ್‌ ಕೊರೆಸಿ ಅಡಿಕೆ ತೋಟ ಮಾಡಿಕೊಂಡಿದ್ದಾರೆ. ಅವರ ಮಧ್ಯೆ ಈ ಯುವ ರೈತ ದಂಪತಿ ಗೇರು ಕೃಷಿಯನ್ನು ಲಾಭದಾಯಕ ವೃತ್ತಿಯಾಗಿಸಿದೆ.

ADVERTISEMENT

ಇವರಿಗೆ ಪೂರ್ವಜರ 14 ಎಕರೆ ಜಮೀನು ಇದ್ದು, ಐದು ಎಕರೆ ಪಾಳು ಬಿದ್ದಿತ್ತು. ಎಂಎಸ್‌ಡಬ್ಲ್ಯು ಮುಗಿಸಿರುವ ವಿಶ್ವ ಕೇಶವ ಕೆ. ಅವರು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು. ನೌಕರಿ ತೊರೆದು ಕೃಷಿಯಲ್ಲಿ ತೊಡಗಿದರು. ಕಚ್ಚಾ ಗೇರಿಗೆ ₹120ರಿಂದ ₹130 ದರ ಇತ್ತು. ಗೇರು ಕೃಷಿಗೆ ನೀರು ಬೇಡ ಎಂಬ ಕಾರಣಕ್ಕೆ ಪುತ್ತೂರಿನ ಗೇರು ಸಂಶೋಧನಾ ಸಂಸ್ಥೆಯಿಂದ 450 ಗೇರು ಗಿಡ (ಉಳ್ಳಾಲ ಮತ್ತು ಭಾಸ್ಕರ ತಳಿ) ತಂದು ನಾಟಿ ಮಾಡಿದರು. ನಾಲ್ಕು ವರ್ಷದಲ್ಲಿ ಇಳುವರಿ ಆರಂಭವಾಯಿತು. 

‘ಮೊದಲ ವರ್ಷ ಉತ್ತಮ ದರ ಬಂತು. ನಂತರ ದರ ಕುಸಿತ ಶುರುವಾಯಿತು. ಬೇಸಾಯಕ್ಕೆ ಮಾಡಿದ ವೆಚ್ಚವೂ ಬರಲಿಲ್ಲ. ಗೇರು ಬೀಜದ ಮೌಲ್ಯವರ್ಧನೆ ಮಾಡಿದರೆ ಹೇಗೆ ಎಂಬ ಚಿಂತನೆ ಮೊಳಕೆಯೊಡೆಯಿತು. ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಕೆಲವೆಡೆ ಹೀಗೆ ರೈತರೇ ಸಂಸ್ಕರಣೆ ಮಾಡುತ್ತಿದ್ದಾರೆ. ಕೇರಳದಲ್ಲಿ ಕುಟುಂಬಶ್ರೀಯಲ್ಲಿಯೂ ಮಾಡಿದ್ದಾರೆ. ಅದು ನಮಗೆ ಪ್ರೇರಣೆಯಾಯಿತು. 2021ರಲ್ಲಿ ಪುಣೆಯಲ್ಲಿ ತರಬೇತಿ ಪಡೆದೆವು. ಯಂತ್ರೋಪಕರಣ ಖರೀದಿಸಿ ಗೇರು ಬೀಜ ಸಂಸ್ಕರಣೆ ಮತ್ತು ಮೌಲ್ಯವರ್ಧನೆಯನ್ನು ಪ್ರಾಯೋಗಿಕವಾಗಿ ಆರಂಭಿಸಿದೆವು. ಯಶಸ್ಸು ಲಭಿಸಿತು. ನಂತರ ಮತ್ತಷ್ಟು ಉಪಕರಣ ಖರೀದಿಸಿದೆವು. ಉತ್ಪಾದನೆ ಹೆಚ್ಚಿಸಿ ಮಾರುಕಟ್ಟೆ ಅಭಿವೃದ್ಧಿ ಪಡಿಸಿಕೊಂಡೆವು’ ಎನ್ನುತ್ತಾರೆ ಈ ದಂಪತಿ.

‘ಸುತ್ತಲಿನ ಊರುಗಳಲ್ಲಿ ಸಮಾರಂಭ ನಡೆಯುವ ಸ್ಥಳದಲ್ಲಿ ಸ್ಟಾಲ್‌ ಹಾಕಿ, ನಮ್ಮ ಉತ್ಪನ್ನ ಮಾರಾಟ ಮಾಡುತ್ತಿದ್ದೆವು. ‘ಅಜ್ಜಿ ಸುಟ್ಟು ಹಾಕಿದ ಗೇರು ಬೀಜ’ದಂತೆ ಸಿಹಿ ಮತ್ತು ವಿಭಿನ್ನತೆ ನೋಡಿ ಗ್ರಾಹಕರೇ ಪ್ರಚಾರ ಮಾಡಿದರು. ಒಮ್ಮೆ ಖರೀದಿಸಿದವರು ಮತ್ತೆ ಮತ್ತೆ ಖರೀದಿಸಿದರು. ಅವರೇ ತಮ್ಮ ಪರಿಚಿತರಿಗೆ ಹೇಳಿದರು. ಹೀಗೆ ಬಾಯಿಯಿಂದ ಬಾಯಿಗೆ ಪ್ರಚಾರವಾಗಿ ಮಾರುಕಟ್ಟೆ ಅಭಿವೃದ್ಧಿಯಾಯಿತು. ಸುತ್ತಲಿನ ಸ್ಥಳಗಳಿಗೆ ಖುದ್ದಾಗಿ ತಲುಪಿಸುತ್ತೇವೆ. ವಾಟ್ಸ್‌ಆ್ಯಪ್‌ (ವಾಟ್ಸ್‌ಆ್ಯಪ್‌: 94492 93632) ಮೂಲಕ ಬೇಡಿಕೆ ಸಲ್ಲಿಸಿದರೆ ದರ ಮತ್ತು ಅಂಚೆ ಕಚೇರಿ ಪಾರ್ಸೆಲ್‌ ವೆಚ್ಚದ ಮಾಹಿತಿ ನೀಡಿ, ಅಂಚೆ ಪಾರ್ಸೆಲ್‌ ಮೂಲಕ ಕಳಿಸುತ್ತೇವೆ. ಸಂಸ್ಕರಣೆ ಮತ್ತು ಪೊಟ್ಟಣಗಳಲ್ಲಿ ನೈಟ್ರೋಜನ್‌ ಅಥವಾ ಯಾವುದೇ ರಾಸಾಯನಿಕ ಬಳಸಲ್ಲ.

‘ನಮ್ಮ ತೋಟದಲ್ಲಿ ವರ್ಷಕ್ಕೆ 40 ಕ್ವಿಂಟಲ್‌ ಕಚ್ಚಾ ಗೇರು ಬೀಜ ಬೆಳೆಯುತ್ತದೆ. ನಮ್ಮ ಘಟಕಕ್ಕೆ ನಿತ್ಯ 200 ಕೆ.ಜಿ. ಉತ್ಪಾದನೆ ಸಾಮರ್ಥ್ಯವಿದ್ದು, ನಾವೀಗ 120 ಕೆ.ಜಿ. ಉತ್ಪಾದಿಸುತ್ತೇವೆ. ಈ ವರ್ಷ ರೈತರ ಬಳಿ ನಾವೇ ಹೋಗಿ ಹೈಬ್ರೀಡ್‌ ತಳಿಯ 25 ಕ್ವಿಂಟಲ್‌ ಗೇರನ್ನು ಖರೀದಿಸಿದ್ದೇವೆ. ಇದೇ ನಮಗೆ ವೃತ್ತಿ ಅಲ್ಲ. ಕೃಷಿಯೊಂದಿಗೆ ಇದು ಹೆಚ್ಚುವರಿ ಆದಾಯದ ಮೂಲ ಅಷ್ಟೇ. ಏಳು ಜನ ಕೆಲಸಗಾರರು ಮತ್ತು ನಾವಿಬ್ಬರು ಕೆಲಸ ಮಾಡುತ್ತೇವೆ. ಈ ಕೆಲಸ ಇಲ್ಲದಾಗ ಕೃಷಿ ಕಾಯಕ’ ಎಂದು ಅವರು ಹೇಳಿದರು.

ಆರನೇ ದಿನ ಮಾರಾಟಕ್ಕೆ ಸಿದ್ಧ

ಈ ಘಟಕದಲ್ಲಿ ಕಚ್ಚಾ ಗೇರಿನಿಂದ ಸಂಸ್ಕರಿತ ಗೇರು ಬೀಜ (ಗೋಡಂಬಿ) ಉತ್ಪಾದನೆಯಾಗಲು ಐದು ದಿನ ಬೇಕು. ಮೊದಲ ದಿನ ಕಚ್ಚಾ ಗೇರನ್ನು ಬಾಯ್ಲರ್‌ಗೆ ಹಾಕಿ ಹಬೆಯ ಮೂಲಕ ಬೇಯಿಸಿ ಅದನ್ನು (ಇಡ್ಲಿ ಬೇಯಿಸಿದ ಹಾಗೆ) ಒಣಗಲು ಹಾಕುತ್ತೇವೆ. ಒಣಗಲು 24 ಗಂಟೆ ಬೇಕು. ಮರುದಿನ ಕಟ್ಟಿಂಗ್‌ ಮಷಿನ್‌ಗೆ ಹಾಕಿ ಕಟ್ಟಿಂಗ್‌ಗೆ ಮಾಡುತ್ತೇವೆ. ಆ ನಂತರ ಸಿಪ್ಪೆ ಮತ್ತು ಬೀಜ ಬೇರ್ಪಡಿಸುವ ಕೆಲಸ. ಬೇರ್ಪಡಿಸಿದ ಬೀಜವನ್ನು ಡ್ರೈಯರ್‌ಗೆ ಹಾಕಿ ಒಣಗಿಸುತ್ತೇವೆ. ಆ ನಂತರ ಫಿಲಿಂಗ್‌ ಮಷಿನ್‌ಗೆ ಹಾಕಿ ಹೊಟ್ಟು ತೆಗೆಯುತ್ತೇವೆ. ಗಾಳಿಯ ಒತ್ತಡದ ಮೂಲಕ ಈ ಯಂತ್ರ ಕೆಲಸ ಮಾಡುತ್ತದೆ. ಶೇ 85ರಷ್ಟು ಹೊಟ್ಟು ಹೋಗುತ್ತದೆ. ಆ ನಂತರ ಗ್ರೇಡಿಂಗ್‌, ಕೊನೆಗೆ ವಾಕ್ಯೂಮ್‌ ಪ್ಯಾಕ್‌. ಆರನೇ ದಿನ ಮಾರಾಟಕ್ಕೆ ಸಿದ್ಧ. ಸಾಲ್ಟ್‌, ಪೆಪ್ಪರ್‌, ಚಿಲ್ಲಿ, ಜಿಂಜರ್‌ ಹೀಗೆ ವಿವಿಧ ಸ್ವಾದದಲ್ಲಿ ಬೇಕು ಎಂದು ಬೇಡಿಕೆ ಸಲ್ಲಿಸಿದರೆ ಅದರಂತೆ ಮೌಲ್ಯವರ್ಧನೆ ಮಾಡುತ್ತೇವೆ. ಗಾತ್ರಕ್ಕೆ ತಕ್ಕಂತೆ ವಿವಿಧ ಹಂತಗಳಲ್ಲಿ ಪ್ಯಾಕಿಂಗ್‌ ಮಾಡಿ ನಮ್ಮ ಮನೆತನದ ಹೆಸರು ‘ಕುರುವೇರಿ ಕ್ಯಾಶ್ಯು’ ಬ್ರ್ಯಾಂಡ್‌ ಅಡಿ ಮಾರಾಟ ಮಾಡುತ್ತೇವೆ ಎನ್ನುತ್ತಾರೆ ವಿಶ್ವಕೇಶವ ಮತ್ತು ನವ್ಯಶ್ರೀ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.