ಮಂಗಳೂರು: ‘ಮಂಗಳೂರು ಪೇಟೆಗೆ ಬರುವುದೇ ಬೇಸರ. ಮನದೊಳಗಿನ ಸಂಕಟ ಹೇಳಿಕೊಳ್ಳಲೂ ಮುಜುಗರ. ಪೇಟೆ ಓಡಾಟ, ಒಂದಿಷ್ಟು ಖರೀದಿ, ಕಚೇರಿ ಕೆಲಸವಿದ್ದರೆ ಮುಗಿಸಿ ಸಂಜೆ ವಾಪಸ್ಸಾಗುವುದಾದರೆ, ಹಸಿವೆ ಇಲ್ಲದಿದ್ದರೂ ಹೋಟೆಲ್‌ಗೆ ಹೋಗಲೇ ಬೇಕಾದ ಅನಿವಾರ್ಯತೆ. ಆ ಒತ್ತಡವನ್ನು ಎಷ್ಟು ಹೊತ್ತು ಸಹಿಸಿಕೊಳ್ಳಲಾದೀತು’ ಎನ್ನುತ್ತ ಮುಜುಗರದಿಂದ ಮುದುಡಿದರು ಗುರುಪುರದ ಪುಷ್ಪಾ.
‘ಬೇಗ ಕ್ಲಾಸ್‌ಗಳು ಮುಗಿದರೆ ಸ್ನೇಹಿತೆಯರೆಲ್ಲ ಸೇರಿ ಪೇಟೆ ಸುತ್ತಾಡಲು ಹೋಗುತ್ತೇವೆ. ಚಾಟ್ಸ್ ತಿಂದು, ಜ್ಯೂಸ್ ಕುಡಿದು ಎಂಜಾಯ್ ಮಾಡಿ, ಗ್ರಾಮಾಂತರ ಪ್ರದೇಶಗಳಿಗೆ ಹೋಗುವ ನಾಲ್ಕಾರು ಮಂದಿ ಸ್ನೇಹಿತೆಯರು ಜ್ಯೋತಿ ಸರ್ಕಲ್‌ಗೆ ಬಂದು ಬಸ್ ಕಾಯುತ್ತ ನಿಲ್ಲುವುದು ರೂಢಿ. ಹೀಗೆ ಬಂದು ನಿಂತಾಗ ಮನೆ ತಲುಪುವುದೇ ತವಕ. ಕತ್ತಲಾಗುತ್ತದೆಂಬ ಭಯವಲ್ಲ, ಅಣ್ಣ–ಅಪ್ಪ ಯಾರಾದರೂ ಕರೆದುಕೊಂಡು ಹೋಗಲು ಬರುತ್ತಾರೆ. ಆದರೆ, ಆ ಒತ್ತಡ ಸೃಷ್ಟಿಯಾದರೆ, ‘ಹಗುರಾಗುವುದು’ ಹೇಗೆಂಬ ಚಿಂತೆ. ಈ ಸ್ಥಿತಿಯಲ್ಲಿ ಹೊಂಡ–ಗುಂಡಿಯ ರಸ್ತೆಯ ಪ್ರಯಾಣ ನರಕಯಾತನೆ, ಮನೆ ತಲುಪಿದರೆ ಸಾಕು ಅನ್ನಿಸಿಬಿಡುತ್ತದೆ’ ಎಂದು ಸ್ನೇಹಿತೆಯರೆಲ್ಲರ ಅವ್ಯಕ್ತ ವೇದನೆಯನ್ನು ಒತ್ತಟ್ಟಿಗೆ ಹೊರಗಿಕ್ಕಿದರು ಬಿ.ಸಿ.ರೋಡ್‌ನಿಂದ ನಿತ್ಯ ಮಂಗಳೂರು ಕಾಲೇಜಿಗೆ ಬರುವ ವಿದ್ಯಾರ್ಥಿನಿ ಸಿಂಚನಾ.
ಇದು ಇವರಿಬ್ಬರದೇ ಸಂಕಟವಲ್ಲ, ಮಂಗಳೂರು ನಗರಕ್ಕೆ ಜಿಲ್ಲೆಯ ಬೇರೆ ಬೇರೆ ಭಾಗಗಳಿಂದ ಬರುವ ವಿದ್ಯಾರ್ಥಿಗಳು, ಉದ್ಯೋಗಸ್ಥರು, ಕಾರ್ಮಿಕರು, ಬಸ್ ಕಾಯುವವರು, ಪ್ರವಾಸಿಗರು, ದೂರದ ಊರುಗಳಿಂದ ಬಂದು ಮುಂಜಾವಿನಲ್ಲಿ ಬಸ್ ಇಳಿಯುವವರ ನಿತ್ಯದ ಗೋಳು. ವೇಗವಾಗಿ ಬೆಳೆಯುತ್ತಿರುವ ನಗರವು ‘ಸ್ಮಾರ್ಟ್’ ಆಗುತ್ತಿದೆ. ರಸ್ತೆಗಳು ಕಾಂಕ್ರೀಟ್ ಆಗುತ್ತಿವೆ, ಪಾದಚಾರಿ ಪಥಗಳು ಸುಸಜ್ಜಿತಗೊಳ್ಳುತ್ತಿವೆ, ದೊಡ್ಡ ಕಟ್ಟಡಗಳು ತಲೆ ಎತ್ತುತ್ತಿವೆ. ಆದರೆ, ಮೂಲ ಸೌಕರ್ಯಗಳಲ್ಲಿ ಒಂದಾಗಿರುವ ಸುಲಭ ಶೌಚಾಲಯಗಳನ್ನು ಹುಡುಕಿಕೊಂಡು ಅಲೆದಾಡುವ ಪರಿಸ್ಥಿತಿ.
ಪಂಪ್‌ವೆಲ್ ನಗರದ ಪ್ರಮುಖ ವೃತ್ತಗಳಲ್ಲಿ ಒಂದು. ಮೂಡುಬಿದಿರೆ, ಕಾಸರಗೋಡು ಭಾಗದಿಂದ ಬರುವವರು ಇಲ್ಲಿ ಬಸ್ ಇಳಿದು ಶಾಲೆ– ಕಾಲೇಜುಗಳಿಗೆ, ಉದ್ಯೋಗಕ್ಕೆ ಹೋಗುತ್ತಾರೆ. ಮತ್ತೆ ಊರಿಗೆ ತಲುಪುವ ಬಸ್ ಹಿಡಿಯಲು ಸಂಜೆ ಇದೇ ಸ್ಥಳಕ್ಕೆ ಬಂದು ನಿಲ್ಲುತ್ತಾರೆ. ಬಸ್ ಕಾಯುವವರಿಗೆ ಅನಿವಾರ್ಯವಾದರೆ ತೆರಳಲು ಸಾರ್ವಜನಿಕ ಶೌಚಾಲಯವೇ ಇಲ್ಲ ಇಲ್ಲಿ.
ಮೂರು ವರ್ಷಗಳ ಹಿಂದೆ ಕೆಲವು ವಿದ್ಯಾರ್ಥಿನಿಯರು ಅಂದಿನ ಜಿಲ್ಲಾಧಿಕಾರಿ ಭೇಟಿ ಮಾಡಿ, ಮನವಿ ಸಲ್ಲಿಸಿ, ಪಂಪ್‌ವೆಲ್ ವೃತ್ತದಲ್ಲಿ ಶೌಚಾಲಯದ ಅಗತ್ಯದ ಬಗ್ಗೆ ಮನದಟ್ಟು ಮಾಡಿದ್ದರು. ಇದರ ಫಲವೋ ಎಂಬಂತೆ ಕೆಲ ಸಮಯದ ನಂತರ ಹಣ ನೀಡಿ ಬಳಕೆ ಮಾಡಬಹುದಾದ ಸುಲಭ ಶೌಚಾಲಯ ಬಂತು. ನಿತ್ಯದ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದರು. ಆದರೆ, ಆ ಸಮಾಧಾನ ಬಹುಕಾಲ ನಿಲ್ಲಲಿಲ್ಲ. ಇಲ್ಲಿರುವ ಶೌಚಾಲಯದ ಬಾಗಿಲು ಬಂದ್ ಆಗಿ ವರ್ಷ ಕಳೆದಿದೆ.
ನಗರದ ಹೃದಯ ಭಾಗದಲ್ಲಿರುವ ಜ್ಯೋತಿ ವೃತ್ತದ ಕಥೆಯೂ ಇದಕ್ಕಿಂತ ಬೇರೆಯಾಗಿಲ್ಲ. ಜ್ಯೋತಿ ವೃತ್ತದಲ್ಲಿ ಸದಾ ಜನದಟ್ಟಣೆ ಇರುತ್ತದೆ. ಇಲ್ಲಿನ ಬಸ್ ತಂಗುದಾಣಕ್ಕೆ ಹೊಂದಿಕೊಂಡಿರುವ ಶೌಚಾಲಯದ ಕೊಠಡಿಗೆ ಬೀಗ ಬಿದ್ದು ಹಲವು ತಿಂಗಳುಗಳಾಗಿವೆ.
ನಗರದ ಜನಸಂದಣಿ ಪ್ರದೇಶದಲ್ಲಿ ಸುಲಭ ಶೌಚಾಲಯ ಮಾಡಬೇಕು ಎಂಬ ಬಗ್ಗೆ ಹಲವಾರು ಬಾರಿ ಪಾಲಿಕೆಯಲ್ಲಿ ಚರ್ಚೆ ನಡೆದಿದ್ದರೂ, ಅದು ಕಾರ್ಯಗತಗೊಂಡಿಲ್ಲ. ಕೆಲವು ಕಡೆಗಳಲ್ಲಿ ಶೌಚಾಲಯ ಇದೆಯಾದರೂ ಅದು ಬಾಗಿಲು ಮುಚ್ಚಿದೆ. ಕದ್ರಿ ಮೈದಾನದ ಸಮೀಪ ಇರುವ ಶೌಚಾಲಯ ನಿರುಪಯುಕ್ತವಾಗಿದೆ. ಕಂಕನಾಡಿ ಭಾಗಕ್ಕೆ ಬರುವ ಜನರಿಗೆ ಸಾರ್ವಜನಿಕ ಶೌಚಾಲಯದ ಲಭ್ಯತೆ ಇಲ್ಲ. ಮೊದಲು ಇದ್ದ ಶೌಚಾಲಯವು ನೂತನ ಮಾರ್ಕೆಟ್ ನಿರ್ಮಾಣದೊಂದಿಗೆ ಲೀನವಾಗಿದೆ. ನಂತೂರು ವೃತ್ತ, ಬಿಕರ್ನಕಟ್ಟೆ ವೃತ್ತ, ಜ್ಯೋತಿ ವೃತ್ತ, ಬಿಜೈ, ಕೆಎಸ್‌ಆರ್‌ಟಿಸಿ, ಲಾಲ್‌ಬಾಗ್, ಕೆ.ಎಸ್.ರಾವ್ ರಸ್ತೆ, ಎಂ.ಜಿ. ರಸ್ತೆ, ಕೊಟ್ಟಾರಚೌಕಿ ಮತ್ತಿತರ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕ ಶೌಚಾಲಯ ದುರ್ಲಭವಾಗಿದೆ. ಇದರಿಂದಾಗಿ ಪುರುಷರ ಖಾಲಿ ಜಾಗ ಹುಡುಕಿಕೊಂಡು ಹೋದರೆ, ಮಹಿಳೆಯರು ಸಮೀಪದ ಹೋಟೆಲ್‌ಗಳತ್ತ ಮುಖ ಮಾಡುತ್ತಾರೆ.
ಗಿಡದ ಮರೆಗೆ ಹೋಗುವವರೇ ಹೆಚ್ಚು: ಪಿವಿಎಸ್ ವೃತ್ತದಲ್ಲಿ ಬಿಜೆಪಿ ಜಿಲ್ಲಾ ಘಟಕದ ಕಚೇರಿ ಸಮೀಪ ಹಣಕೊಟ್ಟು ಬಳಕೆ ಮಾಡುವ ಸಾರ್ವಜನಿಕ ಶೌಚಾಲಯ ಇದೆ. ‘ಇಲ್ಲಿ ಗಿಡ–ಮರಗಳು ಕಾಡಿನಂತಹ ಪ್ರದೇಶ ಇರುವುದರಿಂದ ಪುರುಷರು ಶೌಚಾಲಯ ಬಳಕೆಗೆ ಬರುವುದು ಕಡಿಮೆ. ದಿನಕ್ಕೆ ಒಟ್ಟಾರೆ 50 ಮಂದಿ ಬಂದರೆ ಹೆಚ್ಚು. ದಿನಕ್ಕೆ 2–3 ಬಾರಿ ಸ್ವಚ್ಛಗೊಳಿಸಿ, ಶೌಚಾಲಯದ ಶುಚಿತ್ವ ಕಾಪಾಡುತ್ತೇವೆ’ ಎನ್ನುತ್ತಾರೆ ಶೌಚಾಲಯದ ಎದುರು ಹಣ ಸಂಗ್ರಹಿಸಲು ಕುಳಿತಿದ್ದ ಅರ್ಜುನ್.
‘ಮೀನು ಖರೀದಿಗೆ ಬರುವವರು, ಬಂದರು ಕಡೆ ಹೋಗುವವರು, ಬಸ್ ಕಾಯಲು ನಿಲ್ಲುವವರು ಹೀಗೆ ದಿನಕ್ಕೆ ನೂರಾರು ಮಂದಿ ಶೌಚಾಲಯಕ್ಕೆ ಬರುತ್ತಾರೆ. ಶೌಚಾಲಯ ಬಳಕೆ ಜೊತೆ ಮುಖಕ್ಕೆ ನೀರು ಚಿಮ್ಮಿಸಿ ಫ್ರೆಶ್ ಆಗಲು ಬರುವವರೂ ಇದ್ದಾರೆ. ಗ್ರಾಹಕರಿಗೇನು ಕೊರತೆಯಿಲ್ಲ’ ಎನ್ನುತ್ತಾರೆ ಸ್ಟೇಟ್ ಬ್ಯಾಂಕ್ ವೃತ್ತದ ಶೌಚಾಲಯ ನಿರ್ವಹಣೆ ಮಾಡುತ್ತಿರುವ ಉತ್ತರ ಪ್ರದೇಶದ ರಾಮ್.
‘ದೂರದ ಊರಿನಿಂದ ಪ್ರವಾಸಕ್ಕೆ ಬಂದವರು ಸಮೀಪದಲ್ಲಿ ಎಲ್ಲಾದರೂ ಶೌಚಾಲಯ ಇದೆಯೇ ಎಂದು ವಿಚಾರಿಸುತ್ತಾರೆ. ಸಾರ್ವಜನಿಕ ಶೌಚಾಲಯದ ಅಲಭ್ಯತೆಯಿಂದ ಹೋಟೆಲ್‌ಗಳಿಗೆ ಮೊರೆ ಹೋಗುತ್ತಾರೆ. ಶೌಚಾಲಯ ಬಳಕೆಯ ಕಾರಣಕ್ಕಾಗಿಯೇ ಹೋಟೆಲ್‌ಗೆ ಹೋಗಿ ಚಹಾ ಕುಡಿದು ಬರುತ್ತಾರೆ. ಇದು ಮಹಿಳೆಯರ ಸಮಸ್ಯೆ ಮಾತ್ರವಲ್ಲ, ಪುರುಷರೂ ಕಷ್ಟ ಅನುಭವಿಸುತ್ತಾರೆ. ಸಾರ್ವಜನಿಕ ಸ್ಥಳ ಮಲೀನಗೊಳಿಸಬಾರದು ಎನ್ನುವ ಪಾಲಿಕೆ, ಪ್ರಮುಖ ಸ್ಥಳಗಳಲ್ಲಿ ಶೌಚಾಲಯ ನಿರ್ಮಿಸದೆ, ಪರೋಕ್ಷವಾಗಿ ತಾನೇ ಸಾರ್ವಜನಿಕ ಸ್ಥಳಗಳು ಮೂತ್ರಖಾನೆಗಳಾಗಿ ರೂಪುಗೊಳ್ಳಲು ಪ್ರೇರೇಪಿಸುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು ಎಂ.ಜಿ.ರಸ್ತೆಯ ವ್ಯಾಪಾರಿ ಸುಶಾಂತ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.