ADVERTISEMENT

ಧರ್ಮಸ್ಥಳ: ಇಂದಿನಿಂದ ಲಕ್ಷದೀಪೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2024, 0:05 IST
Last Updated 26 ನವೆಂಬರ್ 2024, 0:05 IST
ಧರ್ಮಸ್ಥಳ ಶ್ರೀಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಕಳೆದ ವರ್ಷ ನಡೆದಿದ್ದ ಲಕ್ಷ ದೀಪೋತ್ಸವ ಮೆರವಣಿಗೆಯ ದೃಶ್ಯ
ಧರ್ಮಸ್ಥಳ ಶ್ರೀಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಕಳೆದ ವರ್ಷ ನಡೆದಿದ್ದ ಲಕ್ಷ ದೀಪೋತ್ಸವ ಮೆರವಣಿಗೆಯ ದೃಶ್ಯ   

ಉಜಿರೆ (ದಕ್ಷಿಣ ಕನ್ನಡ): ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದ ಲಕ್ಷದೀಪೋತ್ಸವ ಕಾರ್ಯಕ್ರಮಗಳು ಇದೇ 26ರಿಂದ 30ರ ವರೆಗೆ ನಡೆಯಲಿವೆ.

ನ.26ರಂದು ರಾತ್ರಿ ಹೊಸಕಟ್ಟೆ ಉತ್ಸವದೊಂದಿಗೆ ಲಕ್ಷದೀಪೋತ್ಸವ ಕಾರ್ಯಕ್ರಮಗಳಿಗೆ ಚಾಲನೆ ಸಿಗಲಿದೆ. ಮಧ್ಯಾಹ್ನ 3 ಗಂಟೆಗೆ ಸುಮಾರು 25 ಸಾವಿರ ಭಕ್ತರು, ಅಭಿಮಾನಿಗಳು ಉಜಿರೆಯಿಂದ ಧರ್ಮಸ್ಥಳಕ್ಕೆ ಭಜನೆ, ದೇವರ ನಾಮಸ್ಮರಣೆಯೊಂದಿಗೆ ಪಾದಯಾತ್ರೆಯಲ್ಲಿ ಸಾಗಲಿದ್ದಾರೆ. ಶಾಸಕ ಹರೀಶ್ ಪೂಂಜ, ವಿಧಾನಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್ ಪಾದಯಾತ್ರೆಯಲ್ಲಿ ಭಾಗವಹಿಸುವರು. ಸಂಜೆ 7 ಗಂಟೆಗೆ ವೀರೇಂದ್ರ ಹೆಗ್ಗಡೆ ಅವರು ಅಮೃತವರ್ಷಿಣಿ ಸಭಾಭವನದಲ್ಲಿ ಭಕ್ತರಿಗೆ ಮಾರ್ಗದರ್ಶನ ನೀಡುವರು.

ಧರ್ಮಸ್ಥಳದ ದೇವಸ್ಥಾನ, ಬಸದಿ, ವಸತಿಛತ್ರಗಳು, ಪ್ರವೇಶದ್ವಾರ, ಉದ್ಯಾನ ಹಾಗೂ ಎಲ್ಲ ಕಟ್ಟಡಗಳನ್ನು ಆಕರ್ಷಕ ವಿನ್ಯಾಸದ ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ. ನೇತ್ರಾವತಿ ಸ್ನಾನಘಟ್ಟದಿಂದ ಧರ್ಮಸ್ಥಳದವರೆಗೆ ರಸ್ತೆಯ ಎರಡೂ ಬದಿಯಲ್ಲಿ ಆಕರ್ಷಕ ದೀಪಗಳು ಹಾಗೂ ಸ್ವಾಗತ ಫಲಕಗಳನ್ನು ಹಾಕಲಾಗಿದೆ.

ADVERTISEMENT

ಪ್ರೌಢಶಾಲೆ ಆವರಣದಲ್ಲಿ ಸುಮಾರು 300 ಮಳಿಗೆ ಇರುವ ರಾಜ್ಯಮಟ್ಟದ ವಸ್ತುಪ್ರದರ್ಶನ ಆಯೋಜಿಸಿದ್ದು, ಎಲ್ಲರಿಗೂ ಉಚಿತ ಪ್ರವೇಶ ಇದೆ. ಅಮೃತವರ್ಷಿಣಿ ಸಭಾ ಭವನದಲ್ಲಿ ನ.29ರಂದು ಸಂಜೆ 4ರಿಂದ ಸರ್ವಧರ್ಮ ಸಮ್ಮೇಳನ, ನ.30ರಂದು ಸಂಜೆ 4ರಿಂದ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ.

ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಮಂಗಳವಾರ ರಾತ್ರಿ ಹೊಸಕಟ್ಟೆ ಉತ್ಸವ, ಬುಧವಾರ ರಾತ್ರಿ ಕೆರೆಕಟ್ಟೆ ಉತ್ಸವ, ಗುರುವಾರ ರಾತ್ರಿ ಕಂಚಿಮಾರುಕಟ್ಟೆ ಉತ್ಸವ, ಶನಿವಾರ ರಾತ್ರಿ ಗೌರಿಮಾರುಕಟ್ಟೆ ಉತ್ಸವ (ಲಕ್ಷದೀಪೋತ್ಸವ) ನಡೆಯುತ್ತದೆ.

ಕೆಎಸ್‌ಆರ್‌ಟಿಸಿಯಿಂದ ವಿಶೇಷ ಬಸ್ ಸೌಲಭ್ಯ ಇದೆ. ಹಲವು ಮಂದಿ ಭಕ್ತರು ಪಾದಯಾತ್ರೆಯಲ್ಲೂ ಧರ್ಮಸ್ಥಳಕ್ಕೆ ಬರುತ್ತಾರೆ. ಹೆಚ್ಚಿನ ಮಾಹಿತಿಗೆ ದೇವಳ ಕಚೇರಿ ದೂ: 08256 266655 ಸಂಪರ್ಕಿಸಲು ಕೋರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.