ADVERTISEMENT

ಬೆಳ್ತಂಗಡಿ | ಅಲ್ಲಲ್ಲಿ ಗುಡ್ಡ ಕುಸಿತ; ಗ್ರಾಮೀಣ ಸಂಪರ್ಕ ಕಡಿತ

ತಾಲ್ಲೂಕಿನಾದ್ಯಂತ ಭಾರಿ ಮಳೆ:

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2024, 13:55 IST
Last Updated 1 ಆಗಸ್ಟ್ 2024, 13:55 IST
ಮರೋಡಿ ಗ್ರಾಮದ ದೇರಾಜೆ ಬೆಟ್ಟಕ್ಕೆ ಸಂಪರ್ಕಿಸುವ ರಸ್ತೆ ಕುಸಿದಿರುವುದು
ಮರೋಡಿ ಗ್ರಾಮದ ದೇರಾಜೆ ಬೆಟ್ಟಕ್ಕೆ ಸಂಪರ್ಕಿಸುವ ರಸ್ತೆ ಕುಸಿದಿರುವುದು   

ಬೆಳ್ತಂಗಡಿ: ಭಾರಿ ಮಳೆಯಿಂದಾಗಿ ತಾಲ್ಲೂಕಿನಾದ್ಯಂತ ಅಲ್ಲಲ್ಲಿ ಅನಾಹುತ ಸಂಭವಿಸಿದ್ದು, ಗುರುವಾರವೂ ಮಳೆಯಾಗಿದೆ.

ಬುಧವಾರ ರಾತ್ರಿ ಪ್ರವಾಹದಿಂದಾಗಿ ವೇಣೂರು - ನಾರಾವಿ ಪರಿಸರದ ವಿವಿಧೆಡೆ ಸೇತುವೆ ಮೇಲೆ ನೀರು ಹರಿದಿದೆ. ರಸ್ತೆಯಲ್ಲೇ ಮಳೆ ನೀರು ಹರಿದು ವೇಣೂರು ಭಾಗದಲ್ಲಿ ರಾತ್ರಿ ವೇಳೆ ಪ್ರಯಾಣಿಕರು ಪರದಾಡಿದರು.

ವೇಣೂರು ಆರಂಬೋಡಿ ಬಳಿಯ ಅಂಗರ ಕರಿಯ ಸೇತುವೆ, ಮರೋಡಿಯ ಪಲಾಗೋಳಿ ಸೇತುವೆ ಮುಳುಗಡೆಯಾಗಿ ಹಾನಿಯಾಗಿದೆ.

ADVERTISEMENT

ಮರೋಡಿ ಗ್ರಾಮದ ದೇರಾಜೆ ಬೆಟ್ಟಕ್ಕೆ ಸಂಪರ್ಕಿಸುವ ರಸ್ತೆ ಕುಸಿದಿದೆ. ಮಾಲಾಡಿ ಸೊಣಂದೂರು ಗ್ರಾಮದ ಸಬರಬೈಲು - ಪಡಂಗಡಿ ಸಂಪರ್ಕ ರಸ್ತೆ ಕಲ್ಪಿಸುವ ಮೊದಲೆಯಲ್ಲಿ ಕಿರು ಕುಸಿದು ಸಂಪರ್ಕ ಕಡಿತಗೊಂಡಿದೆ. ಬಳಂಜ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುದ್ರೊಟ್ಟು ಬಳಿ ಗುಡ್ಡ ಕುಸಿದು ಅಳಂದಂಗಡಿ ರಸ್ತೆ ಬಂದ್ ಅಗಿದೆ. ಸುಲ್ಕೇರಿ ಗ್ರಾಮದ ಅಟ್ರಿಂಜೆಯಲ್ಲಿ ಮರದ ಸೇತುವೆ ನೀರಿನಲ್ಲಿ ಕೊಚ್ಚಿ ಹೋಗಿದೆ.

ಲಾಯಿಲ ಗ್ರಾಮದ ಅಂಕಾಜೆ ಬಳಿ ಗುಡ್ಡ ಕುಸಿಯುವ ಭೀತಿ ಇದ್ದು, ರಸ್ತೆ ಬಂದ್ ಮಾಡಲಾಗಿದೆ.

ನಾವರ ಗ್ರಾಮದ ಕೊರಲ್ಲ, ನಡ ಗ್ರಾಮದ ಸುರ್ಯ ಪುತ್ಯೆ ಬಳಿ ಗುಡ್ಡ ಕುಸಿದು ಮನೆಗೆ ಹಾನಿಯಾಗಿದೆ. ಕುಟುಂಬವರನ್ನು ಸ್ಥಳಾಂತರ ಮಾಡಲಾಗಿದೆ.

ಬೆಳ್ತಂಗಡಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ರೆಂಕೆದ ಗುತ್ತುವಿನಲ್ಲಿ, ಮುಂಡೂರು ಗ್ರಾಮದ ಮುಂಗುಡಮೆ ಬಳಿ ಗುಡ್ಡ ಕುಸಿದು ಮನೆಗಳಿಗೆ ಹಾನಿಯಾಗಿದೆ. ಮೇಲಂತಬೆಟ್ಟು ಗ್ರಾಮ ಪಂಚಾಯಿತಿಯ ಸವಣಾಲು ಗ್ರಾಮದ ನಡ್ತಿಕಲ್ಲು ಬಳಿ ಮನೆಯ ಪಕ್ಕ ಗುಡ್ಡ ಕುಸಿದು ಮನೆಗೆ ಅಪಾಯ ಎದುರಾಗುವ ಸ್ಥಿತಿ ಇದ್ದು, ಕುಟುಂಬದವರನ್ನು ಸ್ಥಳಾಂತರಿಸಲಾಗಿದೆ.

ಗುರುವಾಯನಕೆರೆ ಬಳಿಯ ಹಝ್ರತ್ ಶೈಖ್ ಹಯಾತುಲ್ ಔಲಿಯಾ ದರ್ಗಾ ಶರೀಫ್ ಮತ್ತು ಜುಮಾ ಮಸೀದಿ ಆವರಣ ಗೋಡೆ ಕುಸಿದಿದೆ. ತಹಶೀಲ್ದಾರ್ ಪೃಥ್ವಿ ಸಾನಿಕಂ, ಬೆಳ್ತಂಗಡಿ ನಗರ ಪಂಚಾಯಿತಿ ಮುಖ್ಯಾದಿಕಾರಿ ರಾಜೇಶ್, ಎಂಜಿನಿಯರ್ ಮಹಾವೀರ ಅರಿಗ, ಪಟ್ಟಣ ಪಂಚಾಯಿತಿ ಮಾಜಿ ಉಪಾದ್ಯಕ್ಷ ಜಯಾನಂದ ಗೌಡ ಭೇಟಿ ನೀಡಿದರು.

ಗುರುವಾಯನಕೆರೆ ಬಂಟರ ಭವನದ ಬಳಿ ರಾಷ್ಟ್ರೀಯ ಹೆದ್ದಾರಿ ಬಳಿ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲಿ ನೀರು ನಿಂತು ಅಡಿಕೆ ತೋಟ ಜಲಾವೃತವಾಗುತ್ತಿದೆ. ಧರ್ಮಸ್ಥಳ ಮುಳಿಕ್ಕಾರ್‌ನಲ್ಲಿ ಮನೆ ಗೋಡೆ ಕುಸಿದಿದ್ದು, ಕುಟುಂಬದವರನ್ನು ಸ್ಥಳಾಂತರಿಸಲಾಗಿದೆ. ಬೆಳ್ತಂಗಡಿ ಚರ್ಚ್ ಟ್ರೀ ಪಾರ್ಕ್ ಬಳಿಯ ಬಾವಿ, ಆವರಣ ಗೋಡೆ ಕುಸಿದಿದೆ.

ಮುಂಡೂರು ಗ್ರಾಮದ ಮುಂಗುಡಮೆ ಸೀತಾರಾಮ ಆಚಾರ್ಯ ಎಂಬುವರ ಮನೆಯ ಬಳಿ ಗುಡ್ಡ ಕುಸಿದಿದ್ದು ಮನೆಗೆ ಹಾನಿಯಾಗಿದೆ
ಮಾಲಾಡಿ ಸೋಣಂದೂರು ಗ್ರಾಮದ ಮೊದಲೆ ಎಂಬಲ್ಲಿ ಸಬರಬೈಲು – ಪಡಂಗಡಿ ಸಂಪರ್ಕದ ಕಿರು ಸೇತುವೆ ಕುಸಿದಿದೆ
ಸವಣಾಲು ಗ್ರಾಮದ ನಡ್ತಿಕಲ್ಲು ಬಳಿ ವಸಂತ ಎಂಬುವರ ಮನೆ ಪಕ್ಕ ಗುಡ್ಡ ಕುಸಿದಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.