ಪುತ್ತೂರು: ತಾಲ್ಲೂಕಿನ ವಿವಿಧೆಡೆ ಗುಡ್ಡ ಕುಸಿದಿದ್ದು, ಕೆಲವು ಮನೆಗಳು ಅಪಾಯಕ್ಕೆ ಸಿಲುಕಿವೆ. ಮಾಣಿ-ಮೈಸೂರು ಹೆದ್ದಾರಿ ಸಂಚಾರಕ್ಕೆ ತೊಡಕುಂಟಾಗಿದೆ. ಬನ್ನೂರಿನ ಬೇರಿಕೆ ಎಂಬಲ್ಲಿ ಗುಡ್ಡ ಕುಸಿದಿದೆ.
ಬಪ್ಪಳಿಗೆ ತೆಂಕಿಲ ಬಳಿ ಮಾಣಿ-ಮೈಸೂರು ಹೆದ್ದಾರಿ ಬದಿಯ ಗುಡ್ಡದ ಮಣ್ಣು ಹೆದ್ದಾರಿಗೆ ಕುಸಿದು ಬಿದ್ದಿದೆ. ಇದರಿಂದಾಗಿ ಗುರುವಾರ ರಾತ್ರಿಯಿಂದಲೇ ಹೆದ್ದಾರಿ ಸಂಚಾರ ಬಂದ್ ಆಗಿದೆ. ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಕುಸಿತದಿಂದ ಗುಡ್ಡದ ಮೇಲಿರುವ ದೇವಿ ದೇವಸ್ಥಾನಕ್ಕೂ ಅಪಾಯದ ಭೀತಿ ಎದುರಾಗಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಉಪವಿಭಾಗಾಧಿಕಾರಿ ಜುಬಿನ್ ಮೊಹಾಪಾತ್ರ, ಹೆದ್ದಾರಿಯಲ್ಲಿನ ಕೆಸರು ನೀರನ್ನು ತೆರವುಗೊಳಿಸಿದ ಬಳಿಕ ಹೆದ್ದಾರಿಯಲ್ಲಿ ಮುಕ್ತ ಸಂಚಾರಕ್ಕೆ ಅವಕಾಶ ನೀಡಲಾಗುವುದು. ಇಲ್ಲಿನ ಗುಡ್ಡ ಮತ್ತಷ್ಟು ಕುಸಿಯುವ ಸಾಧ್ಯತೆ ಇದ್ದು, ಗುಡ್ಡದ ಬದಿ ಅರ್ಧರಸ್ತೆಯನ್ನು ಬಂದ್ ಮಾಡಿ ಉಳಿದ ಭಾಗದಲ್ಲಿ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.
ಬನ್ನೂರು ಗ್ರಾಮದ ಬೇರಿಕೆಯಲ್ಲಿ ಗೇರು ಅಣಿವೇದ್ಧಿ ನಿಗಮಕ್ಕೆ ಸೇರಿದ ಗುಡ್ಡ ಕುಸಿದು ಮುರ-ಕಡಂಬು ರಸ್ತೆಯ ಸುಮಾರು 200 ಮೀ. ರಸ್ತೆ ಮಣ್ಣಿನಿಂದ ಮುಚ್ಚಿ ಹೋಗಿದೆ. ಈ ರಸ್ತೆಯನ್ನು 2 ವರ್ಷಗಳ ಹಿಂದೆ ಅಭಿವೃದ್ಧಿಗೊಳಿಸಲಾಗಿತ್ತು. ಕುಸಿತ ಉಂಟಾದ ಭಾಗದಲ್ಲಿ 4 ಮನೆಗಳಿದ್ದು, ಈ ಕುಟುಂಬಗಳನ್ನು ಅಧಿಕಾರಿಗಳು ಸ್ಥಳಾಂತರ ಮಾಡಿದ್ದಾರೆ.
ಪುತ್ತೂರು ತಾಲ್ಲೂಕಿನಲ್ಲಿ ಜುಲೈ ಅಂತ್ಯಕ್ಕೆ ಪ್ರಾಕೃತಿಕ ವಿಕೋಪದಿಂದ 8 ಮನೆಗಳಿಗೆ ತೀವ್ರಹಾನಿ ಉಂಟಾಗಿದೆ. ಈ ಮನೆಗಳಿಗೆ ತಲಾ ₹ 1.20 ಲಕ್ಷದಂತೆ, ಹಾನಿಗೀಡಾದ 18 ಮನೆಗಳಿಗೆ ಸಂಬಂಧಿಸಿ ತಲಾ ₹ 6500, ದನಗಳ ಜೀವಹಾನಿಗೆ ₹37,500, ಕರುಗಳ ಜೀವಹಾನಿಗೆ ₹ 20 ಸಾವಿರ, 3 ದನದ ಹಟ್ಟಿ ಹಾನಿಗೆ ತಲಾ ₹3 ಸಾವಿರ ವಿತರಣೆ ಮಾಡಲಾಗಿದೆ ಎಂದು ತಹಶೀಲ್ದಾರ್ ಪುರಂದರ ಹೆಗ್ಡೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.