ADVERTISEMENT

ಕಡಿಮೆಯಾದ ಮಳೆ; ಗುಡ್ಡ ಕುಸಿತ

​ಪ್ರಜಾವಾಣಿ ವಾರ್ತೆ
Published 29 ಜೂನ್ 2024, 6:20 IST
Last Updated 29 ಜೂನ್ 2024, 6:20 IST
ಮೂಡುಜೆಪ್ಪುವಿನಲ್ಲಿ ಗುಡ್ಡ ಕುಸಿದು ರಸ್ತೆಗೆ ಮಣ್ಣು ಬಿದ್ದಿರುವುದು
ಮೂಡುಜೆಪ್ಪುವಿನಲ್ಲಿ ಗುಡ್ಡ ಕುಸಿದು ರಸ್ತೆಗೆ ಮಣ್ಣು ಬಿದ್ದಿರುವುದು   

ಮಂಗಳೂರು: ನಗರವೂ ಸೇರಿದಂತೆ ಜಿಲ್ಲೆಯಲ್ಲಿ ಶುಕ್ರವಾರ ಮಳೆ ಬಿಡುವು ನೀಡಿದ್ದರೂ ಅಲ್ಲಲ್ಲಿ ಗುಡ್ಡ ಕುಸಿತದಿಂದ ಆತಂಕ ಉಂಟಾಗಿದೆ. ಗುರುವಾರ ತಡರಾತ್ರಿ ಆರಂಭವಾದ ಮಳೆ ಶುಕ್ರವಾರ ಬೆಳಿಗ್ಗೆ ವರೆಗೆ ಮುಂದುವರಿಯಿತು. ನಂತರ ಬಿಡುವು ನೀಡಿತು.

ಆಗಾಗ ತುಂತುರು ಮತ್ತು ಸಾಮಾನ್ಯ ಮಳೆಯೊಂದಿಗೆ ಬಿಸಿಲಿನ ಝಳವೂ ಹೆಚ್ಚಾಯಿತು. ಎರಡು ದಿನ ಮನೆಯೊಳಗೆಯೇ ಬಟ್ಟೆಗಳನ್ನು ಒಣಗಿಸಿದವರು ಶುಕ್ರವಾರ ಬಿಸಿಲಿಗೆ ಒಡ್ಡಿದರು.  

ರಾತ್ರಿ ಸುರಿದ ಭಾರಿ ಮಳೆಗೆ ಮಂಗಳೂರು ತಾಲ್ಲೂಕಿನ ಉಳಾಯಿಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಡುಜೆಪ್ಪುವಿನಲ್ಲಿ ಗುಡ್ಡ ಕುಸಿದು ತೊಂದರೆಯಾಯಿತು. ರಸ್ತೆಯ ಮೇಲೆ ಅಪಾರ ಪ್ರಮಾಣದ ಮಣ್ಣು ಜರಿದು ಬಿದ್ದ ಕಾರಣ ವಾಹನಗಳ ಓಡಾಟಕ್ಕೆ ಅಡ್ಡಿಯಾಯಿತು ಈ ಭಾಗದ ಐದು ವಿದ್ಯುತ್ ಕಂಬಗಳು ಕೂಡ ಮುರಿದು ಬಿದ್ದ ಕಾರಣ ವಿದ್ಯುತ್ ವಿತರಣೆಯೂ ಸ್ಥಗಿತಗೊಂಡಿತು.

ADVERTISEMENT

ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ವಿಪತ್ತು ನಿರ್ವಹಣಾ ಸಮಿತಿಯವರ ನೇತೃತ್ವದಲ್ಲಿ ಮಣ್ಣು ತೆರವು ಮತ್ತು ವಿದ್ಯುತ್ ಕಂಬಗಳ ಮರುಸ್ಥಾಪನೆ ಕೆಲಸ ನಡೆಯಿತು.

ಉಚ್ಚಿಲದ ಬೆಟ್ಟಂಪಾಡಿ ಭಾಗದಲ್ಲಿ ಕಡಲ್ಕೊರೆತದ ಭೀತಿ ಎದುರಾಗಿದೆ. ಇಲ್ಲಿ ಒಟ್ಟು ಮೂರು ಕುಟುಂಬಗಳನ್ನು ಬುಧವಾರ ಮತ್ತು ಗುರುವಾರ ಸ್ಥಳಾಂತರಿಸಲಾಗಿತ್ತು.

ಜಿಲ್ಲಾಧಿಕಾರಿ ಭೇಟಿ

ಉಳ್ಳಾಲ ತಾಲ್ಲೂಕು ಮಂಜನಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಚ್ಚಿಗುಡ್ಡೆ ನಟಿಕಲ್‌ ಸೈಟ್ ಮತ್ತಿತರ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಶುಕ್ರವಾರ ಭೇಟಿ ನೀಡಿ ಪ‍ರಿಶೀಲಿಸಿದರು. ಹಾನಿ ಸಂಭವಿಸಬಹುದಾದ ಸ್ಥಳಗಳಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಲಾಯಿತು.

ಸುರತ್ಕಲ್ ಸಮೀಪದ ಬಾಳ ಗ್ರಾಮದ ಐಎಸ್‌ಪಿಆರ್‌ಎಲ್‌ ಪೈಪ್‌ಲೈನ್ ಹಾದುಹೋಗಿರುವ ಜಾಗದಲ್ಲಿ ಕುಸಿತ ಉಂಟಾಗಿತ್ತು. ಗುರುವಾರ ಸಂಜೆ ಈ ಭಾಗದಲ್ಲಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಸೂಚನೆಯಂತೆ ಮುಂಜಾಗ್ರತಾ ಕ್ರಮವಾಗಿ ಮೇಲ್ಭಾಗದ ರಸ್ತೆಬದಿಯಲ್ಲಿ ಶುಕ್ರವಾರ ಬ್ಯಾರಿಕೇಡ್ ಅಳವಡಿಸಲಾಯಿತು. ಇನ್ನೊಂದು ಬದಿಯಲ್ಲಿದ್ದ ಭಾರಿ ಗಾತ್ರದ ಕಲ್ಲು ಒಡೆಯಲಾಯಿತು.

ಐಎಸ್‌ಪಿಆರ್‌ಎಲ್‌ ಪೈಪ್‌ಲೈನ್ ಹಾದುಹೋಗಿರುವ ಜಾಗದ ಮೇಲ್ಭಾಗದಲ್ಲಿ ತಡೆಬೇಲಿ ಹಾಕಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.