ADVERTISEMENT

ಭಾಷಾ ಕಲಿಕೆ ಆ್ಯಪ್‌ಗಳಿಂದ ಅಸ್ಮಿತೆಗೆ ಧಕ್ಕೆ: ನಾಗರಾಜ ಪಾತುರಿ

ಉಡುಪಿ: ಅಖಿಲ ಭಾರತ ಪ್ರಾಚ್ಯವಿದ್ಯಾ ಸಮ್ಮೇಳನ‌ದಲ್ಲಿ ನಾಗರಾಜ ಪಾತುರಿ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 0:16 IST
Last Updated 26 ಅಕ್ಟೋಬರ್ 2024, 0:16 IST
‘ಭಾರತೀಯ ಭಾಷೆಗಳು: ಅಪ್ಲಿಕೇಷನ್ ಮತ್ತು ಅವಕಾಶಗಳು’ ಎಂಬ ಗೋಷ್ಠಿಯಲ್ಲಿ ನಾಗರಾಜ ಪಾತುರಿ ಮಾತನಾಡಿದರು. ಸುಂದರೇಶ್ವರನ್, ಚ.ಮು.ಕೃಷ್ಣ ಶಾಸ್ತ್ರಿ, ವಿಜಯಕುಮಾರ್ ಸಿ.ಜಿ ಹಾಗೂ ವಸಂತ್‌ ಕುಮಾರ್ ಭಟ್‌ ಭಾಗವಹಿಸಿದ್ದರು
‘ಭಾರತೀಯ ಭಾಷೆಗಳು: ಅಪ್ಲಿಕೇಷನ್ ಮತ್ತು ಅವಕಾಶಗಳು’ ಎಂಬ ಗೋಷ್ಠಿಯಲ್ಲಿ ನಾಗರಾಜ ಪಾತುರಿ ಮಾತನಾಡಿದರು. ಸುಂದರೇಶ್ವರನ್, ಚ.ಮು.ಕೃಷ್ಣ ಶಾಸ್ತ್ರಿ, ವಿಜಯಕುಮಾರ್ ಸಿ.ಜಿ ಹಾಗೂ ವಸಂತ್‌ ಕುಮಾರ್ ಭಟ್‌ ಭಾಗವಹಿಸಿದ್ದರು    

ಉಡುಪಿ: ‘ಕೃತಕ ಬುದ್ಧಿಮತ್ತೆ (ಎಐ) ಮೂಲಕ ಕಾರ್ಯನಿರ್ವಹಿಸುವ ತಂತ್ರಜ್ಞಾನವೂ ಸೇರಿದಂತೆ ಭಾಷೆ ಕಲಿಸುವ ಆ್ಯಪ್‌ಗಳ ಮೂಲಕ ಭಾರತದ ಅಸ್ಮಿತೆಗೆ ಧಕ್ಕೆ ಉಂಟುಮಾಡುವ ಕುತಂತ್ರ ನಡೆಯುತ್ತಿದೆ’ ಎಂದು ಹೈದರಾಬಾದ್‌ನ ಇಂಡಿಕಾ ಅಕಾಡೆಮಿ ನಿರ್ದೇಶಕ ನಾಗರಾಜ ಪಾತುರಿ ಹೇಳಿದರು.

ಬೆಂಗಳೂರಿನ ಭಾರತೀಯ ವಿದ್ವತ್ ಪರಿಷತ್ (ಬಿವಿಪಿ), ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ (ಸಿಎಸ್‌ಯು) ಹಾಗೂ ಉಡುಪಿಯ ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ಕೃಷ್ಣ ಮಠದ ರಾಜಾಂಗಣದಲ್ಲಿ‌ ಆಯೋಜಿರುವ ಅಖಿಲ ಭಾರತ ಪ್ರಾಚ್ಯವಿದ್ಯಾ ಸಮ್ಮೇಳನ‌(ಎಐಒಸಿ)ದಲ್ಲಿ ಶುಕ್ರವಾರ ನಡೆದ 'ಭಾರತೀಯ ಭಾಷೆಗಳು: ಅಪ್ಲಿಕೇಷನ್ ಮತ್ತು ಅವಕಾಶಗಳು' ಎಂಬ ವಿಷಯದ ಕುರಿತ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಭಾಷೆಗೆ ಸಂಬಂಧಿಸಿ ಅವಕಾಶಗಳ ಹೆಸರಿನಲ್ಲಿ ನಮ್ಮ ಸಂಸ್ಕೃತಿಯನ್ನು ಕೆಡಿಸುವ ಜಾಲ ಕೆಲಸ‌ ಮಾಡುತ್ತಿದೆ. ಎಐಯಲ್ಲಿ ಹಿಂದೂಗಳ ಬಗ್ಗೆ ಹಾಸ್ಯಾಸ್ಪದ ಕಂಟೆಂಟ್ ಸಿದ್ಧಪಡಿಸಲು ಹೇಳಿದರೆ ತಕ್ಷಣ ಸ್ಪಂದನೆ ಸಿಗುವಂತೆ ಮಾಡಲಾಗಿದೆ. ಮುಸ್ಲಿಂ ಅಥವಾ ಕ್ರೈಸ್ತರ ಬಗ್ಗೆ‌ ಕೇಳಿದರೆ ಅದು ಕಾನೂನಾತ್ಮಕವಾಗಿ ತಪ್ಪು ಎಂಬ ಸಂದೇಶ ಬರುತ್ತದೆ. ಇಂಥ ಕುತಂತ್ರಗಳ ಬಗ್ಗೆ ಜಾಗರೂಕರಾಗಿರಬೇಕು’ ಎಂದು ಅವರು ಹೇಳಿದರು. 

ADVERTISEMENT

‘ತಂತ್ರಜ್ಞಾನದ ಹೆಸರಿನಲ್ಲಿ ಅನೇಕ ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆ. ವಿದೇಶಗಳಲ್ಲಿ ಉದ್ಯೋಗದ ಆಸೆ ಮೂಡಿಸಲಾಗುತ್ತದೆ. ಇದು ಒಂದು ಬಗೆಯ ಕುತಂತ್ರ. ಅವಕಾಶಗಳೆಂಬ ಆಸೆ ತೋರಿಸಿ ನಮ್ಮಿಂದಲೇ ನಮ್ಮತನಕ್ಕೆ ಅಪಾಯ ಉಂಟುಮಾಡುವ ಹುನ್ನಾರ. ವಾಸ್ತವದಲ್ಲಿ, ನಮ್ಮ ಭಾಷೆಗಳನ್ನು ಅಧ್ಯಯನ ಮಾಡಲು ಮತ್ತು ಅವುಗಳಿಗೆ ಸಂಬಂಧಿಸಿದ ಅಪ್ಲಿಕೇಷನ್ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರದ ಭಾರತೀಯ ಭಾಷಾ ಸಮಿತಿ ಇದೆ. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು’ ಎಂದು ಅವರು ಸಲಹೆ ನೀಡಿದರು.

ನವದೆಹಲಿಯ ಭಾರತೀಯ ಭಾಷಾ ಸಮಿತಿಯ ಅಧ್ಯಕ್ಷ ಚ.ಮು.ಕೃಷ್ಣ ಶಾಸ್ತ್ರಿ, ಉಜ್ಜೈನಿಯ ಮಹರ್ಷಿ ಪಾಣಿನಿ ವಿಶ್ವವಿದ್ಯಾಲಯದ ಕುಲಪತಿ ವಿಜಯಕುಮಾರ್ ಸಿ.ಜಿ, ಕ್ಯಾಲಿಕಟ್‌ ವಿವಿ ನಿವೃತ್ತ ಪ್ರಾಧ್ಯಾಪಕ ಸುಂದರೇಶ್ವರನ್ ಹಾಗೂ ಗುಜರಾತ್‌ನ ನಿವೃತ್ತ ಪ್ರಾಧ್ಯಾಪಕ ವಸಂತ್‌ ಕುಮಾರ್ ಭಟ್‌ ಇದ್ದರು.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.