ಮಂಗಳೂರು: ಒಂದೆಡೆ ಅತಿವೃಷ್ಟಿಯಿಂದಾಗುವ ಬೆಳೆ ಹಾನಿ, ಮತ್ತೊಂದೆಡೆ ಬೇಸಿಗೆಯಲ್ಲಿ ನೀರಿಲ್ಲದೆ ನಾಶವಾಗುವ ಬೆಳೆ. ಈ ಮಧ್ಯೆ ಎಲೆಚುಕ್ಕಿ ರೋಗದಿಂದ ಇಳುವರಿಯನ್ನೂ ಕಳೆದುಕೊಳ್ಳಬೇಕಾದ ಸ್ಥಿತಿ... ಇದು ಅಡಿಕೆಯ ಇಳುವರಿಯನ್ನೇ ನಂಬಿರುವ ಜಿಲ್ಲೆಯ ರೈತರ ಅಸಹಾಯಕ ಪರಿಸ್ಥಿತಿ.
ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾದ ಅಡಿಕೆಗೆ ತಕ್ಕಮಟ್ಟಿಗೆ ಬೆಲೆ ಇದ್ದರೂ ದಿಢೀರ್ ಎಂದು ಕಾಣಿಸಿಕೊಂಡ ಎಲೆಚುಕ್ಕಿ ರೋಗದಿಂದಾಗಿ ಬೆಳೆಗಾರರ ಮುಖದಲ್ಲಿ ಮಂದಹಾಸ ಮರೆಯಾಗಿದೆ. ರೋಗ ಬಾಧಿತ ಮರಗಳಂತೆ ರೈತರೂ ಕಂಗಾಲಾಗಿದ್ದಾರೆ. ರೋಗ ನಿಯಂತ್ರಣಕ್ಕೆ ಪರಿಪೂರ್ಣವಾದ ಮಾರ್ಗೋಪಾಯಗಳಿಲ್ಲದೆ ವಿವಿಧ ಪ್ರಯೋಗಗಳನ್ನು ಮಾಡುತ್ತಲೇ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ. ಆದರೆ, ಅದಾವುವೂ ಯಶ ಕಾಣುತ್ತಿಲ್ಲ.
ಜಿಲ್ಲೆಯ ಬೆಳ್ತಂಗಡಿ, ಪುತ್ತೂರು, ಸುಳ್ಯ, ಪುತ್ತೂರು, ಬಂಟ್ವಾಳ ತಾಲ್ಲೂಕಿನಲ್ಲಿ ರೋಗ ಬಾಧೆ ತೀವ್ರವಾಗಿದ್ದು, ಮಂಗಳೂರು ತಾಲ್ಲೂಕಿನಲ್ಲಿ ರೋಗ ನಿಯಂತ್ರಣದಲ್ಲಿದೆ ಎನ್ನುತ್ತದೆ ತೋಟಗಾರಿಕೆ ಇಲಾಖೆ ಮಾಹಿತಿ.
ಜಿಲ್ಲೆಯ ಗಡಿ ಪ್ರದೇಶವಾದ ಬೆಳ್ತಂಗಡಿ ತಾಲ್ಲೂಕಿನ ನೆರಿಯ ಗ್ರಾಮದ ಬಾಂಜಾರಿನಲ್ಲೂ ರೋಗ ಬಾಧೆ ತೀವ್ರವಾಗಿದೆ. ಇಲ್ಲಿ ಸುಮಾರು 45 ಕುಟುಂಬಗಳಿದ್ದು, ಅಂದಾಜು 200 ಎಕರೆಯಲ್ಲಿ ಅಡಿಕೆ ಬೆಳೆ ಇದೆ. ಎಲ್ಲರ ತೋಟಗಳಿಗೂ ರೋಗ ಬಾಧಿಸಿದೆ. ಅಡಿಕೆ ಮರಗಳ ಜತೆಗೆ, ತೆಂಗು, ಇತರ ಮರಗಳ ಎಲೆಗಳಲ್ಲೂ ಇದೇ ರೀತಿಯ ರೋಗಲಕ್ಷಣಗಳು ಕಂಡುಬಂದಿವೆ.
‘ನಮ್ಮ ತೋಟದಲ್ಲಿ ಎರಡು ವರ್ಷಗಳ ಹಿಂದೆಯೇ ಈ ರೋಗ ಕಾಣಿಸಿಕೊಂಡಿತ್ತು. ಮಳೆ ಹೆಚ್ಚಾಗಿದ್ದರಿಂದ ಎಲೆ ಒಣಗಿರಬಹುದು ಎಂದು ಭಾವಿಸಿದ್ದೆವು. ಆದರೆ, ಸಣ್ಣ ಗಿಡಗಳು ಮತ್ತು ತೆಳ್ಳಗಿನ ಮರಗಳೆಲ್ಲ ಸಾಯಲಾರಂಭಿಸಿದವು. ಮಾಧ್ಯಮಗಳಲ್ಲಿ ಈ ರೋಗದ ಲಕ್ಷಣದ ಬಗ್ಗೆ ಮಾಹಿತಿ ಪಡೆದಾಗ ನಮ್ಮ ತೋಟಕ್ಕೂ ಎಲೆಚುಕ್ಕಿ ರೋಗವೇ ಬಾಧಿಸಿದೆ ಎಂದು ಗೊತ್ತಾಗಿ ಆತಂಕಗೊಂಡೆವು’ ಎಂದು ಬಾಂಜಾರಿನ ರೈತ ನವೀನ್ ತಿಳಿಸಿದರು.
ರೋಗ ಬಾಧಿಸಿರುವ ಮಾಹಿತಿ ಪಡೆದ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಬಾಧಿತ ಮರದ ಸೋಗೆ ತೆಗೆದು ಔಷಧಿ ಸಿಂಪಡಿಸಲು ತಿಳಿಸಿದ್ದಾರೆ. ಅವರು ಔಷಧಿ ನೀಡಿದ ಬಳಿಕ ಮಳೆ ಜಾಸ್ತಿಯಾಗಿ ಸಿಂಪಡಿಸಲೂ ಆಗಲಿಲ್ಲ. ಇದರಿಂದಾಗಿ ರೋಗ ಹೆಚ್ಚಾಗಿ ವ್ಯಾಪಿಸಿದೆ ಎಂದರು.
ಸುಳ್ಯ ತಾಲ್ಲೂಕಿನ ತೋಟಗಳ ಪರಿಸ್ಥಿತಿಯೂ ಬಾಂಜಾರಿನ ಸ್ಥಿತಿಗಿಂತ ಭಿನ್ನವಾಗಿಲ್ಲ. ಕೆಲವು ಬೆಳೆಗಾರರ ಶೇ 90ರಷ್ಟು ಅಡಿಕೆ ಮರಗಳು ನಾಶವಾಗಿವೆ.
‘ಆರಂಭದಲ್ಲಿ ಐದಾರು ಮರಗಳಲ್ಲಿ ಕಂಡುಬಂದಿದ್ದ ರೋಗ ಕ್ರಮೇಣ 500 ಹೊಸ ಗಿಡಗಳನ್ನೂ ಬಾಧಿಸಿತು. ಈ ಬಗ್ಗೆ ವಿಜ್ಞಾನಿಗಳಿಗೆ ಮಾಹಿತಿ ನೀಡಿದಾಗ ಅವರ ಸಲಹೆಯಂತೆ ಬಾಧಿತ ಗರಿಗಳನ್ನು ತೆಗೆದು ಔಷಧಿ ಸಿಂಪಡಿಸಿದೆ. ಆದರೆ, ಅದರಿಂದ ಪರಿಣಾಮ ಕಂಡುಬರಲಿಲ್ಲ. ಮತ್ತೊಂದು ತೋಟದಲ್ಲಿದ್ದ ದೊಡ್ಡ ಮರಗಳನ್ನೂ ಬಾಧಿಸಿತು. ಅಲ್ಲೂ ಔಷಧಿ ಸಿಂಪಡಿಸಿದೆ. 4 ಬಾರಿ ವಿವಿಧ ಔಷಧಿ ಸಿಂಪಡಿಸಿದಾಗ ಕೆಲ ಸಮಯ ರೋಗ ನಿಯಂತ್ರಣಕ್ಕೆ ಬಂದಿತು. ಆದರೆ, ಈ ಬಾರಿ ತೀವ್ರವಾಗಿದೆ. ನಮ್ಮ ತೋಟದ ಶೇ 90ಕ್ಕಿಂತಲೂ ಹೆಚ್ಚು ಮರಗಳಲ್ಲಿ ಎಲೆಚುಕ್ಕಿ ರೋಗ ಇದೆ’ ಎಂದು ಸುಳ್ಯ ತಾಲ್ಲೂಕಿನ ವಿಶ್ವಾಸ್ ಮಾಪಲತೋಟ ತಿಳಿಸಿದರು.
‘ನಮ್ಮ ತೋಟಕ್ಕೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಸಿಪಿಸಿಆರ್‌ಐನ ವಿಜ್ಞಾನಿಗಳು, ಹಿಂದಿನ ಸರ್ಕಾರದ ತೋಟಗಾರಿಕೆ ಸಚಿವರು ಬಂದಿದ್ದರು. ರೋಗ ನಿಯಂತ್ರಣಕ್ಕೆ ಸಾಮೂಹಿಕ ಕ್ರಮ ಕೈಗೊಳ್ಳಬೇಕು ಎಂದೂ ಸಲಹೆ ನೀಡಿದ್ದರು. ಆದರೆ, ನಿಯಂತ್ರಣ ಕ್ರಮ ವೆಚ್ಚದಾಯಕವಾಗಿರುವುದರಿಂದ ಎಲ್ಲರೂ ಮಾಡಲು ಸಿದ್ಧರಿಲ್ಲ. ನಮಗೆ ಅಷ್ಟೊಂದು ಆದಾಯ ಇಲ್ಲ ಎಂದು ಬೆಳೆಗಾರರು ತಿಳಿಸಿದ್ದರು. ಸಾಮುದಾಯಿಕವಾಗಿ ಸರ್ಕಾರವೇ ಕ್ರಮ ಕೈಗೊಂಡರೆ ಅನುಕೂಲವಾಗುತ್ತದೆ ಎಂದಿದ್ದೆವು. ತೋಟಗಾರಿಕೆ ಇಲಾಖೆಯಿಂದ ನೆರವಿನ ಭರವಸೆ ನೀಡಿದ್ದರು’ ಎಂದು ತಿಳಿಸಿದರು.
ಪರ್ಯಾಯ ಬೆಳೆಗಳತ್ತ ಚಿತ್ತ: ಜಿಲ್ಲೆಯ ಬಹುತೇಕ ರೈತರು ಅಡಿಕೆಯನ್ನೇ ನೆಚ್ಚಿಕೊಂಡಿದ್ದಾರೆ. ಅಡಿಕೆಯನ್ನು ಹಳದಿ ಎಲೆರೋಗ ಬಾಧಿಸಿದಾಗ, ಕೆಲವು ರೈತರು ತಾಳೆ ಬೆಳೆದಿದ್ದು, ತಕ್ಕಮಟ್ಟಿಗೆ ಲಾಭ ಗಳಿಸಿದ್ದಾರೆ. ಜತೆಗೆ ಬಿದಿರು ಕೃಷಿಗೂ ಆದ್ಯತೆ ನೀಡಬಹುದು. ಜಾಯಿ ಕಾಯಿ, ಕಾಳುಮೆಣಸು ಬೆಳೆಯನ್ನೂ ಅಡಿಕೆಗೆ ಪರ್ಯಾಯವಾಗಿ ಬೆಳೆಯಬಹುದು.
ಅಡಿಕೆಗೆ ಪರ್ಯಾಯವಾಗಿ ತೆಂಗು ಬೆಳೆ ಉತ್ತಮವಾಗಿದ್ದರೂ ಇತ್ತೀಚಿನ ಬೆಲೆಯಲ್ಲಿ ಸಾಧ್ಯವಿಲ್ಲ. ತೆಂಗು ಪ್ರತಿ ಕೆ.ಜಿ.ಗೆ ₹23 ಇದೆ. ತೆಂಗಿಗೆ ಕನಿಷ್ಠ ₹50 ಸಿಗಬೇಕು. ತಾಳೆ ಬೆಳೆಗೆ ಪ್ರಸ್ತುತ ₹12, ₹13 ಇದ್ದು, ₹20 ಬೇಕು. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ವಿಶ್ವಾಸ್ ಒತ್ತಾಯಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.