ಉಜಿರೆ: ಪತ್ರಕರ್ತರಿಗೆ ಕನ್ನಡದಲ್ಲಿ ಭಾಷಾ ಪ್ರಭುತ್ವ, ಭಾಷಾಂತರ ಕಲೆ ಮತ್ತು ಸಾಮಾನ್ಯ ಜ್ಞಾನ ಅಗತ್ಯ ಎಂದು ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಹೇಳಿದರು.
ಇಲ್ಲಿನ ಎಸ್‌ಡಿಎಂ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಅವರು ಬುಧವಾರ ಉಪನ್ಯಾಸ ನೀಡಿದರು.
ಪತ್ರಕರ್ತರಿಗೆ ಕಾನೂನಿನ ಅರಿವು ಇದ್ದು, ಸಾಹಿತ್ಯದ ಅಧ್ಯಯನವನ್ನೂ ಮಾಡಬೇಕು. ವಸ್ತುನಿಷ್ಠವಾದ ವರದಿಯನ್ನು ಸರಳ ಶೈಲಿಯಲ್ಲಿ ಬರೆಯಬೇಕು. ಇಂದು ವಾಟ್ಸ್‌ಆ್ಯಪ್, ಆನ್‌ಲೈನ್ ಬರವಣಿಗೆ, ಆಡಿಯೊ– ವಿಡಿಯೊ, ಮೊಬೈಲ್ ಮೊದಲಾದ ಮಾಧ್ಯಮಗಳಿಂದ ಪತ್ರಿಕೆ ಓದುವವರ ಸಂಖ್ಯೆ ಕಡಿಮೆಯಾದರೂ ಆತಂಕ ಪಡಬೇಕಾಗಿಲ್ಲ. ಪ್ರತಿಯೊಂದು ಪತ್ರಿಕೆಗೂ ತನ್ನದೇ ಆದ ಧೋರಣೆಗಳಿದ್ದು, ಪ್ರಜಾವಾಣಿ 74 ವಷಗಳಿಂದ ಓದುಗರ ವಿಶ್ವಸಾರ್ಹ ಪತ್ರಿಕೆಯಾಗಿ ಬೆಳೆಯುತ್ತಿದೆ, ಬೆಳಗುತ್ತಿದೆ ಎಂದು ಹೇಳಿದರು.
ಸಂಯಮದಿಂದ ಪತ್ರಿಕೆಗಳನ್ನು ಓದುವುದರಿಂದ ಆಲೋಚನಾ ಶಕ್ತಿ ಹಾಗೂ ವೈಚಾರಿಕತೆ ಬೆಳೆಯುತ್ತದೆ. ಪತ್ರಕರ್ತರು ಸದಾ ಅಧ್ಯಯನಶೀಲರಾಗಬೇಕು ಎಂದರು.
ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ ಹೆಗ್ಡೆ ಸ್ವಾಗತಿಸಿದರು. ಸಂಜಯ್ ವಂದಿಸಿದರು. ರಕ್ಷಾ ಕಾರ್ಯಕ್ರಮ ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.