ಪುತ್ತೂರು (ದಕ್ಷಿಣ ಕನ್ನಡ): ಸಿಮೆಂಟ್ ಸಾರಣೆ ಕೆಲಸದ ಸಹಾಯಕರಾಗಿದ್ದ ಕಾರ್ಮಿಕರೊಬ್ಬರು ಕೆಲಸದ ವೇಳೆ ಮೃತಪಟ್ಟಿದ್ದು, ಅವರ ಮೃತದೇಹವನ್ನು ಪಿಕಪ್ ವಾಹನದಲ್ಲಿ ತಂದು ಅವರ ಮನೆಯ ಸಮೀಪದ ರಸ್ತೆ ಬದಿಯಲ್ಲಿ ಇಟ್ಟುಹೋದ ಘಟನೆ ಪುತ್ತೂರು ನಗರದ ಹೊರವಲಯದ ಚಿಕ್ಕಮುಡ್ನೂರು ಗ್ರಾಮದ ಸಾಲ್ಮರ ಎಂಬಲ್ಲಿ ಶನಿವಾರ ನಡೆದಿದೆ.
ಮೇಸ್ತ್ರಿಯೊಂದಿಗೆ ಕೆಲಸ ಮಾಡುತ್ತಿದ್ದ ಶಿವಪ್ಪ (70) ಮೃತಪಟ್ಟವರು.
‘ಸಾರಣೆ ಕೆಲಸಕ್ಕೆಂದು ಕರೆದುಕೊಂಡು ಹೋದವರು ಪಿಕಪ್ ವಾಹನದಲ್ಲಿ ತಂದು ಮನೆಯ ಸಮೀಪದ ರಸ್ತೆಯಲ್ಲಿ ಶವ ಇಟ್ಟು ಹೋಗಿದ್ದಾರೆ. ನಾವು ನೋಡುವಾಗ ಮೃತಪಟ್ಟಿರುವುದು ಗೊತ್ತಾಗಿದೆ.
ಅನಾರೋಗ್ಯಕ್ಕೊಳ ಗಾಗಿದ್ದರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಬೇಕಾಗಿತ್ತು. ಮೃತಪಟ್ಟಿದ್ದರೆ ಸರಿಯಾದ ರೀತಿಯಲ್ಲಿ ನಡೆದುಕೊಳ್ಳಬೇಕಿತ್ತು. ಈ ರೀತಿ ಮಾಡಿರುವುದು ಎಷ್ಟು ಸರಿ’ ಎಂದು ಶಿವಪ್ಪ ಅವರ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದರು.
ಕಾಮಗಾರಿ ನಡೆಸುತ್ತಿದ್ದ ಮಾಲೀಕನ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಮೃತನ ಕುಟುಂಬದವರು ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ.
ಸ್ಥಳಕ್ಕೆ ಪುತ್ತೂರು ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.