ಮಂಗಳೂರು: ಸಹಕಾರಿ ಆಂದೋಲನ ವನ್ನು ಜನರ ಆಂದೋಲನವನ್ನಾಗಿಸಿ ಸಹಕಾರ ಕ್ಷೇತ್ರವನ್ನು ಇನ್ನಷ್ಟು ಸದೃಢ ಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸಹಕಾರ ಸಂಸ್ಥೆಗಳ ಕಾರ್ಯ ನಿರ್ವಹಣೆ ಜಾತ್ಯತೀತ, ಪಕ್ಷಾತೀತವಾಗಿ ನಡೆಯು ವಂತಾಗಬೇಕು ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಆಶಿಸಿದರು.
71ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‌ಸಿಡಿಸಿಸಿ) ಜಂಟಿಯಾಗಿ ಸ್ಥಳೀಯ ಸಹಕಾರ ಸಂಸ್ಥೆಗಳ ಸಹಯೋಗದಲ್ಲಿ ಶನಿವಾರ ಇಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ‘ಉದ್ಯಮಶೀಲತೆ, ಉದ್ಯೋಗ ಮತ್ತು ಕೌಶಲಾಭಿವೃದ್ಧಿ ಉತ್ತೇಜಿಸು ವಲ್ಲಿ ಸಹಕಾರ ಸಂಸ್ಥೆಗಳ ಪಾತ್ರ’ ಕುರಿತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
2023ರ ವೇಳೆಗೆ ಭಾರತವು ಪ್ರಪಂಚದ ಪ್ರಬಲ ಆರ್ಥಿಕ ಶಕ್ತಿಗಳಲ್ಲಿ ಒಂದಾಗಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಅವರ ಕನಸಾಗಿದೆ. ಇದು ಸಾಕಾರಗೊಳ್ಳು ವಲ್ಲಿ ಸಹಕಾರ ಕ್ಷೇತ್ರದ ಪಾತ್ರ
ಮಹತ್ವದ್ದಾಗಿದೆ. ನಿರುದ್ಯೋಗಿ ಯುವಜನರನ್ನು ಸಹಕಾರ ಕ್ಷೇತ್ರದಲ್ಲಿ ತೊಡಗಿಸುವ ಮೂಲಕ ಉದ್ಯೋಗ ಸೃಷ್ಟಿಗೆ ಪೂರಕ ಸೌಲಭ್ಯ ಒದಗಿಸಬೇಕು. ಸಹಕಾರ ಸಂಸ್ಥೆಗಳು ಸದಸ್ಯತ್ವ ಹೆಚ್ಚಿಸುವ ಜೊತೆಗೆ ಜನರ ಎಲ್ಲ ಅಗತ್ಯ ಪೂರೈಸಲು ಸನ್ನದ್ಧವಾದಾಗ ಸಹಕಾರ ಆಂದೋಲನ ನಿಶ್ಚಿತವಾಗಿ ಬಲಗೊಳ್ಳುತ್ತದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಜಿ.ಟಿ. ದೇವೇಗೌಡ ಮಾತನಾಡಿ, ‘ರೈತರಿಗೆ ಕೃಷಿ ಸಾಲ ನೀಡುವ ಸಹಕಾರ ಸಂಸ್ಥೆಗಳಿಗೆ ರಿಯಾಯಿತಿ ಬಡ್ಡಿದರದಲ್ಲಿ ನೀಡುವ ಸಾಲದ ಮೊತ್ತವನ್ನು ನಬಾರ್ಡ್ ಕಡಿತಗೊಳಿಸಿದೆ. ಕಳೆದ ವರ್ಷ ರಾಜ್ಯಕ್ಕೆ ₹5,640 ಕೋಟಿ ದೊರೆತಿದ್ದರೆ, ಈ ಬಾರಿ ₹2,340 ಕೋಟಿ ಮಾತ್ರ ಮಂಜೂರು ಮಾಡಿದೆ. ಹೀಗಾದಲ್ಲಿ ರೈತರು ಹೇಗೆ ಕೃಷಿ ಮಾಡಲು ಸಾಧ್ಯ? ಕೇಂದ್ರ
ಸರ್ಕಾರ ಕೂಡಲೇ ಈ ಬಗ್ಗೆ ಗಮನಹರಿಸ ಬೇಕು’ ಎಂದು ಆಗ್ರಹಿಸಿದರು.
ಸ್ಪೀಕರ್ ಯು.ಟಿ.ಖಾದರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಶಾಸಕ ಲಕ್ಷ್ಮಣ ಸವದಿ, ಸಂಸದ ಕ್ಯಾ.ಬ್ರಿಜೇಶ್ ಚೌಟ ಇದ್ದರು. ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.