ADVERTISEMENT

ಮಂಗಳೂರು: ಕುಕ್ಕಿಲದಲ್ಲಿ ನಾಡ ಮಾವು ಜೀನ್ ಬ್ಯಾಂಕ್

ಸಂಧ್ಯಾ ಹೆಗಡೆ
Published 18 ಮೇ 2024, 8:32 IST
Last Updated 18 ಮೇ 2024, 8:32 IST
<div class="paragraphs"><p>ಕುಕ್ಕಿಲದ ಗುಡ್ಡದಲ್ಲಿ ಬೆಳೆದಿರುವ ನಾಡ ಮಾವಿನ ಗಿಡದೊಂದಿಗೆ ಡಾ. ಮನೋಹರ ಉಪಾಧ್ಯ –‌</p></div>

ಕುಕ್ಕಿಲದ ಗುಡ್ಡದಲ್ಲಿ ಬೆಳೆದಿರುವ ನಾಡ ಮಾವಿನ ಗಿಡದೊಂದಿಗೆ ಡಾ. ಮನೋಹರ ಉಪಾಧ್ಯ –‌

   

ಪ್ರಜಾವಾಣಿ ಚಿತ್ರ / ಫಕ್ರುದ್ಧೀನ್ ಎಚ್

ಮಂಗಳೂರು: ನಗರದಿಂದ 38 ಕಿ.ಮೀ ದೂರದಲ್ಲಿರುವ ಕುಕ್ಕಿಲ ಎಂಬ ಪುಟ್ಟ ಹಳ್ಳಿಯ ಗುಡ್ಡದ ತಟದಲ್ಲಿ, ನಶಿಸುತ್ತಿರುವ ಕರಾವಳಿ– ಮಲೆನಾಡಿನ ಅಪರೂಪದ ನಾಡ ಮಾವು ಜೀನ್‌ ಬ್ಯಾಂಕ್ ಮೈದಳೆದಿದೆ.

ADVERTISEMENT

ವೃತ್ತಿಯಲ್ಲಿ ಪಶುವೈದ್ಯರಾಗಿರುವ ಡಾ. ಮನೋಹ ಉಪಾಧ್ಯ ಅವರಿಗೆ ನಾಡು ತಳಿಗಳ ಸಂರಕ್ಷಣೆಯ ಬಗ್ಗೆ ಅತೀವ ಆಸಕ್ತಿ. ಈ ಆಸಕ್ತಿಯ ಫಲವಾಗಿ ಬಂಟ್ವಾಳ ತಾಲ್ಲೂಕಿನ ಕುಕ್ಕಿಲದಲ್ಲಿ ಜಾಗವೊಂದನ್ನು ಖರೀದಿಸಿ, ಅವರು ಸುಮಾರು 400 ಜಾತಿಯ ನಾಡ ಮಾವು ಸಸಿಗಳನ್ನು ನಾಟಿ ಮಾಡಿದ್ದಾರೆ. 

ತಯ್ಯಿಲ್ ಚೊಪ್ಪನ್, ಬಪ್ಪಾಯಿ ಕಡುಕಾಚಿ, ಸಿಂಗಾಣಿ, ಅಲ್ಬುಕರ್ಕ್, ಕೈಂತಜೆ ಜೀರಿಗೆ, ಅಯ್ಯನಕಟ್ಟೆ, ಮುಳಬಾಗಿಲು ಮೆಲೋಗರ, ಬಡಾಪೈರಿ, ಪನ್ನೆಸೊನೆ, ಉಮಡ್ಕ ಸಾಸಿವೆ, ಕೇರಳ ಅಪ್ಪೆ ಸಾಸಿವೆ, ಗಿಳಿಕುಕ್ಕು, ಬಾಯ್ಮನೆ ಕಸಿ, ಪದ್ಯಾಣ ಜೀರಿಗೆ, ದೇವರಕೊಲ್ಲಿ, ಮಾಣಿಭಟ್ಟ, ಅಮ್ಮಂಕಲ್ಲು ಇಡ್ಕಾಯಿ, ಚೆನ್ನಪ್ಪ ಚೆಡ್ಕಾರ್, ಮುಂಚಿಕುಕ್ಕು ಅಜ್ಜಾವರ, ಶಂಕರಿ ಗೊರ್ಗೋಡಿ, ಲಾಡು ಮುಳಿಯ, ನಾಗರಡಿ ಬೆಳ್ವೆ ಮುಂತಾದ ಹಳ್ಳಿಗರೇ ಹೆಸರಿಸಿರುವ ನಾಡು ಜಾತಿಯ ಮಾವಿನ ಗಿಡಗಳು ಚಿಗುರೊಡೆದಿವೆ.

ಹೋಲಿಕೆಯ ದೃಷ್ಟಿಯಿಂದ ಇವುಗಳ ಜೊತೆಗೆ ಸುಮಾರು 50 ಹೈಬ್ರೀಡ್, ಎಕ್ಸಾಟಿಕ್ ಜಾತಿಯ ಮಾವಿನ ಸಸಿಗಳನ್ನು ಕೂಡ ಅವರು ಬೆಳೆಸಿದ್ದಾರೆ. ಮಾವಿನ ತೋಪಿ ಸುತ್ತಲು ಕಾವಲುಗಾರರಂತೆ ಹಲಸಿನ ಗಿಡಗಳು ನೆಲೆಯೂರಿವೆ. ಇವು ಕೂಡ ಸ್ಥಳೀಯವಾಗಿ ಲಭ್ಯವಾಗುವ ಹಲಸು ವೈವಿಧ್ಯಗಳಾಗಿವೆ.

‘ನಮ್ಮ ಮೂಲ ನೆಲೆ ಉಡುಪಿ ಜಿಲ್ಲೆಯ ಪಾರಂಪಳ್ಳಿ ಗ್ರಾಮದ ‘ಬಾಯ್ಮನೆ ಕಸಿ’ ಹಣ್ಣಿನ ರುಚಿ ಹಾಗೂ ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ಅವರು ಕೇರಳ ರಾಜ್ಯದ ಕಣ್ಣಪ್ಪುರಂನಲ್ಲಿ ನಡೆಯುವ ನಾಡ ಮಾವು ಮೇಳಕ್ಕೆ ಕರೆದೊಯ್ದ ಅನುಭವವು ನಾಡ ಮಾವು ಜೀನ್ ಬ್ಯಾಂಕ್ ಕಲ್ಪನೆಗೆ ಮೂಲ ಪ್ರೇರಣೆಯಾದವು’ ಎನ್ನುತ್ತಾರೆ ಡಾ. ಉಪಾಧ್ಯ.

‘2022ರಿಂದ ನಾಡ ಮಾವು ತಳಿಗಳ ಹುಡುಕಾಟ ಆರಂಭವಾಯಿತು. ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳು, ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆಗಳ ಭಾಗಶಃ ಪ್ರದೇಶಗಳಿಂದ ನಾಡ ಮಾವು ತಳಿಗಳನ್ನು ಸಂಗ್ರಹಿಸಿದ್ದೇನೆ. ಆಯಾ ಊರಿಗೆ ಹೋಗಿ ಸಂಗ್ರಹಿಸಿದ ಕಸಿ ಕಡ್ಡಿಯನ್ನು (ಸಯಾನ್‌) ಸರ್ವೇಶ್ವರ ರಾವ್ ಅವರು ಕಸಿ ಗಿಡ ಮಾಡಿ, ಬೆಳೆಸಿಕೊಟ್ಟರೆ, ನಾಡ ಮಾವು ಮಿತ್ರರು (ನಾಮಾಮಿ) ಬಳಗದ ಸದಸ್ಯರು ಹಲವಾರು ಮಾಹಿತಿ ನೀಡುವಲ್ಲಿ ನೆರವಾದರು’ ಎಂದು ಸ್ಮರಿಸುತ್ತಾರೆ ಅವರು.

ಪ್ರತಿ 15 ಅಡಿಗೆ ಒಂದು ಗಿಡ ನಾಟಿ ಮಾಡಲಾಗಿದೆ. ಸುಮಾರು 550ರಷ್ಟು ಗಿಡಗಳ ನಾಟಿಗೆ ಅವಕಾಶ ಇದೆ. ಇನ್ನೂ 75 ನಾಡ ಮಾವಿನ ಸಸಿಗಳು, 50ರಷ್ಟು ಹಲಸಿನ ಗಿಡಗಳನ್ನು ನಾಟಿ ಮಾಡುವುದು ಅವರ ಗುರಿ.

ಕುಕ್ಕಿಲದ ಗುಡ್ಡದಲ್ಲಿ ಬೆಳೆದಿರುವ ನಾಡ ಮಾವಿನ ಗಿಡದೊಂದಿಗೆ ಡಾ. ಮನೋಹರ ಉಪಾಧ್ಯ – ಪ್ರಜಾವಾಣಿ ಚಿತ್ರ / ಫಕ್ರುದ್ಧೀನ್ ಎಚ್
ನಾಡ ಮಾವಿನ ಗಿಡಗಳ ರಕ್ಷಣೆಗೆ ಮಾಡಿರುವ ಬೋರ್‌ವೆಲ್ ವ್ಯವಸ್ಥೆ ಬಗ್ಗೆ ಡಾ. ಉಪಾಧ್ಯ ವಿವರಣೆ ನೀಡಿದರು – ಪ್ರಜಾವಾಣಿ ಚಿತ್ರ / ಫಕ್ರುದ್ಧೀನ್ ಎಚ್

Quote - ಪ್ರತಿಯೊಬ್ಬರೂ ಒಂದೊಂದು ನಾಡ ಮಾವು ತಳಿ ಸಂರಕ್ಷಣೆ ಮಾಡಿದರೆ ನಶಿಸುತ್ತಿರುವ ನಾಡ ಮಾವು ತಳಿಗಳ ಕಂಪು ಪಸರಿಸಲು ಸಾಧ್ಯ. ಡಾ. ಮನೋಹರ ಉಪಾಧ್ಯ ತಳಿ ಸಂರಕ್ಷಕ

Cut-off box - ನೀರಾವರಿ ವ್ಯವಸ್ಥೆ ಬಿರು ಬೇಸಿಗೆಯಲ್ಲೂ ಇಳಿಜಾರಿನ ಗುಡ್ಡದಲ್ಲಿ ಮಾವಿನ ಸಸಿಗಳು ನಳನಳಿಸುತ್ತಿವೆ. ಉಪಾಧ್ಯರು ಬೋರ್‌ವೆಲ್ ತೆಗೆದು ಇದಕ್ಕೆ ಹನಿ ನೀರಾವರಿ ವ್ಯವಸ್ಥೆ ಮಾಡಿದ್ದಾರೆ. ತಾವೇ ಸ್ವತಃ ಭೇಟಿ ನೀಡಿ ಗಿಡಗಳಿಗೆ ನೀರು ಜೀವಾಮೃತ ಉಣಿಸುತ್ತಾರೆ. ಇನ್ನು ಮೂರು ವರ್ಷಗಳಲ್ಲಿ ಎಲ್ಲ ಸಸಿಗಳು ಮರವಾಗಿ ಬೆಳೆದು ಹಣ್ಣು ನೀಡಬಹುದು ಎಂಬುದು ಡಾ. ಉಪಾಧ್ಯರ ನಿರೀಕ್ಷೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.