ADVERTISEMENT

ಮಂಗಳೂರು | ಕೋವಿಡ್-19ರಿಂದ‌ ವೃದ್ಧೆ ಸಾವು:‌ ಅಂತ್ಯಸಂಸ್ಕಾರಕ್ಕೆ ಸ್ಥಳೀಯರ ವಿರೋಧ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2020, 2:06 IST
Last Updated 24 ಏಪ್ರಿಲ್ 2020, 2:06 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮಂಗಳೂರು: ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದಾಗಿ ಗುರುವಾರ ಮೃತಪಟ್ಟ ಮಹಿಳೆಯ ಅಂತ್ಯ ಸಂಸ್ಕಾರ ನಡೆಸಲು ಜಿಲ್ಲಾಡಳಿತ ಪರದಾಡುವಂತಾಗಿದೆ.

ಪಚ್ಚನಾಡಿಯ ಸ್ಮಶಾನದಲ್ಲಿ ಜಿಲ್ಲಾಡಳಿತ ವ್ಯವಸ್ಥೆ ಮಾಡಿದ್ದು, ಇದೀಗ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈ ನಡುವೆಯೇ ಸ್ಥಳಕ್ಕೆ ಶಾಸಕ ಡಾ. ಭರತ್ ಶೆಟ್ಟಿ ಭೇಟಿ ನೀಡಿದ್ದು, ಶಾಸಕರು ಜನರ ಬೆಂಬಲಕ್ಕೆ ನಿಂತಿದ್ದಾರೆ.

ಕೋವಿಡ್ -19 ನಿಂದ ಮೃತಪಟ್ಟಿರುವ ಮಹಿಳೆಯ ಶವ ಸಂಸ್ಕಾರ ನಡೆಸಲು ಪಚ್ಚನಾಡಿಯಲ್ಲಿರುವ ಸ್ಮಶಾನದಲ್ಲಿ ತಯಾರಿ ನಡೆಸುತ್ತಿರುವಾಗಲೇ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಸುದ್ದಿ ತಿಳಿದ ಶಾಸಕ ಭರತ್ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ADVERTISEMENT

ಮೂಡುಶೆಡ್ಡೆಯಲ್ಲೂ ವಿರೋಧ: ಮಹಿಳೆಯ ಶವ ಸಂಸ್ಕಾರವನ್ನು ಮೂಡುಶೆಡ್ಡೆಯ ಸ್ಮಶಾನದಲ್ಲಿ ನಡೆಸಲಾಗುತ್ತದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಮೂಡುಶೆಡ್ಡೆಯ ಸ್ಮಶಾನದ ಬಳಿಗೆ ಸ್ಥಳೀಯರು ಜಮಾಯಿಸಿ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಕೋವಿಡ್ -19 ಸೋಂಕಿತ ಮಹಿಳೆಯ ಶವ ಸಂಸ್ಕಾರದ ಬಗ್ಗೆ ಸ್ಥಳೀಯರಲ್ಲಿ ಆತಂಕ ಮೂಡಿದೆ.

ಮೃತ ವ್ಯಕ್ತಿ ಬಂಟ್ವಾಳದವರು. ಬಂಟ್ವಾಳದಲ್ಲೇ ಶವಸಂಸ್ಕಾರವನ್ನು ನಡೆಸಬೇಕು. ಯಾವುದೇ ಕಾರಣಕ್ಕೂ ಮೂಡುಶೆಡ್ಡೆಯಲ್ಲಿ ಶವಸಂಸ್ಕಾರ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಶಾಸಕ ಉಮಾನಾಥ್ ಕೊಟ್ಯಾನ್ ಸ್ಪಷ್ಟಪಡಿಸಿದ್ದಾರೆ.

ಕೆಲ ದಿನಗಳ ಹಿಂದೆ ಕೋವಿಡ್ ಸೋಂಕಿನಿಂದ ಮೃತಪಟ್ಟ ಮಹಿಳೆಯ‌ ಅಂತ್ಯಸಂಸ್ಕಾರವನ್ನು ಬೋಳೂರಿನಲ್ಲಿ‌ ನಡೆಸಿದ ಜಿಲ್ಲಾಡಳಿತದ‌ ನಿರ್ಧಾರಕ್ಕೂ‌ ಸ್ಥಳೀಯರ ವಿರೋಧ ವ್ಯಕ್ತವಾಗಿತ್ತು. ನಂತರ ತಿಳಿವಳಿಕೆ ನೀಡಿ‌ ಅಂತ್ಯಸಂಸ್ಕಾರ ನಡೆಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.