ADVERTISEMENT

ಬಾಯಲ್ಲಿ ಜೈಶ್ರೀರಾಮ್ ಎಂದು ಮಾಡಬಾರದ ಕೆಲಸ ಮಾಡುತ್ತಾರೆ

ಬಿಜೆಪಿ ನಾಯಕರ ವಿರುದ್ಧ ದಿನೇಶ್‌ ಗುಂಡೂರಾವ್‌ ಆರೋಪ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2024, 16:03 IST
Last Updated 4 ಏಪ್ರಿಲ್ 2024, 16:03 IST

ಮಂಗಳೂರು: ‘ಚುನಾವಣಾ ಬಾಂಡ್ ಮೂಲಕ ಕಾನೂನುಬದ್ಧವಾಗಿ ಲೂಟಿ ಮಾಡಿದ, ಧರ್ಮವನ್ನು ಬಳಸಿ ಅಧರ್ಮ ನಡೆಸಿದ ಪಕ್ಷ ಬಿಜೆಪಿ. ಬಿಜೆಪಿಯವರು ಬಾಯಲ್ಲಿ ಜೈ ಶ್ರೀರಾಮ್ ಎಂದು ಹೇಳಿ, ಮಾಡಬಾರದ ಕೆಲಸ ಮಾಡುತ್ತಾರೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಆರೋಪಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಶೂನ್ಯ ಲಾಭ ಹೊಂದಿದ ಅಥವಾ ನಷ್ಟದಲ್ಲಿದ್ದ 33 ಕಂಪನಿಗಳು ಚುನಾವಣಾ ಬಾಂಡ್ ರೂಪದಲ್ಲಿ ಬಿಜೆಪಿಗೆ ₹ 434.2 ಕೋಟಿ  ದೇಣಿಗೆ ನೀಡಿವೆ. ಇವೆಲ್ಲವೂ ಷೆಲ್‌ ಕಂಪನಿಗಳು. ಕೆಲವು ಕಂಪನಿಗಳು ಸ್ವಲ್ಪ ತಮ್ಮ ಲಾಭದ ಮೊತ್ತಕ್ಕಿಂತಲೂ ಹೆಚ್ಚು ಹಣವನ್ನು ಚುನಾವಣಾ ಬಾಂಡ್‌ ರೂಪದಲ್ಲಿ ಬಿಜೆಪಿಗೆ ದೇಣಿಗೆ ನೀಡಿದ್ದು, ಈ ಮೊತ್ತ ₹ 601 ಕೋಟಿಯಷ್ಟಿದೆ. ಇದು ಹಣ ಅಕ್ರಮ ವರ್ಗಾವಣೆಯಲ್ಲವೇ.  ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯನ್ನು (ಪಿಎಂಎಲ್‌ಎ ) ರಾಜಕಾರಣಿಗಳು, ಉದ್ದಿಮೆದಾರರ ಮೇಲೆ ರಾಜಕೀಯವಾಗಿ ದುರ್ಬಳಕೆ ಮಾಡುವ ಜಾರಿ ನಿರ್ದೇಶನಾಲಯವು ಬಿಜೆಪಿ ವಿರುದ್ಧವೂ ಕ್ರಮ ಕೈಗೊಳ್ಳಬೇಕಲ್ಲವೇ’ ಎಂದು ಪ್ರಶ್ನಿಸಿದರು. 

‘ಬಿಜೆಪಿಯು ಕಾನೂನಿನ ಹಾಗೂ ಧರ್ಮದ ಕವಚವನ್ನು ಬಳಸಿ ಅತ್ಯಂತ ಭ್ರಷ್ಟ ಹಾಗೂ ಪಾಪದ ಕೆಲಸ ಮಾಡಿದೆ. ಈ ಪ್ರಕಾರದ ಕಪಟ ಹಾಗೂ ಮೋಸವನ್ನು ದೇಶದ ಬೇರಾವುದೇ ಪಕ್ಷ  ಮಾಡಿದೆಯೇ’ ಎಂದು ಪ್ರಶ್ನಿಸಿದರು.

ADVERTISEMENT

‘15ನೇ ಹಣಕಾಸು ಆಯೋಗವು ರಾಜ್ಯಕ್ಕೆ ಬೇರೆ ಬೇರೆ ಯೋಜನೆಯಗಳಡಿ ₹16,990 ಕೋಟಿ ಹೆಚ್ಚುವರಿ ವಿಶೇಷ ಅನುದಾನ ನೀಡುವಂತೆ ಶಿಫಾರಸು ಮಾಡಿತ್ತು. ಆದರೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ‘ಕರ್ನಾಟಕಕ್ಕೆ ವಿಶೇಷ ಅನುದಾನ ನೀಡುವಂತೆ ಹಣಕಾಸು ಆಯೋಗ ಆದೇಶ ಮಾಡಿರಲಿಲ್ಲ’ ಎಂದು ಸುಳ್ಳು ಹೇಳಿದ್ದಾರೆ. ಇನ್ನೊಂದೆಡೆ ಹಣಕಾಸು ಆಯೋಗದ ಶಿಫಾರಸು ಇಲ್ಲದೆಯೇ ಉತ್ತರ ಪ್ರದೇಶಕ್ಕೆ ₹ 2,117 ಕೋಟಿ  ಹಾಗೂ ಗುಜರಾತ್‌ಗೆ ₹ 431 ಕೋಟಿ ನೀಡಲಾಗಿದೆ. ಇಷ್ಟಾಗಿಯೂ ಕರ್ನಾಟಕಕ್ಕೆ ಅನ್ಯಾಯ ಆಗಿದ್ದನ್ನು ಕೇಂದ್ರ ಒಪ್ಪಿಕೊಳ್ಳುತ್ತಿಲ್ಲ’ ಎಂದರು.

‘ಬರ ಪರಿಹಾರಕ್ಕೆ ಕರ್ನಾಟಕ ತಡವಾಗಿ ಕೋರಿಕೆ ಸಲ್ಲಿಸಿದೆ. ಸರಿಯಾಗಿ ವರದಿ ಕೊಡಲಿಲ್ಲ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ. ಇದಕ್ಕಿಂತ ಮಹಾ ಸುಳ್ಳು ಇಲ್ಲ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಬರ ಪರಿಹಾರ ಘೋಷಣೆಗೆ ಕರ್ನಾಟಕದ ಮಾದರಿಯನ್ನು ಅನುಸರಿಸುವಂತೆ ಬೇರೆ ರಾಜ್ಯಗಳಿಗೆ ಪತ್ರ ಬರೆದಿದೆ. ಬರ ಪರಿಹಾರಕ್ಕೆ ರಾಜ್ಯವು 2023ರ ಅಕ್ಟೋಬರ್‌ನಲ್ಲೇ ಕೋರಿಕೆ ಸಲ್ಲಿಸಿತ್ತು’ ಎಂದರು.

‘ಕೇಂದ್ರದ ತಾರತಮ್ಯ ಪ್ರಶ್ನಿಸಿ ನಾವು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದೇವೆ. ಅಮಿತ್‌ ಶಾ ಅವರು ಏನು ಹೇಳಿಕೆ ನೀಡಿದ್ದಾರೋ ಅದನ್ನು ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ರೂಪದಲ್ಲಿ ಸಲ್ಲಿಸಲಿ’ ಎಂದು ಅವರು ಸವಾಲು ಹಾಕಿದರು.

‘ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಕರ್ನಾಟಕ್ಕೆ ₹ 4 ಲಕ್ಷ ಕೋಟಿ ತೆರಿಗೆ ಪಾಲು ಕೊಟ್ಟಿದ್ದೇವೆ’ ಎನ್ನುವ ಮೂಲಕ ಅಮಿತ್ ಶಾ  ರಾಜ್ಯಕ್ಕೆ ಭಿಕ್ಷೆ ಕೊಟ್ಟಂತೆ  ಮಾತನಾಡಿದ್ದಾರೆ. 2015ರಿಂದ 2024ರವರೆಗೆ  ಕರ್ನಾಟಕದಿಂದ ಕೇಂದ್ರಕ್ಕೆ ₹ 12 ಲಕ್ಷ ಕೋಟಿ ತೆರಿಗೆ ಸಂದಾಯವಾಗಿದೆ. ವಾಪಾಸ್‌ ಬಂದಿದ್ದು, ₹ 2.95 ಲಕ್ಷ ಕೋಟಿ ಮಾತ್ರ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.