ಪುತ್ತೂರು: ‘12 ವರ್ಷಗಳ ಹಿಂದೆ ನಡೆದ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ರಾಜಕೀಯ ಪಕ್ಷದಿಂದ ನ್ಯಾಯ ಸಿಗಲಿಲ್ಲ. ಹಾಗಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ನೋಟಾ ಮತ ಚಲಾಯಿಸಬೇಕೆಂದು ಅಭಿಯಾನ ಮಾಡಲಿದ್ದೇವೆ’ ಎಂದು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸಂಸ್ಥಾಪಕ ಮಹೇಶ್ ತಿಮರೋಡಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸೋಮವಾರ ನೋಟಾ ಮತ ಪತ್ರ ಬಿಡುಗಡೆ ಮಾಡಿದ ಅವರು, ‘ನಾವು ಯಾವುದೇ ಪಕ್ಷವನ್ನು ದೂಷಣೆ ಮಾಡುವುದಿಲ್ಲ. ಯಾವುದೇ ರಾಜಕೀಯ ಪಕ್ಷವನ್ನು ಸೋಲಿಸಲು ಮತ್ತು ಯಾರನ್ನೋ ತೇಜೋವಧೆ ಮಾಡಲು ನೋಟ ಅಭಿಯಾನ ಮಾಡುತ್ತಿಲ್ಲ. ಧರ್ಮ, ಸತ್ಯದ ಚುನಾವಣೆಯಾಗಿ ನೋಟಾ ಅಭಿಯಾನ ಮಾಡಲಿದ್ದೇವೆ. 12 ವರ್ಷದಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ. ನಮ್ಮ ಮೇಲೆ ಸುಳ್ಳು ಆರೋಪ ಮಾಡಿ ಪ್ರಕರಣ ದಾಖಲಿಸಿದ್ದಾರೆ. ಹಾಗಾಗಿ ನಾವು ನೋಟಾಕ್ಕೆ ಮತ ಚಲಾಯಿಸಲಿದ್ದೇವೆ. ನಮಗೆ ಸುಮಾರು ಒಂದೂವರೆಯಿಂದ ಎರಡು ಲಕ್ಷ ನೋಟಾ ಮತ ಬರುವ ನಿರೀಕ್ಷೆ ಇದೆ’ ಎಂದರು.
ಧಾರ್ಮಿಕ ಚಿಂತಕ ತಮ್ಮಣ್ಣ ಶೆಟ್ಟಿ ಮಾತನಾಡಿ, ‘ನಾವು ನ್ಯಾಯಾಕ್ಕಾಗಿ ನೋಟಾ ಅಭಿಯಾನ ಮಾಡುತ್ತಿದ್ದೇವೆ. ಅನ್ಯಾಯ ಮಾಡುವುದು ಅಪರಾಧ, ಅನ್ಯಾಯವನ್ನು ಸಹಿಸುವುದು ಮಹಾ ಅಪರಾಧ ಎಂದು ಅಭಿಯಾನದ ಕರ ಪತ್ರದಲ್ಲಿ ಉಲ್ಲೇಖಿಸಿದ್ದೇವೆ. ನೋಟಾ ಅಭಿಯಾನದಲ್ಲಿ ಸ್ವಾರ್ಥವಿಲ್ಲ’ ಎಂದು ಅವರು ಹೇಳಿದರು.
ಸೌಜನ್ಯಾ ಪರ ಹೋರಾಟ ಸಮಿತಿಯ ಭರತ್ ಕೆಮ್ಮಾರ, ಜಯಂತ್ ಟಿ. ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.