ADVERTISEMENT

ಲೋಕಸಭೆ ಚುನಾವಣೆ | ಮತದಾನಕ್ಕೆ ಬರುವವರಿಗೆ ಬಸ್‌ ದರ ಏರಿಕೆ ಬಿಸಿ

ಬೆಂಗಳೂರು– ಮಂಗಳೂರು, ಮೈಸೂರು–ಮಂಗಳೂರು ಖಾಸಗಿ ಬಸ್‌ಗಳಿಗೆ ಹೆಚ್ಚಿದ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2024, 21:08 IST
Last Updated 24 ಏಪ್ರಿಲ್ 2024, 21:08 IST
   

ಮಂಗಳೂರು: ಲೋಕಸಭೆ ಚುನಾವಣೆ ಮತ್ತು ವಾರಾಂತ್ಯದ ರಜೆಗಳು ಒಟ್ಟೊಟ್ಟಿಗೆ ಬಂದಿದ್ದು, ಖಾಸಗಿ ಬಸ್‌ಗಳವರು ದರ ಹೆಚ್ಚಿಸಿದ್ದಾರೆ.

ಏ.26ರಂದು ದಕ್ಷಿಣ ಕನ್ನಡ, ಉಡುಪಿ– ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಉದ್ಯೋಗಕ್ಕಾಗಿ ಬೆಂಗಳೂರು, ಮೈಸೂರು ಇನ್ನಿತರ ಕಡೆಗಳಲ್ಲಿ ನೆಲೆಸಿರುವವರು ತಮ್ಮ ಹಕ್ಕು ಚಲಾಯಿಸಲು ಊರಿಗೆ ಬರಲು ಉತ್ಸುಕರಾಗಿದ್ದಾರೆ. ಶುಕ್ರವಾರ ಮತದಾನ, ನಂತರ ವಾರದ ಕೊನೆಯ ಎರಡು ದಿನಗಳು ಸೇರಿ ಒಟ್ಟಿಗೆ ಮೂರು ರಜಾದಿನಗಳು ಸಿಗುವುದರಿಂದ ಊರಿಗೆ ಬರಲು ಹೊರಟವರು ಖಾಸಗಿ ಬಸ್‌ಗಳ ಟಿಕೆಟ್ ದರ ನೋಡಿ ಕಂಗಾಲಾಗಿದ್ದಾರೆ.

ಸಾಮಾನ್ಯ ದಿನಗಳಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಎಸಿರಹಿತ ಸ್ಲೀಪರ್ ಬಸ್‌ ದರ ಸರಾಸರಿ ₹750ರಿಂದ ₹800 ಇದ್ದರೆ, ಏ.25, 26ರಂದು 1,300ರಿಂದ ₹1,700ರವರೆಗೆ ಏರಿಕೆಯಾಗಿದೆ. ಎಸಿ ಸ್ಲೀಪರ್‌ಗೆ ಗರಿಷ್ಠ ₹2,999 ಟಿಕೆಟ್ ದರ ನಿಗದಿಯಾಗಿದೆ. ಈಗಾಗಲೇ ಬಹುತೇಕ ಬಸ್‌ಗಳು ಭರ್ತಿಯಾಗಿದ್ದು, ಆ್ಯಪ್‌ಗಳಲ್ಲಿ ತೋರುವಂತೆ ಹೆಚ್ಚಿನ ಬಸ್‌ಗಳಲ್ಲಿ ಒಂದೆರಡು ಸೀಟ್‌ಗಳು ಮಾತ್ರ ಲಭ್ಯ ಇವೆ.

ADVERTISEMENT

‘ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸಹ ಟಿಕೆಟ್ ದರ ಏರಿಕೆ ಆಗಿದೆ. ಸಾಮಾನ್ಯ ದಿನಗಳಲ್ಲಿ ಬೆಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ರಾಜಹಂಸ ಬಸ್‌ ಟಿಕೆಟ್ ದರ ₹580 ಇದ್ದರೆ, ವಾರದ ಕೊನೆಯಲ್ಲಿ ವಿಶೇಷ ಬಸ್‌ ಎಂದು ತೋರಿಸಿ ಟಿಕೆಟ್‌ ದರವನ್ನು ₹727ಕ್ಕೆ ಹೆಚ್ಚಿಸಿವೆ. ಎಸಿ ಸ್ಲೀಪರ್‌ಗೆ ಸಾಮಾನ್ಯ ದಿನಗಳಲ್ಲಿ ₹672 ಟಿಕೆಟ್‌ ದರ ಇದ್ದರೆ, ಬುಧವಾರ ₹885 ಇದೆ. ಪ್ರತಿಬಾರಿ ಹಬ್ಬಗಳು, ವಾರದ ಕೊನೆಯಲ್ಲಿ ನಿರಂತರ ರಜೆಗಳು ಬಂದಾಗ ಕೆಎಸ್‌ಆರ್‌ಟಿಸಿ ಕೂಡ ಟಿಕೆಟ್ ದರ ಹೆಚ್ಚಳ ಮಾಡುತ್ತದೆ’ ಎಂದು ಬೆಂಗಳೂರಿನಲ್ಲಿ ಎಂಜಿನಿಯರ್ ಆಗಿರುವ ರಕ್ಷಿತ್ ರೈ ಬೇಸರ ವ್ಯಕ್ತಪಡಿಸಿದರು.

‘ವಾರದ ಕೊನೆಯಲ್ಲಿ ಖಾಸಗಿ ಬಸ್‌ ದರಗಳಲ್ಲಿ ಶೇ 10ರಷ್ಟು ಹೆಚ್ಚಳ ಮಾಡಲಾಗುತ್ತದೆ. ವಾರದ ದಿನಗಳಲ್ಲಿ ಸೋಮವಾರದಿಂದ ಗುರುವಾರದ ತನಕ ಬೆಂಗಳೂರಿನಿಂದ ಬಸ್‌ಗಳು ಖಾಲಿ ಬರುತ್ತವೆ. ಈ ಅವಧಿಯಲ್ಲಿ ಆಗುವ ನಷ್ಟವನ್ನು ಸರಿದೂಗಿಸಿಕೊಳ್ಳಲು ವಾರದ ಕೊನೆಯಲ್ಲಿ ದರ ಹೆಚ್ಚಳ ಅನಿವಾರ್ಯ’ ಎಂದು ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘದ ಉಪಾಧ್ಯಕ್ಷ ಸದಾನಂದ ಛಾತ್ರ ಪ್ರತಿಕ್ರಿಯಿಸಿದರು. ಖಾಸಗಿ ಬಸ್‌ಗಳ ಟಿಕೆಟ್ ದರ ವಿಪರೀತ ಹೆಚ್ಚಳ ಆಗಿಲ್ಲ. ಕೆಲವು ಬಸ್‌ಗಳು ಹೆಚ್ಚಳ ಮಾಡಿರಬಹುದು, ಸಾಮೂಹಿಕವಾಗಿ ಹೆಚ್ಚಳ ಆಗಿಲ್ಲ ಎಂದರು. 

ವಿನಾಯಿತಿ ನೀಡಲಿ: ಮತದಾನ ಪ್ರೋತ್ಸಾಹಿಸುವ ಉದ್ದೇಶದಿಂದ ಮತ ಹಾಕಿ ಬಂದವರಿಗೆ ಹಲವಾರು ಹೋಟೆಲ್, ಅಂಗಡಿಯವರು ದರದಲ್ಲಿ ವಿನಾಯಿತಿ ನೀಡುತ್ತವೆ. ಅದೇ ರೀತಿ, ಮತ ಹಾಕಲು ಬರುವವರಿಗೆ ಟಿಕೆಟ್ ದರದಲ್ಲಿ ವಿನಾಯಿತಿ ನೀಡಬೇಕು. ಇದರ ಬದಲಾಗಿ ಖಾಸಗಿ ಬಸ್‌ಗಳು ಬೇಕಾಬಿಟ್ಟಿ ದರ ಏರಿಕೆ ಮಾಡಿವೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.