ADVERTISEMENT

ಸುದೀರ್ಘ ಚುನಾವಣೆ ಪ್ರಕ್ರಿಯೆಯಲ್ಲಿ ಕುತಂತ್ರ: ವೀರಪ್ಪ ಮೊಯಿಲಿ

ಒಂದು ದೇಶ, ಒಂದು ಚುನಾವಣೆಗೆ ಎಂಬ ಬಿಜೆಪಿ ಅಜೆಂಡಾ ಜಾರಿಗೆ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2024, 23:32 IST
Last Updated 21 ಏಪ್ರಿಲ್ 2024, 23:32 IST
<div class="paragraphs"><p>ವೀರಪ್ಪ ಮೊಯಿಲಿ</p></div>

ವೀರಪ್ಪ ಮೊಯಿಲಿ

   

–ಪ್ರಜಾವಾಣಿ ಚಿತ್ರ

ಮಂಗಳೂರು: ‘ಈ ಬಾರಿ ಲೋಕಸಭಾ ಚುನಾವಣೆಯ ಪ್ರಕ್ರಿಯೆ ಮೂರು ತಿಂಗಳ ಕಾಲ ನಡೆಯುತ್ತಿರುವುದನ್ನು ಗಮನಿಸಿದರೆ, ಅದರ ಹಿಂದೆ ಕೇಂದ್ರ ಸರ್ಕಾರದ ಕುತಂತ್ರ ಅಡಗಿರುವ ಸಂದೇಹ ಕಾಡುತ್ತಿದೆ. ಈ ಕುರಿತು ಪ್ರಧಾನಮಂತ್ರಿ ಮತ್ತು ಚುನಾವಣಾ ಆಯುಕ್ತರು ಸ್ಪಷ್ಟನೆ ನೀಡಬೇಕು’ ಎಂದು ಎಐಸಿಸಿ ಸಿಡಬ್ಲ್ಯುಸಿ ಸದಸ್ಯ ವೀರಪ್ಪ ಮೊಯಿಲಿ ಒತ್ತಾಯಿಸಿದರು.

ADVERTISEMENT

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿಂದೆ ಚುನಾವಣೆ 20 ದಿನಗಳ ಒಳಗೆ ಮುಗಿದದ್ದೂ ಇದೆ. ತಂತ್ರಜ್ಞಾನ ಸಾಕಷ್ಟು ಬೆಳೆದಿರುವ ಈ ಕಾಲದಲ್ಲಿ ವಾಸ್ತವವಾಗಿ ಚುನಾವಣೆ ಬೇಗ ಮುಗಿಯಬೇಕಾಗಿತ್ತು. ಅನಗತ್ಯ ವಿಳಂಬ ಮಾಡಿರುವುದನ್ನು ಗಮನಿಸಿದರೆ ‘ಒಂದು ದೇಶ, ಒಂದು ಚುನಾವಣೆ’ ಎಂಬ ಬಿಜೆಪಿ ಅಜೆಂಡಾಗೆ ಮುಂದಿನ ಚುನಾವಣೆಯಲ್ಲಿ ನಾಂದಿ ಹಾಡುತ್ತಾರೆ ಎಂಬ ಗುಮಾನಿ ಕಾಡುತ್ತಿದೆ’ ಎಂದರು. 

‘ತಡ ಆದಷ್ಟು ಚುನಾವಣೆಯಲ್ಲಿ ಹಸ್ತಕ್ಷೇಪಕ್ಕೆ ಅವಕಾಶ ಹೆಚ್ಚುತ್ತದೆ. ಒಂದು ದೇಶ, ಒಂದು ಚುನಾವಣೆ ಎಂಬುದರ ಹಿಂದೆ ಎಲ್ಲ ಹಂತದಲ್ಲೂ ತಮ್ಮ ಪಕ್ಷಕ್ಕೇ ಮತ ಎಂಬ ಆಶಯವನ್ನು ಈಡೇರಿಸುವುದು ಮೋದಿ ಅವರ ಬಯಕೆ. ಹೀಗೆ ಆದರೆ ಸಂವಿಧಾನದ ಆಶಯಗಳಿಗೆ ಧಕ್ಕೆ ಆಗಬಹುದು’ ಎಂದು ಅವರು ಹೇಳಿದರು.

‘ವಿದೇಶಿ ಶಕ್ತಿಗಳು ತಮ್ಮನ್ನು ಪ್ರಧಾನಿ ಪಟ್ಟದಿಂದ ಕೆಳಗಿಳಿಸಲು ಪ್ರಯತ್ನಿಸುತ್ತಿವೆ ಎಂದು ಪ್ರಧಾನಿ ಹೇಳಿದ್ದಾರೆ. ಅವರನ್ನು ಅಭದ್ರತೆ ಕಾಡುತ್ತಿದೆ ಎಂಬುದಕ್ಕೆ ಸ್ಪಷ್ಟ ಸಾಕ್ಷಿ ಇದು. ಕರ್ನಾಟಕದಲ್ಲಿ ದೇವೇಗೌಡರು ಬಿಜೆಪಿಯವರ ಜೊತೆ ಸೇರಿ ಸುಳ್ಳು ಹೇಳುತ್ತಿದ್ದಾರೆ. ಇದು ಅವರ ವ್ಯಕ್ತಿತ್ವದ ಸಮಸ್ಯೆಯಲ್ಲ, ವಯಸ್ಸಿನ ಸಮಸ್ಯೆ’ ಎಂದು ಮೊಯಿಲಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.