ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಘೋಷಣೆಯಾದ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಜಾತಿ ಲೆಕ್ಕಾಚಾರ ಶುರುವಾಗಿದೆ.
ಹಾಲಿ ಸಂಸದ ನಳಿನ್‌ಕುಮಾರ್ ಕಟೀಲ್ ಅವರನ್ನು ಬಿಟ್ಟು ನಿವೃತ್ತ ಸೇನಾಧಿಕಾರಿ ಬೃಜೇಶ್ ಚೌಟ ಅವರಿಗೆ ಬಿಜೆಪಿ ಟಿಕೆಟ್ ಘೋಷಿಸಿದೆ. ಈ ಬಾರಿಯೂ ಬಿಜೆಪಿ ಜಿಲ್ಲೆಯ ಪ್ರಬಲ ಬಂಟ
ಸಮುದಾಯಕ್ಕೆ ಮಣೆ ಹಾಕಿದೆ. ನಳಿನ್ ಮತ್ತು ಬೃಜೇಶ್ ಚೌಟ ಇಬ್ಬರೂ ಬಂಟ ಸಮುದಾಯಕ್ಕೆ ಸೇರಿದವರು.
2019ರ ಚುನಾವಣೆಯಲ್ಲಿ ನಳಿನ್ ವಿರುದ್ಧ ಬಂಟ ಸಮುದಾಯದ ಮಿಥುನ್ ರೈ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿತ್ತು. ಈ ಬಾರಿ ತಂತ್ರ ಬದಲಿಸಿರುವ ಕಾಂಗ್ರೆಸ್, ಜಿಲ್ಲೆಯ ಇನ್ನೊಂದು ಪ್ರಬಲ ಸಮುದಾಯವಾದ ಬಿಲ್ಲವರಿಗೆ ಟಿಕೆಟ್ ನೀಡುವ ಬಗ್ಗೆ ಯೋಚಿಸುತ್ತಿದೆ.
ಸಂಸದರಾಗಿ, ಸಚಿವರಾಗಿ ಅನುಭವ ಇರುವ ವಿನಯ್‌ಕುಮಾರ್ ಸೊರಕೆ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್. ಪದ್ಮರಾಜ್ ಇವರಿಬ್ಬರಲ್ಲಿ ಒಬ್ಬರ ಹೆಸರನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ ಎನ್ನುತ್ತಾರೆ ಕಾಂಗ್ರೆಸ್ ಮೂಲಗಳು.
ಅವರಿಬ್ಬರೂ ಬಿಲ್ಲವ ಸಮುದಾಯಕ್ಕೆ ಸೇರಿದವರು. ಸೊರಕೆ ಅವರು ರಾಜಕಾರಣದಲ್ಲಿ ಅನುಭವಿ ಮತ್ತು ಕಾರ್ಯಕರ್ತರೊಡನೆ ನಿಕಟ ಸಂಪರ್ಕ ಇಟ್ಟುಕೊಂಡವರು.
ಕಳೆದ ವಿಧಾನಸಭಾ ಚುನಾವಣೆಯ ವೇಳೆಗೆ ಮಂಗಳೂರು ದಕ್ಷಿಣ ಕ್ಷೇತ್ರಕ್ಕೆ ಆರ್.ಪದ್ಮರಾಜ್ ಅವರ ಹೆಸರು ಕೇಳಿಬಂದಿತ್ತಾದರೂ, ಕೊನೆಯಲ್ಲಿ ಜಾತಿ ಸಮೀಕರಣದಲ್ಲಿ ಮಾಜಿ ಶಾಸಕ ಜೆ.ಆರ್. ಲೋಬೊ ಅವರಿಗೆ ಟಿಕೆಟ್ ದೊರೆತಿತ್ತು. ಈಗ ಲೋಕಸಭೆ ಚುನಾವಣೆ ಎದುರಿನಲ್ಲಿ ಪದ್ಮರಾಜ್ ಹೆಸರು ಮತ್ತೆ
ಚಾಲ್ತಿಯಲ್ಲಿದೆ. ಹೈ ಕಮಾಂಡ್ ಕೂಡ ಅವರ ಬಗ್ಗೆ ಒಲವು ತೋರಿದೆ ಎಂದು ಕಾಂಗ್ರೆಸ್ ಮುಖಂಡ
ರೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.