ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಲಾರಿಯೊಂದು ನೇತ್ರಾವತಿ ನದಿಯ ಸೇತುವೆಯಲ್ಲಿ ಕೆಟ್ಟು ನಿಂತ ಪರಿಣಾಮ ಸೋಮವಾರ ಸಂಜೆ ಆರು ವಾಹನಗಳು ಒಂದೊಕ್ಕೊಂದು ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದೆ.
ಸಂಜೆ ಸುರಿದ ಧಾರಾಕಾರ ಮಳೆಯಿಂದ ಹೆದ್ದಾರಿ ಸರಿಯಾಗಿ ಗೋಚರಿಸುತ್ತಿರಲಿಲ್ಲ. ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ಸಾಗುತ್ತಿದ್ದವು. ಈ ವೇಳೆ ಮಂಗಳೂರಿನಿಂದ ತೊಕ್ಕೊಟ್ಟು ಕಡೆಗೆ ಸಂಚರಿಸುತ್ತಿದ್ದ ಲಾರಿಯೊಂದು ಸೇತುವೆ ಮಧ್ಯಭಾಗದಲ್ಲಿ ಹೆದ್ದಾರಿಯಲ್ಲಿ ಕೆಟ್ಟು ನಿಂತಿತ್ತು. ಅದಕ್ಕೆ ಆಲ್ಟೊ ಕಾರು, ಲಾರಿ, ರಿಟ್ಝ್ ಕಾರು, ಕಾಂಟೆಸ್ಸಾ ಕಾರು, ಪಿಕಪ್ ವಾಹನ ಹಾಗೂ ಕೊನೆಯದಾಗಿ ಕುಂಪಲ ಕಡೆಗೆ ತೆರಳುವ ಖಾಸಗಿ ಬಸ್ ಢಿಕ್ಕಿ ಹೊಡೆದಿದೆ. ಒಟ್ಟು ಆರು ವಾಹನಗಳು ಜಖಂಗೊಂಡಿವೆ.
‘ಘಟನೆಯಲ್ಲಿ ಕೆಲವರಿಗೆ ಸ್ವಲ್ಪಗಾಯಗಳಾಗಿವೆ. ಸರಣಿ ಅಪಘಾತದಿಂದಾಗಿ ಹೆದ್ದಾರಿಯಲ್ಲಿ 2 ಗಂಟೆ ಕಾಲ ವಾಹನ ಸಂಚಾರ ದಟ್ಟಣೆ ಉಂಟಾಯಿತು. ಮಂಗಳೂರು ದಕ್ಷಿಣ ಸಂಚಾರ ಠಾಣೆಯ ಪೊಲೀಸರು ವಾಹನ ಸಂಚಾರ ಸುಸ್ಥಿತಿಗೆ ತರಲು ಹರಸಾಹಸ ಪಟ್ಟರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.