ADVERTISEMENT

ಕೇರಳಕ್ಕೆ ಎಂ–ಸ್ಯಾಂಡ್‌ ಪೂರೈಕೆ: ಸಚಿವ ಖಾದರ್‌

ಮುಲಾರಪಟ್ಣ ಹೊಸ ಸೇತುವೆಗೆ ₹50 ಕೋಟಿ ಮಂಜೂರು

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2018, 13:23 IST
Last Updated 27 ಸೆಪ್ಟೆಂಬರ್ 2018, 13:23 IST
ಸಚಿವ ಯು.ಟಿ. ಖಾದರ್‌
ಸಚಿವ ಯು.ಟಿ. ಖಾದರ್‌   

ಮಂಗಳೂರು: ಕೇರಳಕ್ಕೆ ಅಕ್ರಮ ಮರಳು ಸಾಗಣೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಂ–ಸ್ಯಾಂಡ್ ಅನ್ನು ಕೇರಳಕ್ಕೆ ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ತಿಳಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಆಮದು ಮಾಡಿಕೊಳ್ಳಲಾದ ಎಂ–ಸ್ಯಾಂಡ್‌ ಕಾರವಾರ ಮತ್ತು ನವ ಮಂಗಳೂರು ಬಂದರಿನಲ್ಲಿದೆ. ಅದನ್ನು ಕೇರಳಕ್ಕೆ ಪೂರೈಕೆ ಮಾಡಲಾಗುವುದು. ಸ್ಥಳೀಯ ಜನರಿಗೆ ನದಿ ಪಾತ್ರದ ಮರಳು ಸುಲಭವಾಗಿ ಲಭ್ಯವಾಗಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ ಎಂದರು.

ಕೇರಳಕ್ಕೆ ವ್ಯಾಪಕವಾಗಿ ಮರಳು ಸಾಗಣೆ ಮಾಡುತ್ತಿರುವುದರಿಂದ ಸ್ಥಳೀಯ ಜನರು ಮರಳಿಗಾಗಿ ತೊಂದರೆ ಅನುಭವಿಸುವಂತಾಗಿದೆ. ದುಬಾರಿ ಬೆಲೆ ತೆತ್ತು ಮರಳು ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ನಿವಾರಿಸಲು ಕೇರಳದ ಕಟ್ಟಡ ಕಾಮಗಾರಿಗಳಿಗೆ ಎಂ–ಸ್ಯಾಂಡ್‌ ಅನ್ನು ಪೂರೈಸಲಾಗುವುದು. ಇದರಿಂದ ನದಿ ಪಾತ್ರದ ಮರಳಿಗೆ ಬೇಡಿಕೆ ತಗ್ಗಲಿದೆ ಎಂದ ಅವರು, ಅಗತ್ಯ ಬಿದ್ದಲ್ಲಿ ಎಂ–ಸ್ಯಾಂಡ್‌ ಅನ್ನು ರೈಲಿನ ಮೂಲಕ ಕೇರಳಕ್ಕೆ ಕಳುಹಿಸಲಾಗುವುದು. ಅಲ್ಲಿನ ಜನರೂ ಬಂದರಿಗೆ ಬಂದು, ಮರಳನ್ನು ಪಡೆಯಬಹುದು ಎಂದು ವಿವರಿಸಿದರು.

ADVERTISEMENT

ಸಿಆರ್‌ಜೆಡ್‌ ಪ್ರದೇಶದಲ್ಲಿ ಮರಳು ಗಣಿಗಾರಿಕೆಗೆ ಇರುವ ನಿಯಮಾವಳಿಗಳ ಪರಿಷ್ಕರಣೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾರ್ಯಪ್ರವೃತ್ತವಾಗಿದೆ. ಈ ಕುರಿತು ವರದಿ ನೀಡುವಂತೆ ಸುರತ್ಕಲ್‌ ಎನ್‌ಐಟಿಕೆಗೆ ಕೇಳಿಕೊಳ್ಳಲಾಗಿದೆ. ಅಕ್ಟೋಬರ್‌ 15ರೊಳಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಿಆರ್‌ಜೆಡ್‌ ಪ್ರದೇಶದಲ್ಲಿ ಮರಳು ಗಣಿಗಾರಿಕೆಗೆ ಇರುವ ನಿಯಮಾವಳಿಗಳನ್ನು ಸಡಿಲಿಸುವುದರಿಂದ ಸಾಂಪ್ರದಾಯಿಕ ಮರಳುಗಾರರಿಗೆ ಅನುಕೂಲ ಆಗಲಿದೆ. ನಿಯಮಾವಳಿ ಸಡಿಲಿಸುವ ಕುರಿತಾದ ಪ್ರಸ್ತಾವನೆ ರಾಜ್ಯ ಸಚಿವ ಸಂಪುಟದ ಮುಂದಿದೆ ಎಂದರು.

ಮುಲಾರಪಟ್ಣದಲ್ಲಿ ಹೊಸ ಸೇತುವೆ: ಮಳೆಯಿಂದಾಗಿ ಕುಸಿದಿರುವ ಮುಲಾರಪಟ್ಣದ ಸೇತುವೆಯ ದುರಸ್ತಿ ಬದಲು, ಹೊಸ ಸೇತುವೆ ನಿರ್ಮಾಣ ಮಾಡಲಾಗುವುದು. ಇದಕ್ಕಾಗಿ ಸರ್ಕಾರ ₹50 ಕೋಟಿ ಅನುದಾನ ಮಂಜೂರು ಮಾಡಿದೆ ಎಂದು ತಿಳಿಸಿದರು.

ಗುರುಪುರ ಹೊಸ ಸೇತುವೆಗೆ ₹35 ಕೋಟಿ ಅನುದಾನ ಮಂಜೂರಾಗಿದ್ದು, ಅಲ್ಲಿಯೂ ಹೊಸ ಸೇತುವೆ ನಿರ್ಮಾಣ ಆಗಲಿದೆ. ಅಲ್ಲಿಯವರೆಗೆ ಹಳೆಯ ಸೇತುವೆಯ ಮೇಲೆ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂದು ಹೇಳಿದರು.

ಭೂ ಪರಿವರ್ತನೆಗೆ ಸಂಬಂಧಿಸಿದಂತೆ ಇರುವ ತೊಡಕುಗಳ ಕುರಿತು ಪ್ರತಿಕ್ರಿಯಿಸಿದ ಸಚಿವ ಖಾದರ್‌, ಭೂ ಪರಿವರ್ತನೆಗೆ ಕಂದಾಯ ಇಲಾಖೆಯಿಂದ ಯಾವುದೇ ತೊಂದರೆ ಇಲ್ಲ. ಆದರೆ, ಆರ್‌ಟಿಸಿಯಲ್ಲಿ ತಪ್ಪು ಮಾಹಿತಿ ಇರುವುದರಿಂದ ತೊಂದರೆ ಆಗುತ್ತಿದೆ. ಇದನ್ನು ನಿವಾರಿಸುವ ಉದ್ದೇಶದಿಂದ ಕಂದಾಯ ಅದಾಲತ್ ನಡೆಸಲಾಗುತ್ತಿದ್ದು, ತಹಶೀಲ್ದಾರ ನೇತೃತ್ವದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ರಚಿಸಲಾಗಿದೆ ಎಂದು ತಿಳಿಸಿದರು.

ಕುಡಿಯುವ ನೀರಿಗಾಗಿ ₹198 ಕೋಟಿಯನ್ನು ಕರ್ನಾಟಕ ನೀರು ಸರಬರಾಜು ಮಂಡಳಿಗೆ ಬಿಡುಗಡೆ ಮಾಡಲು ಮುಖ್ಯಮಂತ್ರಿ ಕುಮಾರಸ್ವಾಮಿ ಒಪ್ಪಿಗೆ ನೀಡಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.