ಉಜಿರೆ (ದಕ್ಷಿಣ ಕನ್ನಡ): ಫಲ್ಗುಣಿ ನದಿಯ ತಟದಲ್ಲಿರುವ ವೇಣೂರು ಪ್ರಾಕೃತಿಕವಾಗಿಯೂ ಕಣ್ಮನ ಸೆಳೆಯುವ ತಾಣ. ಇದು ಜೈನರ ಪ್ರಮುಖ ತೀರ್ಥಕ್ಷೇತ್ರವೂ ಆಗಿದ್ದು, ಇಲ್ಲಿನ ಭಗವಾನ್ ಬಾಹುಬಲಿ ಮೂರ್ತಿಗೆ ಫೆ.22ರಿಂದ ನಡೆಯಲಿರುವ ಮಹಾ ಮಸ್ತಕಾಭಿಷೇಕಕ್ಕೆ ಭರದ ಸಿದ್ಧತೆ ನಡೆಯುತ್ತಿವೆ.
ಮಸ್ತಕಾಭಿಷೇಕ ನೆರವೇರಿಸಲು ಅಟ್ಟಳಿಗೆ ನಿರ್ಮಾಣ ಕಾರ್ಯ ಮುಕ್ತಾಯದ ಹಂತದಲ್ಲಿದ್ದು, ಅಲ್ಪಸಂಖ್ಯಾತರ ಇಲಾಖೆಯಿಂದ ಲಭಿಸಿದ ₹ 1ಕೋಟಿ ಅನುದಾನದಲ್ಲಿ ಬಾಹುಬಲಿ ಬೆಟ್ಟದ ಸುತ್ತ ಗ್ರಾನೈಟ್ ಹಾಕಲಾಗುತ್ತಿದೆ. ಸಿಮೆಂಟ್ ಪ್ಲಾಸ್ಟರಿಂಗ್, ಬೆಟ್ಟದ ಬದಿಯ ಎರಡು ಬಸದಿಗಳ ಜೀರ್ಣೋದ್ಧಾರ ಪೂರ್ಣಗೊಂಡಿದೆ ಎಂದು ಮಸ್ತಕಾಭಿಷೇಕ ಸಮಿತಿ ಕಾರ್ಯಾಧ್ಯಕ್ಷ ಅಳದಂಗಡಿ ಅರಮನೆಯ ಪದ್ಮಪ್ರಸಾದ ಅಜಿಲ ತಿಳಿಸಿದ್ದಾರೆ.
ಬಾಹುಬಲಿ ಮೂರ್ತಿಯ ಎಡ ಮತ್ತು ಬಲಭಾಗದಲ್ಲಿರುವ ಅಕ್ಕಂಗಳ ಬಸದಿ ಮತ್ತು ಬಿನ್ನಾಣಿ ಬಸದಿ, ಕಲ್ಲುಬಸದಿಯ ಜೀರ್ಣೋದ್ಧಾರ ಕಾರ್ಯವೂ ನಡೆಯುತ್ತಿದೆ. ಕ್ರಿ.ಶ.1604ರಲ್ಲಿ ವೇಣೂರಿನಲ್ಲಿ ಅಂದಿನ ಅಜಿಲ ವಂಶದ ನಾಲ್ಕನೇ ವೀರ ತಿಮ್ಮಣ್ಣಾಜಿಲ ಅವರು 35 ಅಡಿ ಎತ್ತರದ ಬಾಹುಬಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದರು. ಜೈನರ ಸಂಪ್ರದಾಯದಂತೆ ಪ್ರತಿ 12ವರ್ಷಗಳಿಗೊಮ್ಮೆ ಮಹಾ ಮಸ್ತಕಾಭಿಷೇಕ ನಡೆಸಲಾಗುತ್ತದೆ. 2012ರಲ್ಲಿ ವೇಣೂರಿನಲ್ಲಿ ಮಹಾಮಸ್ತಕಾಭಿಷೇಕ ನಡೆದಿದ್ದು, ಈ ಬಾರಿ ಫೆ.22ರಿಂದ ಮಾರ್ಚ್ 1ರವರೆಗೆ ಮಹಾ ಪರ್ವ ನಡೆಯಲಿದೆ.
ಯುಗಳಮುನಿಗಳಾದ ಅಮೋಘಕೀರ್ತಿ ಮುನಿಮಹಾಜರು ಮತ್ತು ಅಮರಕೀರ್ತಿ ಮುನಿ ಮಹಾರಾಜರ ಉಪಸ್ಥಿತಿಯಲ್ಲಿ ಮಸ್ತಕಾಭಿಷೇಕ ನಡೆಯಲಿದೆ. ಮೂಡುಬಿದಿರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾರ್ಗದರ್ಶನದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, ಅಳದಂಗಡಿಯ ಪದ್ಮಪ್ರಸಾದ ಅಜಿಲ ಅವರ ನೇತೃತ್ವದಲ್ಲಿ ವಿವಿಧ ಸಮಿತಿ ರಚಿಸಲಾಗಿದೆ. ಹೊಂಬುಜ, ಕಾರ್ಕಳ, ಶ್ರವಣಬೆಳಗೊಳ, ನರಸಿಂಹರಾಜಪುರ, ಜೈನಮಠದ ಭಟ್ಟಾರಕರು ಮಸ್ತಕಾಭಿಷೇಕದ ಸಂದರ್ಭ ಪ್ರವಚನ ನೀಡಲಿದ್ದಾರೆ.
ಧಾರ್ಮಿಕಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ವಸ್ತುಪ್ರದರ್ಶನ, ಪುಸ್ತಕಗಳ ಮಳಿಗೆ, ಯಕ್ಷಗಾನ ಕಾರ್ಯಕ್ರಮಗಳ ಮೂಲಕ ಜ್ಞಾನದಾಸೋಹದೊಂದಿಗೆ ಧರ್ಮಪ್ರಭಾವನಾ ಕಾರ್ಯವೂ ನಡೆಯಲಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಮಸ್ತಕಾಭಿಷೇಕ ಸಮಿತಿ ಕಾರ್ಯಾಲಯವನ್ನು ತೆರೆಯಲಾಗಿದೆ. ವಿಳಾಸ: ಮಸ್ತಕಾಭಿಷೇಕ ಸಮಿತಿ, ಬಾಹುಬಲಿ ಬೆಟ್ಟದ ಬಳಿ, ವೇಣೂರು-574242. ಮೊ: 9606356288.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.