ಮಂಗಳೂರು: ಮೂವರು ಸಾಮಾಜಿಕ ಹೋರಾಟಗಾರ್ತಿಯರು ಪೋಸ್ಟ್ ಕಾರ್ಡ್ ನ್ಯೂಸ್ ವೆಬ್‌ಸೈಟ್‌ನ ಸಂಪಾದಕ ಮಹೇಶ್ ವಿಕ್ರಂ ಹೆಗ್ಡೆ ಅವರಿಗೆ ವಂದೇ ಮಾತರಂ ಗೀತೆಯ ಎರಡು ಸಾಲುಗಳನ್ನು ಹಾಡುವಂತೆ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸವಾಲು ಹಾಕಿರುವ ವಿಡಿಯೊ ತುಣುಕು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಷಣ ಮಾಡಲು ಹೋರಾಟಗಾರ್ತಿಯರಾದ ನಜ್ಮಾ ನಝೀರ್ ಚಿಕ್ಕನೇರಳೆ, ಕವಿತಾ ರೆಡ್ಡಿ ಮತ್ತು ಅಮೂಲ್ಯ ಲಿಯೋನ ಗುರುವಾರ ನಗರಕ್ಕೆ ಬಂದಿದ್ದರು. ರಾತ್ರಿ ವಿಮಾನ ವಿಳಂಬವಾದ ಕಾರಣ ಉಳಿದುಕೊಂಡಿದ್ದರು. ಶುಕ್ರವಾರ ಬೆಳಿಗ್ಗೆ ಬೆಂಗಳೂರಿನತ್ತ ತೆರಳುವಾಗ ವಿಮಾನ ನಿಲ್ದಾಣದ ಪ್ರಯಾಣಿಕರ ಲಾಂಜ್‌ನಲ್ಲಿದ್ದ ಮಹೇಶ್ ವಿಕ್ರಂ ಹೆಗ್ಡೆ ಬಳಿ ಹೋಗಿ ವಂದೇ ಮಾತರಂ ಗೀತೆ ಹಾಡುವಂತೆ ಸವಾಲು ಹಾಕಿದ್ದಾರೆ.
‘ನಿಮ್ಮ ದೇಶ ಪ್ರೇಮವನ್ನು ಸಾಬೀತುಪಡಿಸಲು ನಿಮಗೆ ಇದೊಂದು ಒಳ್ಳೆಯ ಅವಕಾಶ. ಸಮಯ ಸಿಕ್ಕಾಗಲೆಲ್ಲ ಬೇರೆಯವರ ಬಗ್ಗೆ ಏನೇನೋ ಸುಳ್ಳು ಸುದ್ದಿ ಹರಿಡಿಸುತ್ತೀರಲ್ಲಾ ಈಗ ವಂದೇ ಮಾತರಂ ಗೀತೆಯ ಎರಡೇ ಸಾಲು ಹೇಳಿ ನೋಡೋಣ...’ ಎಂದು ಮೂವರೂ ಮಹೇಶ್ ಬಳಿ ಸವಾಲು ಹಾಕುತ್ತಾರೆ. ಆದರೆ, ಮಹೇಶ್ ಗೀತೆಯನ್ನು ಹಾಡದೇ ನಗುತ್ತಾ ಕುಳಿತಿರುವುದು 1 ನಿಮಿಷ 29 ಸೆಕೆಂಡ್ ಅವಧಿಯ ವಿಡಿಯೊ ತುಣುಕಿನಲ್ಲಿದೆ.
ಫೇಸ್ ಬುಕ್, ವಾಟ್ಸ್ ಆ್ಯಪ್, ಟೆಲಿಗ್ರಾಂ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಪ್ರಮಾಣದಲ್ಲಿ ಈ ವಿಡಿಯೊ ತುಣುಕು ಹರಿದಾಡುತ್ತಿದೆ. ಸವಾಲು ಹಾಕಿರುವ ಮೂವರೂ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ವಿಡಿಯೊ ಪೋಸ್ಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.