ಮಂಗಳೂರು(ದಕ್ಷಿಣ ಕನ್ನಡ): ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಹಾಡುಗಳ ರಸದೌತಣ ಉಣಬಡಿಸುವ ಮೂಲಕ ಸೋಮವಾರ ಆಚರಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ವಯಸ್ಕರ ಶಿಕ್ಷಣ ಸಮಿತಿ, ಭಾರತ ಜ್ಞಾನ ವಿಜ್ಞಾನ ಸಮಿತಿ ಮತ್ತು ಚಿಂತನ ಸಾಂಸ್ಕೃತಿಕ ಬಳಗದ ವತಿಯಿಂದ ಏರ್ಪಡಿಸಿದ್ದ ಈ ಕಾರ್ಯಕ್ರಮದಲ್ಲಿ ಬಂಟ್ವಾಳದ ಮೂಡಂಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಅರವಿಂದ ಕುಡ್ಲ ಮತ್ತು ಬೈಕಂಪಾಡಿ ಸರ್ಕಾರಿ ಪ್ರೌಢ ಶಿಕ್ಷಣ ಶಾಲೆಯ ಶಿಕ್ಷಕ ಪ್ರೇಮನಾಥ ಆಚಾರ್ಯ ನೇತೃತ್ವದಲ್ಲಿ ಯುವ ಕಲಾವಿದರ ತಂಡ ಜಾಗೃತಿ ಗೀತೆಗಳು, ಜಾನಪದ ಗೀತೆ ಮತ್ತು ಲಾವಣಿಗಳನ್ನು ಪ್ರಸ್ತುತಿಪಡಿಸಿತು. ಕೆನರಾ ಪ್ರೌಢಶಾಲೆ ಮತ್ತು ಸೇಂಟ್ ಅಲೋಷಿಯಸ್ ಪ್ರೌಢಶಾಲೆಯ ವಿದ್ಯಾರ್ಥಿಗಳೂ ರಂಗ ಗೀತೆಗಳು, ಜಾನಪದ ಗೀತೆಗಳನ್ನು ಹಾಡುವ ಮೂಲಕ ವಿಚಾರಣಾಧೀನ ಕೈದಿಗಳನ್ನು ರಂಜಿಸಿದರು. ಕೈದಿಗಳೂ ಚಪ್ಪಾಳೆ ತಟ್ಟುತ್ತಾ ಹಾಡುಗಳಿಗೆ ದನಿಗೂಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾರಾಗೃಹದ ಅಧೀಕ್ಷಕ ಓಬಳೇಶಪ್ಪ, ವಿಚಾರಣಾಧೀನ ಖೈದಿಗಳ ಮನದಲ್ಲಿ ಪರಿವರ್ತನೆ ತಂದು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ದಿಸೆಯಲ್ಲಿ ಇದೊಂದು ಉತ್ತಮ ಪ್ರಯತ್ನ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ಯಾನೆಲ್ ವಕೀಲ ಸುಕೇಶ್ ಕುಮಾರ್ ಶೆಟ್ಟಿ ಪ್ರಾಧಿಕಾರದಿಂದ ದೊರೆಯುವ ಕಾನೂನು ನೆರವಿನ ಬಗ್ಗೆ ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.