ಮಂಗಳೂರು: ಮಕರ ಸಂಕ್ರಾಂತಿ ಅಂಗವಾಗಿ ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ಸೋಮವಾರ ವೈವಿಧ್ಯಮಯ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕೆಲವು ದೇವಾಲಯಗಳಲ್ಲಿ ಭಾನುವಾರ ಜಾತ್ರೆ ಆರಂಭಗೊಂಡಿತ್ತು. ಸೋಮವಾರವೂ ಅಲ್ಲಿ ಭಕ್ತಿ–ಭಾವದ ಸಂಭ್ರಮ ಮನೆಮಾಡಿತ್ತು.
ಕದ್ರಿಯ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಜಾತ್ರೆಯ ಅಂಗವಾಗಿ ಮಲ್ಲಿಕಾ ಕಲಾವೃಂದ ಆಯೋಜಿಸಿರುವ ಧಾರ್ಮಿಕ–ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಬೆಳಿಗ್ಗೆಯಿಂದಲೇ ಗಾಯನ–ನೃತ್ಯ–ನಾಟಕ ಮತ್ತು ಯಕ್ಷಗಾನ ರಂಗೇರಿತು. ದೇವಸ್ಥಾನದ ಪರಿಸರದ ಮಹಿಳೆಯರು ಸಂಜೆ ನಡೆಸಿಕೊಟ್ಟ ಭಜನಾ ಕಾರ್ಯಕ್ರಮಕ್ಕೆ ನೂರಾರು ಭಕ್ತರು ಸಾಕ್ಷಿಯಾದರು.
ಸಂಜೆ ಕತ್ತಲು ಆವರಿಸುತ್ತಿದ್ದಂತೆ ಕೊಡಿಮರವನ್ನು ಏರಿಸುವ ಕಾರ್ಯ ನಡೆಯಿತು. ದೇವಾಲಯದ ಮುಂಭಾಗದಲ್ಲಿ ಮೆಟ್ಟಿಲುಗಳಲ್ಲಿ, ಗುಡ್ಡದ ಮೇಲೆ ಮತ್ತು ರಾಜಾಂಗಣದಲ್ಲಿ ಸೇರಿದ್ದ ನೂರಾರು ಮಂದಿ ಈ ಕಾರ್ಯವನ್ನು ಭಕ್ತಿಭಾವದಿಂದ ಕಣ್ತುಂಬಿಕೊಂಡರು. ಬಂಟ್ವಾಳ ತಾಲ್ಲೂಕಿನ ದೇವಂದಬೆಟ್ಟು ಗ್ರಾಮದ ಪ್ರಸಿದ್ಧ ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನದಲ್ಲೂ ಭಾನುವಾರ ಜಾತ್ರೆ ಆರಂಭಗೊಂಡಿದ್ದು ಸೋಮವಾರ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆದವು.
ಬಂದೀಖಾನೆಯಲ್ಲಿ ಕಾರ್ಯಕ್ರಮ ವೈವಿಧ್ಯ
ದಕ್ಷಿಣ ಕನ್ನಡ ಜಿಲ್ಲಾ ವಯಸ್ಕರ ಶಿಕ್ಷಣ ಸಮಿತಿ, ಭಾರತ ಜ್ಞಾನವಿಜ್ಞಾನ ಸಮಿತಿ ಮತ್ತು ಚಿಂತನ ಸಾಂಸ್ಕೃತಿಕ ಬಳಗದ ವತಿಯಿಂದ ಜಿಲ್ಲಾ ಕಾರಾಗೃಹದಲ್ಲಿ ಮಕರ ಸಂಕ್ರಾಂತಿ ಆಚರಿಸಲಾಯಿತು.
ಬಂಟ್ವಾಳದ ಮೂಡಂಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಅರವಿಂದ ಕುಡ್ಲ ಮತ್ತು ಬೈಕಂಪಾಡಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಪ್ರೇಮನಾಥ್ ಆಚಾರ್ಯ ಅವರ ನೇತೃತ್ವದಲ್ಲಿ ಯುವ ಕಲಾವಿದರ ತಂಡದವರು ಜಾಗೃತಿ ಗೀತೆ, ಜಾನಪದ ಗೀತೆ ಮತ್ತು ಲಾವಣಿಗಳ ಮೂಲಕ ಮನ ತಣಿಸಿದರು.
ಕಾರಾಗೃಹದ ಅಧೀಕ್ಷಕ ಓಬಳೇಶಪ್ಪ ಅಧ್ಯಕ್ಷತೆ ವಹಿಸಿದ್ದರು. ವಿಚಾರಣಾಧೀನ ಖೈದಿಗಳ ಮನದಲ್ಲಿ ಪರಿವರ್ತನೆ ತಂದು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಇಂಥ ಕಾರ್ಯಕ್ರಮಗಳು ನೆರವಾಗಲಿವೆ ಎಂದು ಅವರು ಅಭಿಪ್ರಾಯಪಟ್ಟರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ಯಾನೆಲ್ ವಕೀಲ ಸುಕೇಶ್ ಕುಮಾರ್ ಶೆಟ್ಟಿ ಮಾತನಾಡಿದರು. ಕೆನರಾ ಹೈಸ್ಕೂಲ್ ಮತ್ತು ಸೇಂಟ್ ಅಲೋಶಿಯಸ್ ಹೈಸ್ಕೂಲ್ ವಿದ್ಯಾರ್ಥಿಗಳು ರಂಗಗೀತೆಗಳನ್ನು ಹಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.