ಮಂಗಳೂರು: ಗಂಜಿಮಠ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಳಲಿ ಮಸೀದಿಗೆ ಸಂಬಂಧಿಸಿದಂತೆ ಗೊಂದಲ ಮೂಡಿರುವುದರಿಂದ ಯಥಾಸ್ಥಿತಿ ಕಾಪಾಡಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದು, ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್, ‘ಮಳಲಿ ಮಸೀದಿಯ ನವೀಕರಣದ ವೇಳೆ ಉಂಟಾಗಿರುವ ಗೊಂದಲ ಪರಿಹಾರ ಆಗುವವರೆಗೆ ಮುಂಜಾಗ್ರತೆಯಾಗಿ ಬಂದೋಬಸ್ತ್ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.
‘ಹಳೆಯ ಕಟ್ಟಡ ಕೆಡವಿದಾಗ ಮರದ ರಚನೆ ಕಂಡುಬಂದಿದೆ. ನೋಡಲು ದೇವಸ್ಥಾನದಂತಿದೆ ಎಂದು ಕೆಲವರು ಮಸೀದಿ ಮುಖ್ಯಸ್ಥರ ಜತೆ ಚರ್ಚಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ್ದ ತಹಶೀಲ್ದಾರ್ ದಾಖಲೆ ಪರಿಶೀಲಿಸಿ ಸೌಹಾರ್ದವಾಗಿ ಪ್ರಕರಣ ಬಗೆಹರಿಸುವುದಾಗಿ ಹೇಳಿದ್ದಾರೆ’ ಎಂದರು.
‘ಈ ಮಸೀದಿಗೆ 900 ವರ್ಷದ ಇತಿಹಾಸವಿದೆ.ನವೀಕರಣಕ್ಕಾಗಿ ಹೊರ
ಗಿನ ಭಾಗವನ್ನು ಕೆಡವಲಾಗಿತ್ತು. ಮಸೀದಿಯ ಒಳಭಾಗದ ಚಿತ್ರವನ್ನು ದೇವಸ್ಥಾನ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹರಡಿರವುದೇ ಗೊಂದಲಕ್ಕೆ ಕಾರಣ. ಅಧಿಕಾರಿಗಳು ದಾಖಲೆಗಳನ್ನು ವಶಕ್ಕೆ ಪಡೆದಿದ್ದು, ವಾರದಲ್ಲಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆ’ ಎಂದು ಮಸೀದಿಯ ಅಧ್ಯಕ್ಷ ಮುಹಮ್ಮದ್ ಮಾಮು ತಿಳಿಸಿದ್ದಾರೆ.
ಸಂಶಯವಿದೆ:‘ಇಲ್ಲಿ ಯಾವುದೋ ಕಾಲದಲ್ಲಿ ದೇವಸ್ಥಾನವನ್ನು ಕೆಡವಿ ಮಸೀದಿ ನಿರ್ಮಿಸಿರಬಹುದು ಎನ್ನುವ ಸಂದೇಹ ನಮಗಿದೆ’ ಎಂದು ವಿಶ್ವ ಹಿಂದೂ ಪರಿಷತ್ ವಿಭಾಗೀಯ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಹೇಳಿದ್ದಾರೆ.
‘ಪುರಾತತ್ವ ಇಲಾಖೆಯ ಮೂಲಕ ಇಲ್ಲಿ ಸ್ಥಳ ಹಾಗೂ ದಾಖಲೆಗಳನ್ನು ಪರಿಶೀಲಿಸಬೇಕು. ಮಸೀದಿ ಇದ್ದದ್ದೇ ನಿಜವಾಗಿದ್ದರೆ, ನವೀಕರಣ ಮಾಡಲು ನಮ್ಮದೇನೂ ಅಭ್ಯಂತರವಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಮಧ್ಯಂತರ ತಡೆಯಾಜ್ಞೆ
ಮಳಲಿ ಮಸೀದಿಯಲ್ಲಿ ನವೀಕರಣ ಕಾಮಗಾರಿಗೆ ಇಲ್ಲಿನ ಮೂರನೇ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಗಂಜಿಮಠ ನಿವಾಸಿ ಧನಂಜಯ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಕೋರ್ಟ್, ಕಾಮಗಾರಿ ನಡೆಸದಂತೆ ಮತ್ತು ದೇವಸ್ಥಾನವನ್ನು ಹೋಲುವ ಕಟ್ಟಡದ ಭಾಗಕ್ಕೆ ಹಾನಿ ಉಂಟುಮಾಡುವುದಕ್ಕೆ ತಡೆಯಾಜ್ಞೆ ನೀಡಿದೆ. ಮುಂದಿನ ವಿಚಾರಣೆಯವರೆಗೆ ಕಟ್ಟಡದ ಒಳಗೆ ಮಸೀದಿ ಕಮಿಟಿಯವರಿಗೆ, ಅನುಯಾಯಿಗಳಿಗೆ ಪ್ರವೇಶ ನಿಷೇಧಿಸಿದೆ.
ಶರಣ್‌ಗೆ ಏನು ಕೆಲಸ?: ಕಾಟಿಪಳ್ಳ
‘ಜಾತ್ರೆ ಸಂದರ್ಭದಲ್ಲಿ ದೇವಸ್ಥಾನದ ಆವರಣಗಳಲ್ಲಿ ಮುಸ್ಲಿಮರು ವ್ಯಾಪಾರ ಮಾಡಬಾರದು ಎಂದು ಗಲಾಟೆ ಎಬ್ಬಿಸುವ ಶರಣ್ ಪಂಪ್‌ವೆಲ್‌ಗೆ ಮಸೀದಿಯ ಒಳಗೆ ಏನು ಕೆಲಸ’ ಎಂದು ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರಶ್ನಿಸಿದ್ದಾರೆ. ‘ಮಸೀದಿಗೆ ಅಕ್ರಮ ಪ್ರವೇಶ ಮಾಡಿ, ಸೌಹಾರ್ದಕ್ಕೆ ಧಕ್ಕೆ ತರುವ ರೀತಿ ವರ್ತಿಸಿದ ಶರಣ್ ಪಂಪ್‌ವೆಲ್ ಮತ್ತು ಅವರ ತಂಡದ ಮೇಲೆ ಪ್ರಕರಣ ದಾಖಲಿಸಿ ಜೈಲಿಗೆ ಹಾಕಬೇಕಿತ್ತು. ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಕಮಿಷನರ್ ಕಾನೂನುಭಂಜಕರ ಮುಂದೆ ತಲೆ ತಗ್ಗಿಸುವುದು, ರಾಜಕೀಯ ಬಲವುಳ್ಳ, ಬಹುಸಂಖ್ಯಾತ ಮತೀಯವಾದದ ಎದುರು ಮೌನಕ್ಕೆ ಶರಣಾಗುವುದು ಖಂಡನೀಯ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.