ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಕನ್ನಡ ಬಲ್ಲ ಅಧ್ಯಾಪಕರ ನೇಮಕಾತಿ ಮಾಡುವ ವಿಚಾರದಲ್ಲಿ ಕನ್ನಡ ಭಾಷಿಕರಿಂದಲೇ ಅನ್ಯಾಯ ಆಗಿರುವ ಬಗ್ಗೆ ಗುಮಾನಿ ದಟ್ಟವಾಗತೊಡಗಿದೆ.
ಕನ್ನಡದ ಗಂಧ ಗಾಳಿಯೇ ಇಲ್ಲದ ಮಲಯಾಳಿ ಶಿಕ್ಷಕರು ಕೇರಳ ಲೋಕಸೇವಾ ಆಯೋಗ ಬಿಡುಗಡೆ ಮಾಡಿರುವ ಹೊಸ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಭಾಷಾ ತಜ್ಞರು ಆಮಿಷಕ್ಕೆ ಬಲಿಯಾಗಿ ಕನ್ನಡವೇ ಗೊತ್ತಿಲ್ಲದ ಕೆಲವರನ್ನು ಆಯ್ಕೆ ಮಾಡುವಲ್ಲಿ ನೆರವಾಗಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ.
ಕನ್ನಡ ಹೈಸ್ಕೂಲ್ ವಿಭಾಗದಲ್ಲಿ ಸಮಾಜ ವಿಜ್ಞಾನ ವಿಷಯದಲ್ಲಿ ಶಿಕ್ಷಕರ ನೇಮಕಾತಿಗಾಗಿ ಕೇರಳ ಲೋಕಸೇವಾ ಆಯೋಗವು
ಒಎಂಆರ್ ಪರೀಕ್ಷೆ ನಡೆಸಿತ್ತು. ಉತ್ತೀರ್ಣರಾದವರ ಕನ್ನಡ ಭಾಷಾ ಜ್ಞಾನವನ್ನು ತಿಳಿಯಲು 2018 ಏಪ್ರಿಲ್ 27ರಂದು
ಸಂದರ್ಶನವನ್ನು ಏರ್ಪಡಿಸಿತ್ತು. ಈ ಸಂದರ್ಶನದಲ್ಲಿ ಕನ್ನಡ ಭಾಷಾ ತಜ್ಞರು ಅಭ್ಯರ್ಥಿಯ ಕನ್ನಡ ಜ್ಞಾನ ಪರೀಕ್ಷೆ ಮಾಡಿ
ಅಂಕ ನೀಡಲು ಕಾಸರಗೋಡಿನ ಕಾಲೇಜೊಂದರ ಕನ್ನಡ ಉಪಾನ್ಯಾಸಕರನ್ನು ನಿಯೋಜಿಸಿತ್ತು. ಸಂದರ್ಶನ ಮುಗಿದು ರ‍್ಯಾಂಕ್ ಪಟ್ಟಿ ಪ್ರಕಟವಾದಾಗ ಕನ್ನಡದ ಅಕ್ಷರವಾಗಲೀ, ಭಾಷೆಯಾಗಲೀ ಕಿಂಚಿತ್ತೂ ತಿಳಿಯದ 7 ಮಂದಿ ಪ್ರಧಾನ ರ‍್ಯಾಂಕ್ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದ್ದರು! ಮೀಸಲಾತಿಯ ಆಧಾರದಲ್ಲಿ ಉದ್ಯೋಗ ಲಭಿಸುವ ಪೂರಕ ಪಟ್ಟಿಯಲ್ಲೂ ಮಲಯಾಳಿ ಶಿಕ್ಷಕ ಅಭ್ಯರ್ಥಿಗಳು ಸೇರಿಕೊಂಡಿದ್ದಾರೆ.
ರೊಚ್ಚಿಗೆದ್ದಿರುವ ಕನ್ನಡ ಭಾಷಿಕರು: ಲೋಕಸೇವಾ ಆಯೋಗವು ಕನ್ನಡ ಶಾಲೆಗಳಲ್ಲಿ ಮಲಯಾಳಿ ಭಾಷೆ ಮಾತ್ರ ಬಲ್ಲ ಉದ್ಯೋಗಾರ್ಥಿಗಳ ಪಟ್ಟಿಯನ್ನು ಪ್ರಕಟಿಸಿರುವುದು ಕಾಸರಗೋಡಿನ ಕನ್ನಡಿಗರನ್ನು ರೊಚ್ಚಿಗೆಬ್ಬಿಸಿದೆ. ಇತ್ತೀಚೆಗಷ್ಟೇ ಮಂಗಲ್ಪಾಡಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕನ್ನಡ ವಿದ್ಯಾರ್ಥಿಗಳಿಗೆ ಗಣಿತ ವಿಷಯ ಕಲಿಸಲು ಮಲಯಾಳಿ ಶಿಕ್ಷಕರನ್ನು ನೇಮಕ ಮಾಡಿದ್ದರು. ಇದರ ವಿರುದ್ಧ ವಿದ್ಯಾರ್ಥಿಗಳು, ಪೋಷಕರು ಒಂದು ತಿಂಗಳ ಕಾಲ ಮುಷ್ಕರ ನಡೆಸಿದ್ದರು. ಕೊನೆಗೂ ಆ ಶಿಕ್ಷಕ ರಜೆಯ ಮೇಲೆ ಹೋಗಬೇಕಾಯಿತು. ಆ ಪಟ್ಟಿಯಲ್ಲಿದ್ದ ಮತ್ತೂ 13 ಗಣಿತ ಶಿಕ್ಷಕರ ನೇಮಕಾತಿಯನ್ನು ತಡೆಹಿಡಿಯಲಾಗಿತ್ತು. ಲೋಕಸೇವಾ ಆಯೋಗದ ವರ್ತನೆ ವಿರುದ್ಧ ಕನ್ನಡಿಗರ ಹೋರಾಟ ಸಮಿತಿ ಈಗಾಗಲೇ ಆಯೋಗಕ್ಕೆ ದೂರು ಸಲ್ಲಿಸಿದೆ.
ಪರೀಕ್ಷೆ ನಡೆಸಿದ್ದಾರೆಯೇ?: ಕನ್ನಡ ವಿಭಾಗದ ಶಿಕ್ಷಕರ ನೇಮಕಾತಿಗಾಗಿ ನಡೆದ ಉದ್ಯೋಗಾರ್ಥಿಗಳ ಭಾಷಾ ಜ್ಞಾನ ಪರೀಕ್ಷೆ ನಡೆಸಿದವರು ಭಾಷಾತಜ್ಞರು ಎಂದು ನಿಯೋಜಿಸಲಾಗಿದ್ದ ಕಾಸರಗೋಡಿನ ನಾಲ್ವರು ಎಂಬುದನ್ನು ಮೂಲಗಳು ದೃಢಪಡಿಸಿವೆ. ಇದರಲ್ಲಿ ಕಾಸರಗೋಡಿನ ಸರ್ಕಾರಿ ಕಾಲೇಜೊಂದರ ಕನ್ನಡ ಉಪನ್ಯಾಸಕರೂ ಸೇರಿದ್ದಾರೆ ಎನ್ನಲಾಗಿದೆ.
ಸಿನಿಮಾದಿಂದ ಜಾಗೃತಿ: ಕಾಸರಗೋಡು ಜಿಲ್ಲೆಯಲ್ಲಿ ಬಹುಮಂದಿ ಕನ್ನಡ ಭಾಷಿಕರು. ಆದರೆ ಕೇರಳ ರಾಜ್ಯಕ್ಕೆ ಸೇರ್ಪಡೆಗೊಂಡಿದೆ ಎಂಬ ಕಾರಣಕ್ಕೆ ಮಲಯಾಳವನ್ನು ಹೇರುವ ಪ್ರಕ್ರಿಯೆ ನಡೆದಿದೆ. ಈಚೆಗೆ ತೆರೆಕಂಡ ರಿಷಭ್ ಶೆಟ್ಟಿ ನಿರ್ದೇಶನದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಲನಚಿತ್ರ ಕನ್ನಡದ ಮೇಲಿನ ಮಲಯಾಳಿ ಭಾಷೆಯ ದಬ್ಬಾಳಿಕೆಯನ್ನು ಬಿಂಬಿಸಿತ್ತು. ಈ ಸಿನಿಮಾ ಎಲ್ಲೆಡೆ ಜನಮೆಚ್ಚುಗೆ ಗಳಿಸಿದ್ದು, ಕಾಸರಗೋಡಿನಲ್ಲಿ ಕನ್ನಡಕ್ಕೆ ಅನ್ಯಾಯ ಆದಾಗ ಜನ ಶೀಘ್ರವಾಗಿ ಸ್ಪಂದಿಸುವ ಸನ್ನಿವೇಶ ಸೃಷ್ಟಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.